Advertisement
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ “ಪದ್ಮಾವತಿ’ ಸಾಕಷ್ಟು ಕಾರಣಗಳಿಂದ ಸುದ್ದಿಯಲ್ಲಿದೆ. ಆ ಕಾರಣಗಳಲ್ಲಿ ಒಂದು, ನಟಿ ದೀಪಿಕಾ ಪಡುಕೋಣೆ ತೊಟ್ಟ ಆಭರಣಗಳು. ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದೇ ತಡ, ಫ್ಯಾಷನ್‌ಪ್ರಿಯರ ಬಾಯಲ್ಲಿ ಪದ್ಮಾವತಿಯದ್ದೇ ಗುಣಗಾನ. ರಾಣಿ ಪದ್ಮಿನಿ ಪಾತ್ರಕ್ಕೆಂದೇ ತನಿಷ್ಕ್ ಸಂಸ್ಥೆ ಈ ಆಭರಣಗಳ ವಿನ್ಯಾಸ ಮಾಡಿದ್ದು, 200 ನುರಿತ ಕುಶಲಕರ್ಮಿಗಳು ಈ ಆಭರಣಗಳನ್ನು ತಯಾರಿಸಲು ಬರೋಬ್ಬರಿ 600 ದಿನಗಳನ್ನು ತೆಗೆದುಕೊಂಡಿದ್ದಾರೆ!ವೈಭವೋಪೇತ ಆಭರಣಗಳು:
ರಾಣಿಹಾರ, ಚೋರ್ಕೆ ಸೆಟ್, ಬಳೆಗಳು, ಝಮ್ಕಿಗಳು, ರಾಜಸ್ಥಾನಿ ಬೋರ್ಲಾ, ಬೈತಲೆ ಬೊಟ್ಟು, ಮೂಗುತಿ, ಹಾಥ್ ಫೂಲ್ ಮತ್ತು ಬಗೆ-ಬಗೆಯ ನೆಕ್ಲೆಸ್‌ಗಳು ತುಂಬ ವಿಭಿನ್ನ ಹಾಗೂ ವಿಶಿಷ್ಟವಾಗಿವೆ. ಹಿಂದಿನ ಕಾಲದಲ್ಲಿ ರಾಣಿ, ಮಹಾರಾಣಿಯರು ತೊಡುತ್ತಿದ್ದ ನೆಕ್ಲೆಸ್‌ಗಳನ್ನೇ ಪ್ರೇರಣೆಯನ್ನಾಗಿಸಿ, ವಿನ್ಯಾಸ ಮಾಡಲಾದ ರಾಣಿಹಾರ, ಚೋರ್ಕೆ ಸೆಟ್ ಮತ್ತು ಇತರ ಸರಗಳು ರಾಜಸ್ಥಾನದ ವೈಭವವನ್ನು ಎತ್ತಿ ಹಿಡಿಯುತ್ತವೆ. ಕುತ್ತಿಗೆಯಿಂದ ರವಿಕೆಯ ತುದಿಯ (ಅಂಚು) ವರೆಗೆ ಮುಚ್ಚುವಷ್ಟು ದೊಡ್ಡ ಹಾಗೂ ಅಗಲವಾಗಿದೆ ಈ ಭಾರೀ ನೆಕ್‌ಲೇಸುಗಳು! ಇದರಿಂದಾಗಿಯೇ ಮೈ ತುಂಬಾ ಒಡವೆಗಳೇ ಇವೆ ಎಂಬಂತೆ ಭಾಸವಾಗುತ್ತದೆ!
ರಜಪೂತ ರಾಣಿಯರ ವೇಷಭೂಷಣವನ್ನು ಗಮನದಲ್ಲಿಟ್ಟುಕೊಂಡೇ ಅಮೂಲ್ಯ ರತ್ನಗಳಿಗೆ ಹೋಲುವ ಕಲ್ಲುಗಳನ್ನು ಈ ಚಿನ್ನಾಭರಣಗಳಲ್ಲಿ ಬೆಸೆಯಲಾಗಿದೆ. ಸರಿಯಾಗಿ ಗಮನಿಸಿದರೆ ನಟಿ ಧರಿಸಿರುವ ಆಭರಣಗಳಲ್ಲಿ ಮುತ್ತಿನ ಬಳಕೆ ಕಡಿಮೆ. ಒಂದೆರಡು ಸರಗಳಲ್ಲಿ ಮಾತ್ರ ಮುತ್ತು ಬಳಸಲಾಗಿದೆ. ಮಿಕ್ಕ ಎಲ್ಲಾ ಆಭರಣಗಳಲ್ಲಿ ಚಿನ್ನ, ಲೋಹ, ಗಾಜು ಮತ್ತು ರತ್ನಗಳ ಬಳಕೆಯೇ ಹೆಚ್ಚು. ಕೈಯ ಬಳೆ ಗಿಲಕ್ಕು:
ರಾಜಸ್ಥಾನದ ದಪ್ಪನೆಯ ಲೋಹದ ಬಳೆಗಳಾದ ಕಡಗ, ಬಂಗಾಳಿ ಶಾಖಾ ಪೋಲಾ (ಕೆಂಪು, ಬಿಳಿ ಬಳೆಗಳು) ದೀಪಿಕಾಳ ಕೈಯಲ್ಲಿ ಸದ್ದು ಮಾಡುತ್ತಿವೆ. ರಾಜಸ್ಥಾನದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯಲ್ಲಿ ಉರುಟಾದ, ಗಂಟೆಯ ಆಕಾರದ ಬೈತಲೆ ಬೊಟ್ಟು ಕೂಡ ಒಂದು. ಇದನ್ನು ಬೋರ್ಲಾ ಎಂದು ಕರೆಯುತ್ತಾರೆ. ಎಲ್ಲ ಪೋಸ್ಟರ್‌ಗಳಲ್ಲಿಯೂ ನಟಿಯ ಹಣೆ ಮೇಲೆ ಇದು ಕಾಣಿಸುತ್ತದೆ.
ಹಾಥ್ ಫೂಲ್ ಕಮಾಲ್ ನಟಿಯ ಆಭರಣಗಳಲ್ಲಿ ಇನ್ನೊಂದು ಪ್ರಮುಖ ವಸ್ತು ಎಂದರೆ ಅದು ಹ್ಯಾಂಡ್ ಹಾರ್ನೆಸ್. ಇದನ್ನು ಹಾಥ್ ಫೂಲ… ಎಂದು ಕರೆಯುತ್ತಾ ರೆ. ಬೆರಳ ಉಂಗುರಗಳು ಮತ್ತು ಬಳೆಯ ನಡುವೆ ಚಿಕ್ಕ-ಚಿಕ್ಕ ಸರಪಳಿಯಂತಿರುವ ಜೋಡಣೆಯೇ ಈ ಹಾಥ್ ಫೂಲ್ ಕೆಲವು ಕಡೆ ಬಳೆಯ ಬದಲಿಗೆ ಬ್ರೇಸ್ ಲೆಟ್ ಬಳಸಲಾಗಿದೆ. ಕೈಯ ಮೇಲೆ ಹೂವಿನಂತೆ ಕಾಣಿಸುವುದರಿಂದ ಈ ಆಭರಣಕ್ಕೆ ಹಾಥ್ ಫೂಲ್ (ಕೈ- ಹೂವು) ಎಂಬ ಹೆಸರು. ಇದರ ಜೊತೆಗೆ ನಟಿಯ ಹಣೆ ಮೇಲಿರುವ ಬೈತಲೆ ಬೊಟ್ಟು ಮತ್ತು ಪಟ್ಟಿ ಕೇಶಾಲಂಕಾರಕ್ಕೆ ಹೊಸ ರೂಪ ನೀಡಿದೆ. ಬೈತಲೆ ಬೊಟ್ಟಿಗೆ ಮಾಂಗ್ ಟೀಕಾ ಎಂದರೆ, ಹಣೆ ಪಟ್ಟಿಗೆ ಮಾಥಾ ಪಟ್ಟಿ ಎನ್ನುತ್ತಾರೆ. ರಾಜಸ್ಥಾನದ ಪ್ರಸಿದ್ಧ ಮೂಗುತಿ ನಥ್, ನಟಿಯ ಆಭರಣಗಳಲ್ಲಿ ಒಂದು. ಮೂಗು ಬೊಟ್ಟಿನ ಬದಲಿಗೆ ಬಳೆಯಾಕಾರದ ಮೂಗುತಿ ಬಳಸಲಾಗಿದೆ. ಭರ್ಜರಿ ಒಡವೆಗಳು ಇರುವ ಕಾರಣ, ದೀಪಿಕಾ ಥೇಟ್ ಮಹಾರಾಣಿಯಂತೆಯೇ ಕಂಗೊಳಿಸುತ್ತಿದ್ದಾರೆ.
Related Articles
ಆಭರಣಗಳು ಎಷ್ಟು ಅದ್ದೂರಿಯಾಗಿವೆಯೋ, ದೀಪಿಕಾಳ ಮೇಕ್‌ಅಪ್ ಅಷ್ಟೇ ಸರಳವಾಗಿದೆ. ದಪ್ಪನೆಯ ಉನಿಬ್ರೌ (ಎರಡು ಹುಬ್ಬುಗಳು ಹಣೆ ಬೊಟ್ಟು ಇಡುವ ಜಾಗದಲ್ಲಿ ಸೇರಿ ಒಂದಾಗಿರುವುದು) ಬಿಡಿಸಲಾಗಿದೆ. ಮಿತವಾಗಿ ಕಾಡಿಗೆ (ಕಣ್ಣು ಕಪ್ಪು) ಹಚ್ಚಿ, ಬೈತಲೆ ಬೊಟ್ಟಿನ ಕೆಳಗೆ ಚಿಕ್ಕದಾದ, ಚೊಕ್ಕದಾದ ಕೆಂಪು ಬೊಟ್ಟು ಇಡಲಾಗಿದೆ. ತುಟಿಗೆ ಬಣ್ಣ ಹಚ್ಚಿಯೇ ಇಲ್ಲ ಎನ್ನುವಷ್ಟು ಕಡಿಮೆ ಲಿಪ್‌ಸ್ಟಿಕ್. ಆಭರಣಗಳೇ ಮಾತನಾಡುವಾಗ ಮೇಕ್‌ಅಪ್ ಯಾಕೆ ಬೇಕು ಅನ್ನುವಂತೆ, ದೀಪಿಕಾ ನ್ಯಾಚುರಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಅದಿತಿಮಾನಸ ಟಿ.ಎಸ್.