Advertisement
ಇದು ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ 82ರ ಹಿರಿಯಜ್ಜಿ ಅಂಕೋಲಾದ ತುಳಸಿ ಗೌಡ ಅವರ ಮನದಿಚ್ಛೆಯಾಗಿತ್ತು. ಅದರಂತೆ ಶನಿವಾರ ಬೆಳಗ್ಗೆ ಹರೇಕಳ ಹಾಜಬ್ಬ ಆವರ ಮನೆಗೆ ತನ್ನ ಕುಟುಂಬದ ಮೂವರು ಸದಸ್ಯರೊಂದಿಗೆ ಆಗಮಿಸಿದ ತುಳಸಿ ಅವರು ಹಾಜಬ್ಬರ ಮನೆಗೆ ಬಳಿಕ ಹಾಜಬ್ಬರ ಸರಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಕಳೆದುದಲ್ಲದೆ ಕಿಂಚಿತ್ ದೇಣಿಗೆ ನೀಡುವ ಮೂಲಕ ಧನ್ಯತೆ ಮೆರೆದರು.
Related Articles
Advertisement
ತುಳಸಿ ಗೌಡ ನೀಡಿದ ದೇಣಿಗೆ ಸ್ವೀಕರಿಸಿ ಮಾತನಾಡಿದ ಹಾಜಬ್ಬ, ನನಗೆ ಇದು ಅತ್ಯಪೂರ್ವ ಕ್ಷಣ. ಹಿರಿಯಾಕೆ ತುಳಸಿ ಗೌಡರು ನಮ್ಮ ಮನೆ ಹಾಗೂ ಶಾಲೆಗೆ ಬಂದಿರುವುದು ಸಂತಸ ತಂದಿದೆ. ಅವರು ನೀಡಿದ ಮೊತ್ತವನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಇಲ್ಲಿಗೆ ಪದವಿ ಪೂರ್ವ ಕಾಲೇಜು ಮಂಜೂರುಗೊಳ್ಳುವ ಆಶಯ ಬೇಗನೆ ಈಡೇರಲಿ ಎಂದರು.
“ವೃಕ್ಷಮಾತೆ’ಯ ಆಶೀರ್ವಾದ :
ಶಾಲೆಗೆ ಆಗಮಿಸಿದ ತುಳಸಿ ಗೌಡ ಅವರಿಗೆ ವಿದ್ಯಾರ್ಥಿಗಳು ಸಂಭ್ರಮದ ಸ್ವಾಗತ ನೀಡಿದರು. ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠ ಹಾಗೂ ಭಕ್ತರು ಸಂಗ್ರಹಿಸಿ ನೀಡಿದ್ದ ದೇಣಿಗೆಯಲ್ಲಿ ಒಂದು ಪಾಲನ್ನು ತುಳಸಿ ಗೌಡ ಅವರಿಗೆ ಹಾಜಬ್ಬರ ಶಾಲೆಗೆ ದೇಣಿಗೆಯಾಗಿ ನೀಡಿದಾಗ ಹಾಜಬ್ಬ ಸ್ವೀಕರಿಸಿ ಕಾಲು ಮುಟ್ಟಿ ನಮಸ್ಕರಿಸಿದರು. ತುಳಸಿ ಅವರು ಹಾಜಬ್ಬರ ತಲೆಗೆ ಕೈಇರಿಸಿ ಆಶೀರ್ವದಿಸಿದರು. ಬಳಿಕ ಮಾತನಾಡಿದ ತುಳಸಿ, ಶಾಲೆಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಸರಕಾರ ಹಾಜಬ್ಬರ ಪದವಿ ಪೂರ್ವ ಕಾಲೇಜು ತೆರೆಯುವ ಆಸೆಯನ್ನು ಈಡೇರಿಸಬೇಕು ದಾನಿಗಳು ಅವರನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಗಿಡ ನೆಡುವ ಮೂಲಕ ಪರಿಸರ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.