ಪಡುಬಿದ್ರಿ: ಹಿರಿಯ ನಾಗರಿಕರು ರಸ್ತೆ ಸಂಚಾರದ ವೇಳೆ ಕಿರಿಯರ ಸಹಾಯ ಪಡೆದು ಸುರಕ್ಷತೆಗೆ ಗಮನಹರಿಸಿ. ಮನೆಯಲ್ಲಿರುವ ಕಿರಿಯರಿಗೆ ವಾಹನ ಚಲಾವಣೆ ವೇಳೆ ವಾಹನದ ಸರಿಯಾದ ದಾಖಲೆ ಪತ್ರಗಳನ್ನಿಟ್ಟುಕೊಂಡು ಜಾಗೃತರಾಗಿ ಸಂಚರಿಸುವಂತೆ ಎಚ್ಚರಿಕೆ ನೀಡಿ ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಪ್ರೊಬೆಶನರಿ ಎಸ್‌ಐ ಉದಯ ರವಿ ಸಲಹೆ ನೀಡಿದರು.
ಅವರು ಜೂ. 19ರಂದು ಪಡುಬಿದ್ರಿ ಗ್ರಾ. ಪಂ.ನ 3 ಮತ್ತು 4ನೇ ವಾರ್ಡ್‌ನ ಪೊಲೀಸ್ ಬೀಟ್ ಸಮಿತಿಯು ಗ್ರಾ. ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಮಾತನಾಡಿದರು.
ಮಳೆಗಾಲ ಸಮಯದಲ್ಲಿ ಕಳ್ಳತನ ನಡೆಯದಂತೆ ಮನೆ, ದೈವ – ದೇವಸ್ಥಾನಗಳ ಭದ್ರತೆಗೆ ಗಮನಹರಿಸು ವಂತೆ ಅಲ್ಲಿನ ಆಡಳಿತ ಮಂಡಳಿಗೆ ಸೂಚಿಸಬೇಕು. ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರು ನೆರೆಹೊರೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮನೆಯಲ್ಲಿನ ಕಿರಿಯರೊಂದಿಗೆ ಉತ್ತಮ ಬಾಂಧವ್ಯವನ್ನಿರಿಸಿಕೊಳ್ಳಬೇಕು. ಹಿರಿಯರಿಗಾಗಿ ಸಿಗುವ ಸರಕಾರದ ಯೋಜನೆಗಳ ಮಾಹಿತಿ ಪಡೆದುಕೊಳ್ಳ ಬೇಕು. ಮನೆ ಬಿಟ್ಟು ದೂರದೂರಿಗೆ ತೆರಳುವಾಗ ಪೊಲೀಸರು ಅಥವಾ ನಂಬಿಗಸ್ಥರಿಗೆ ಮಾಹಿತಿ ನೀಡಿ ಎಂದರು.
ಪ್ರತಿಯೊಂದು ಗ್ರಾ. ಪಂ. ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ಸಭೆ ನಡೆಯಬೇಕು. ಸರ್ಕಾರದಿಂದ ನೀಡಲ್ಪಡುವ ಯಾವುದೇ ರೀತಿಯ ಗುರುತು ಕಾರ್ಡ್‌ಗಳ ಬಗ್ಗೆ ನಿರ್ಲಕ್ಷ್ಯ ತಾಳದೆ, ಅವೆಲ್ಲವನ್ನು ಪಡೆದುಕೊಳ್ಳಿ ಎಂದು ಗ್ರಾ. ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್ ತಿಳಿಸಿದರು.
ಪಹಣಿ ಪತ್ರ ಹೊಂದಿದ ಪ್ರತಿಯೊಬ್ಬ ಕೃಷಿಕರು ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಹರಾಗಿದ್ದಾರೆ. ಜೂ. 25ರಿಂದ ಅದರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಪಿಡಿಒ ಪಂಚಾಕ್ಷರಿ ಸ್ವಾಮಿ ತಿಳಿಸಿದರು.
ಗ್ರಾ. ಪಂ. ಮಾಜಿ ಅಧ್ಯಕ್ಷೆ ನೇತ್ರಾವತಿ ಶೆಟ್ಟಿ, ಸದಸ್ಯರಾದ ಜಾನಕಿ, ರವೀಂದ್ರ, ಪೊಲೀಸ್ ಬೀಟ್ ಸಮಿತಿ ಮೇಲುಸ್ತುವಾರಿ ಅಧಿಕಾರಿ ಎಎಸ್‌ಐ ದಿವಾಕರ ಸುವರ್ಣ, ವಾರ್ಡ್ ಸಮಿತಿ ಪೊಲೀಸ್ ಸಿಬಂದಿ ಯೋಗೀಶ್ ಉಪಸ್ಥಿತರಿದ್ದರು.ಲೋಹಿತಾಕ್ಷ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.