Advertisement

ಪಡುಬಿದ್ರಿ: ಕಾರ್ಯಾಚರಿಸದ ಹಳ್ಳಿಗಳ ಪಶು ಚಿಕಿತ್ಸಾಲಯ

07:24 PM Dec 01, 2022 | Team Udayavani |

ಪಡುಬಿದ್ರಿ : ಪಶು ಸಂಗೋಪನ ಇಲಾಖಾ ಆದೇಶದನ್ವಯ ರಾಜ್ಯದೆಲ್ಲೆಡೆ ನ. 7ರಿಂದ ಪ್ರಾರಂಭಗೊಂಡಿದ್ದು ಡಿ. 7ರವರೆಗೆ ನಡೆಯುತ್ತಿರುವ ರಾಸುಗಳ ಕಾಲು ಬಾಯಿ ಜ್ವರದ ಲಸಿಕಾ ಅಭಿಯಾನದ ಕರ್ತವ್ಯನಿರ್ವಹಣೆಗೆ ಇಬ್ಬರು ಪಶು ಸಂಗೋಪನ ನಿರೀಕ್ಷಕರು, ಗ್ರಾಮೀಣ ಪಶು ಚಿಕಿತ್ಸಾ ಕೇಂದ್ರಗಳ ವೈದ್ಯರು, ಇಬ್ಬರು ಪಶು ವೈದ್ಯಾಧಿಕಾರಿಗಳನ್ನು ನೇಮಕ ಮಾಡಿರುವುದರಿಂದ ಪಲಿಮಾರಿನ ಪ್ರಾಥಮಿಕ ಪಶು ಚಿಕಿತ್ಸಾಲಯ, ಕಾಪು ತಾ| ಪಶು ವೈದ್ಯಕೀಯ ಆಸ್ಪತ್ರೆ, ಹಳ್ಳಿಗಳ ಪಶು ಚಿಕಿತ್ಸಾಲಯದಲ್ಲಿ ಸಿಬಂದಿ ಕೊರತೆಯಾಗಿ ಕಾರ್ಯಾಚರಿಸದಂತಾಗಿದೆ.

Advertisement

ಶಿರ್ವದಲ್ಲಿನ ಪಶು ವೈದ್ಯಾಧಿಕಾರಿ ಡಾ| ಅರುಣ್‌ ಕುಮಾರ್‌ ಹೆಗ್ಡೆ ಅವರು ಕಾಪು ತಾ| ಪಶು ವೈದ್ಯಾಧಿಕಾರಿ ಸೇವೆಯನ್ನೂ ನಿಭಾಯಿಸುತ್ತಿದ್ದಾರೆ. ಅವರೇ ಪಡುಬಿದ್ರಿಯ ಪಶು ವೈದ್ಯಕೀಯ ಆಸ್ಪತ್ರೆಯಲ್ಲೂ ನಿಯೋಜನೆಯಲ್ಲಿದ್ದಾರೆ. ಇನ್ನೋರ್ವ ಪಶು ವೈದ್ಯಾಧಿಕಾರಿ ಕಟಪಾಡಿ ಹಾಗೂ ಪಡುಬೆಳ್ಳೆ ಆಸ್ಪತ್ರೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಡಿಯ ಕಾಪು ತಾ| ನಲ್ಲಿ 29 ಹುದ್ದೆಗಳಿದ್ದು ಕೇವಲ ನಾಲ್ಕು ಹುದ್ದೆಗಳಷ್ಟೇ ಭರ್ತಿಯಾಗಿವೆ. ಇನ್ನುಳಿದ 25 ಹುದ್ದೆಗಳ ಗತಿಯೇ ಅಯೋಮಯವಾಗಿದೆ. ಸದ್ಯ ಇರುವ 2ವೈದ್ಯರು ಹಾಗೂ 2 ಮಂದಿ ನಿರೀಕ್ಷಕರು ತಾಲೂಕಿನ 5ಪಶು ಚಿಕಿತ್ರಾಲಯ ಹಾಗೂ 3 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳ ನಡುವೆ ಅತ್ತಿತ್ತ ಓಡಾಡಿಕೊಳ್ಳುತ್ತಲೇ, ಮೇಲಾಗಿ ಕೆಎಂಎಫ್‌ ಪಶು ವೈದ್ಯರ ಸಹಕಾರದೊಂದಿಗೆ ಇಲಾಖಾ ಕರ್ತವ್ಯಗಳನ್ನು ನಿರ್ವಹಿಸುತ್ತಿರುವರು. ತಾ| ಪಶು ವೈದ್ಯಧಿಕಾರಿ ಅರುಣ್‌ ಕುಮಾರ್‌ ಹೆಗ್ಡೆ ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, ಸಿಬಂದಿ ಕೊರತೆ ಇಲಾಖೆಯನ್ನು ಕಾಡುತ್ತಿದೆ. ಪಶು ವೈದ್ಯಾಧಿಕಾರಿಯಾಗಿ ಇಲಾಖಾ ಕರ್ತವ್ಯಗಳ ನಡುವೆ ವಿವಿಧ ಗ್ರಾಮಗಳ ಗ್ರಾಮಸಭೆಗೂ ಹಾಜರಾಗಬೇಕಿದೆ. ಸರಕಾರದಿಂದ 400 ಪಶು ವೈದ್ಯಾಧಿಕಾರಿಗಳ ನೇಮಕಾತಿಯು 2 ವರ್ಷಗಳೇ ಹಿಂದೆಯೇ ಆಗಿದ್ದರೂ ವಿಚಾರವು ನ್ಯಾಯಾಲಯದ ಮೆಟ್ಟಲೇರಿ ಕುಳಿತಿದೆ. ಪ್ಯಾರಾ ಸ್ಟಾಫ್‌ ನೇಮಕಾತಿಗಳು ನಡೆಯುತ್ತಿಲ್ಲ. ಸರಕಾರದ ಮಟ್ಟದಲ್ಲಿ ಈ ಪ್ರಕ್ರಿಯೆಗಳು ನಡೆಯಬೇಕಾಗಿದೆ.

ಇವೆಲ್ಲವುಗಳ ನಡುವೆ ರಾಸುಗಳ ಲಸಿಕೆ ಅಭಿಯಾನ ನಡೆಯಬೇಕಾಗಿರುವುದರಿಂದ ಕಾಪು ತಾಲೂಕಿನ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಗ್ರಾಹಕ ಸೇವೆಯಲ್ಲಿ ವ್ಯತ್ಯಾಸವಾಗುತ್ತಿವೆ ಎಂದು ತಿಳಿಸಿದ್ದಾರೆ. ನಾನಾ ಕಾರಣಗಳಿಂದಾಗಿಯೂ ರಾಸುಗಳ ಸಂಖ್ಯೆಯೂ ತಾ| ಮಟ್ಟದಲ್ಲಿ 2015ರ ಸೆನ್ಸಸ್‌ ಬಳಿಕ 2020ಕ್ಕೆ 40 ಶೇಕಡಾದಷ್ಟು ಇಳಿದಿವೆ. 2022ರ ಮಾಹಿತಿಯಂತೆ 2020ರ ಅನಂತರದಲ್ಲಿ 20 ಶೇಕಡಾದಷ್ಟು ರಾಸುಗಳು ಕಡಿಮೆ ಆಗಿರುವುದಾಗಿ ಡಾ| ಅರುಣ್‌ ಕುಮಾರ್‌ ವಿವರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next