ಬೀದರ್ : ಬೆಳ್ಳಿ ಕುಸರಿಯ ಬಿದ್ರಿ ಕಲೆಯನ್ನು ದೇಶ ವಿದೇಶದಲ್ಲಿ ಖ್ಯಾತಿಗೊಳಿಸಿರುವ ಬೀದರನ ಬಿದ್ರಿ ಕಲಾವಿದ ಶಾಹ ರಶೀದ್ ಅಹ್ಮದ್ ಖಾದ್ರಿ ಅವರು ಕೇಂದ್ರ ಸರ್ಕಾರದಿಂದ ಕೊಡಮಾಡುವ 2023 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಗರದ ಸಿದ್ದಿ ತಾಲೀಮ್ ನಿವಾಸಿಯಾಗಿರುವ ರಶೀದ್ ಅಹ್ಮದ್ ಖಾದ್ರಿ (78) ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದು, ತಂದೆಯ ವಿರೋಧದ ನಡುವೆಯೂ ಬಿದ್ರಿ ಕಲೆಯತ್ತ ಆಕರ್ಷಿತರಾಗಿ, ಆ ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಈ ಐತಿಹಾಸಿಕ ಕ್ರಾಫ್ಟ್ ಅವರನ್ನು ದೇಶ- ವಿದೇಶದಲ್ಲಿ ಪರಿಚಯಿಸುವುದರ ಜತೆಗೆ ಇಂದು ಪದ್ಮಶ್ರೀ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುವಂತೆ ಮಾಡಿದೆ.
ಶಿಲ್ಪಗುರು ಪ್ರಶಸ್ತಿ ವಿಜೇತರಾದ ಖಾದ್ರಿ ಅವರು ಬಿದ್ರಿ ಕಲೆಗಾಗಿ ಖಾದ್ರಿ ಜೀವನ ಮುಡುಪಾಗಿಟ್ಟಿದ್ದಾರೆ. ಜತೆಗೆ, ಜಿಲ್ಲೆಯ ಹಲವರಿಗೆ ಬಿದ್ರಿ ಕಲೆಯ ತರಬೇತಿ ನೀಡಿ ಬದುಕು ರೂಪಿಸಿದ್ದಾರೆ.
ದೆಹಲಿಯಲ್ಲಿ 2011ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಖಾದ್ರಿ ಅವರು ಕರ್ನಾಟವನ್ನು ಪ್ರತಿನಿಧಿಸಿ ಪ್ರದರ್ಶಿಸಿದ ಬಿದ್ರಿ ಕಲಾಕೃತಿಯ ಟ್ಯಾಬ್ಲೋಗೆ ಎರಡನೇ ಸ್ಥಾನ ಲಭಿಸಿತ್ತು. ಖಾದ್ರಿ ಅವರು ಬೊಸ್ಟನ್ (ಅಮೆರಿಕಾ), ರೋಮ್ (ಇಟಲಿ), ಸಿಂಗಾಪುರ, ಬಾರ್ಸಿಲೋನಾ (ಸ್ಪೇನ್), ಬೆಹರೀನ್, ಮಸ್ಕತ್ (ಓಮಾನ್) ದೇಶಗಳಲ್ಲಿ ಭಾತರವನ್ನು ಪ್ರತಿನಿಧಿಸಿ, ಬಿದ್ರಿ ಕಲೆಯನ್ನು ಪ್ರದರ್ಶಿಸಿದ್ದಾರೆ.
Related Articles
ಖಾದ್ರಿ ಅವರು ಈವರೆಗೆ ಶಿಲ್ಪ ಗುರು ಅವಾರ್ಡ್ (2012), ನ್ಯಾಶನಲ್ ಅವಾರ್ಡ್ (1988), ಸ್ಟೇಟ್ ಅವಾರ್ಡ್ (1984), ಸುವರ್ಣ ಕರ್ನಾಟಕ ರಾಜ್ಯೋತ್ಸವ ಅವಾರ್ಡ್ (2006), ಗ್ರೇಟ್ ಇಂಡಿಯನ್ ಅಚಿವರ್ಸ್ ಅವಾರ್ಡ್ (2004) ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.
ಏನಿದು ಬಿದ್ರಿ ಕಲೆ ?
ಕಣ್ಣಿಗೆ ಮುದ ನೀಡುವ ವಿಶ್ವವಿಖ್ಯಾತ ಬಿದ್ರಿ ಕಲೆಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ. ಅಲಂಕಾರಿಕೆ, ಉಡುಗರೆಯಾಗಿ ನೀಡಲು ಸೈ ಎನಿಸಿಕೊಂಡಿರುವ ಕಲಾಕೃತಿಗಳಿಗೆ ಮನ ಸೋಲದವರೇ ಇಲ್ಲ. ಬೀದರನ ಬಹುಮನಿ ಕೋಟೆಯಲ್ಲಿ ಸಿಗುವ ವಿಶಿಷ್ಟ ಮಣ್ಣಿನ ಜತೆಗೆ ಬೆಳ್ಳಿ, ಸತುವು ಹಾಗೂ ತಾಮ್ರವನ್ನು ಬಳಸಿ ಈ ಬಿದ್ರಿ ಕಲಾಕೃತಿಗಳನ್ನು ತಯ್ಯಾರಿಸುತ್ತಾರೆ. ಬಿದ್ರಿ ಕಲೆಯನ್ನೇ ನೆಚ್ಚಿಕೊಂಡಿರುವ ಅಂದಾಜು 500ಕ್ಕೂ ಹೆಚ್ಚು ಕರಕುಶಲ ಕರ್ಮಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳು ಬೀದರನಲ್ಲಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ನನ್ನ ಜೀವನದ ಕನಸಿನ ಪ್ರಶಸ್ತಿಯಾಗಿದ್ದು, ಇದನ್ನು ಬೀದರ ಜನರಿಗೆ ಅರ್ಪಿಸುತ್ತೆನೆ. ಬಿದ್ರಿ ಕಲೆಯಿಂದ ನನಗೆ ಹಲವು ಪ್ರಶಸ್ತಿ ಸಮ್ಮಾನಗಳು ದೊರತಿವೆ. ಹಲವು ದೇಶಗಳಲ್ಲಿ ಕಲೆಯನ್ನು ಪ್ರದರ್ಶಿಸಿದ ಹೆಮ್ಮೆ ನನಗಿದೆ ಎಂದು ಶಾಹ ರಶೀದ್ ಅಹ್ಮದ್ ಖಾದ್ರಿ ಸಂತಸ ಹಂಚಿಕೊಂಡಿದ್ದಾರೆ.