Advertisement

“ಪದ್ಮವಿಭೂಷಣ ಸಮಸ್ತ ಭಕ್ತರಿಗೆ ಭೂಷಣ’; ಪೇಜಾವರ ಶ್ರೀ ಪದ್ಮವಿಭೂಷಣ ಕೃಷ್ಣಾರ್ಪಣ

11:02 PM Nov 11, 2021 | Team Udayavani |

ಉಡುಪಿ: ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಗುಡಿಗೋಪುರ ಮಾತ್ರವಲ್ಲದೆ ಭಕ್ತ ವೃಂದದ ಹೃದಯದಲ್ಲಿ ಸಾಕ್ಷಾತ್ಕರಿಸಿ ಕೊಂಡಿದ್ದರು. ಅವರಿಗೆ ಬಂದಿರುವ ಪದ್ಮವಿಭೂಷಣ ಪುರಸ್ಕಾರ ಸಮಸ್ತ ಭಕ್ತರನ್ನು ಪ್ರತಿನಿಧಿಸುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬಣ್ಣಿಸಿದರು.

Advertisement

ರಥಬೀದಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪದ್ಮವಿಭೂಷಣ ಪ್ರಶಸ್ತಿ ಸ್ವಾಗತ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಗುರುಗಳಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದಕ್ಕೆ ನಾಡಿನ ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಈ ಮೂಲಕ ಪದ್ಮವಿಭೂಷಣ ಪ್ರಶಸ್ತಿಗೂ ವಿಶೇಷ ಗೌರವ ಸಂದಿದೆ. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ರಾಷ್ಟ್ರಪತಿಯವರು ಕೂಡ ಶ್ರೀ ವಿಶ್ವೇಶತೀರ್ಥರನ್ನು ಸ್ಮರಿಸಿ ಕೊಂಡರು ಎಂದು ಹೇಳಿದರು.
ಹಿಂದೂ ಸಮಾಜಕ್ಕೆ ಸ್ಫೂರ್ತಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ,ಶ್ರೀ ವಿಶ್ವೇಶತೀರ್ಥರಿಗೆ ಸಂದಿರುವ ಈ ಪ್ರಶಸ್ತಿಯಿಂದ ಇಡೀ ಹಿಂದೂ ಸಮಾಜ ಮತ್ತು ಸಾಧಕರು ಸ್ಫೂರ್ತಿ ಪಡೆಯಬೇಕು. ಸಮಾಜಕ್ಕೆ ನಿಸ್ವಾರ್ಥಭಾವದಿಂದ ಕೊಡುಗೆ ನೀಡಿ ದಾಗ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಹಿಂದೂ ಸಮಾಜ ಇಂದು ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದೆ. ಇವೆಲ್ಲದಕ್ಕೂ ಉತ್ತರ ಕಂಡುಕೊಳ್ಳಬೇಕು. ಶ್ರೀ ವಿಶ್ವೇಶ ತೀರ್ಥರ ಜೀವನ, ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿದೆ ಎಂದರು.

ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಶಾಸಕರಾದ ಕೆ. ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ವಾಸುದೇವ ಭಟ್‌ ಪೆರಂಪಳ್ಳಿ ಮಾತನಾಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌ ಉಪಸ್ಥಿತರಿದ್ದರು. ಮುರಳೀ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು. ರತ್ನಕುಮಾರ್‌ ವಂದಿಸಿದರು.

Advertisement

ಸಂಸ್ಕೃತ ಕಾಲೇಜಿನಲ್ಲಿ ಸ್ವಾಗತ
ಮೆರವಣಿಗೆಗೂ ಮೊದಲು ಸಂಸ್ಕೃತ ಮಹಾವಿದ್ಯಾಲಯದಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಪಾದರ ಭಾವಚಿತ್ರದ ಮುಂದೆ ಇರಿಸಿ ಆರತಿ ಬೆಳಗಲಾಯಿತು. ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌, ಗಣ್ಯರಾದ ಯಶಪಾಲ್‌ ಸುವರ್ಣ, ಎಂ.ಬಿ. ಪುರಾಣಿಕ್‌, ಭುವನೇಂದ್ರ ಕಿದಿಯೂರು, ಪೇಜಾವರ ಮಠದ ದಿವಾನರಾದ ರಘುರಾಮಾಚಾರ್ಯ ಮೊದಲಾದವರು ಪದ್ಮಭೂಷಣ ಪ್ರಶಸ್ತಿಯನ್ನು ಸ್ವಾಗತಿಸಿದರು.

ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿ ಚಿನ್ಮಯ ಭಟ್‌ ರಂಗವಲ್ಲಿ ಯಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರವನ್ನು ರಚಿಸಿದರು.

ರಾಷ್ಟ್ರಪತಿ ಕೋವಿಂದ್‌ ಬಂದಿಳಿದ ಸ್ಥಳದಲ್ಲಿ…
ರಾಷ್ಟ್ರಪತಿ ರಮಾನಾಥ ಕೋವಿಂದ್‌ ಅವರು 2018ರ ಡಿ. 27ರಂದು ಉಡುಪಿಗೆ ಬಂದ ಸಂದರ್ಭ ಪೇಜಾವರ ಮಠದ ಎದುರು ಇಳಿದು ಮಠದ ಒಳಗೆ ಶ್ರೀವಿಶ್ವೇಶ ತೀರ್ಥ ಶ್ರೀಪಾದರನ್ನು ಗೌರವಿಸಿದ್ದರು. ಅವರು ಎಲ್ಲಿ ಇಳಿದರೋ ಅದೇ ಪೇಜಾವರ ಮಠದ ಮುಂಭಾಗ ರಾಷ್ಟ್ರಪತಿ ಕೋವಿಂದ್‌ ಅವರಿಂದ ಪಡೆದ ಪದ್ಮವಿಭೂಷಣ ಪ್ರಶಸ್ತಿಗೆ ಸ್ವಾಗತ ಸಮಾರಂಭ ಮೂರು ವರ್ಷಗಳ ಬಳಿಕ ನ. 11ರಂದು ಜರಗಿತು. ಈ ಎರಡೂ ದಿನವೂ ಗುರುವಾರ ಘಟಿಸಿರುವುದು ವಿಶೇಷ.

ಗುಣಕ್ಕೆ ಮತ್ಸರವಿಲ್ಲ: ಮೋದಿಯ ಬಣ್ಣಿಸಿದ ಪ್ರಮೋದ್‌
ಉಡುಪಿ: ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಪೇಜಾವರ ಶ್ರೀ ಪದ್ಮವಿಭೂಷಣ ಪ್ರಶಸ್ತಿ ಸ್ವಾಗತ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಹಾಡಿ ಹೊಗಳಿದರು. ಹಿಂದೆಲ್ಲ ಅರ್ಜಿ ಹಾಕಿ ಪ್ರಶಸ್ತಿ ಪಡೆಯುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ನೈಜ ಸಾಧಕ ರನ್ನು ಹುಡುಕಿ ಪ್ರಶಸ್ತಿ ನೀಡುತ್ತಿದೆ. ಪಕ್ಷ ಯಾವುದಾದರೇನು? ಗುಣಕ್ಕೆ ಮತ್ಸರವಿಲ್ಲ, ವಿಪಕ್ಷದಲ್ಲಿದ್ದರೂ ಸರಕಾರದ ಒಳ್ಳೆಯ ಗುಣಗಳನ್ನು ಮೆಚ್ಚಿಕೊಳ್ಳುತ್ತೇನೆ ಎಂದರು.

ವಿಶ್ವೇಶರತ್ನ
ಶ್ರೀ ವಿಶ್ವೇಶತೀರ್ಥರು ಎಲ್ಲದರಲ್ಲಿಯೂ ಪೂರ್ಣರಾಗಿದ್ದರು. ಪಕ್ಷಾತೀತ, ಧರ್ಮಾತೀತರಾಗಿದ್ದರು. ಶ್ರೀಗಳು 8ನೇ ವಯಸ್ಸಿನಲ್ಲಿ ಇದ್ದಾಗ ಸನ್ಯಾಸ ದೀಕ್ಷೆ ಸಂದರ್ಭದಲ್ಲೇ ಶ್ರೀಕೃಷ್ಣ ದೇವರು ವಿಶ್ವೇಶರತ್ನ ಪ್ರಶಸ್ತಿಯನ್ನು ನೀಡಿಯಾಗಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ಭಾರತ ರತ್ನವೂ ಬರಲಿ
ಇದು ಆಸ್ತಿಕ ಸಮಾಜಕ್ಕೆ ಸಂದ ಪ್ರಶಸ್ತಿ, ಪದ್ಮದಂತ ವ್ಯಕ್ತಿತ್ವ ಶ್ರೀ ವಿಶ್ವೇಶತೀರ್ಥ ಶ್ರೀಪಾದರದ್ದಾಗಿತ್ತು. ಶುಭ್ರ ಮತ್ತು ಸ್ವತ್ಛರಾಗಿದ್ದರು. ಅವರಿಗೆ ಭಾರತ ರತ್ನವೂ ಬರಲಿ ಎಂದು ಸೋದೆ ಮಠದ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.

ಚಿತ್ರ: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next