ಪದ್ಯಾಣ ಜಯರಾಮ ಭಟ್ ತೆಂಕುತಿಟ್ಟು ಹಿಮ್ಮೇಳದಲ್ಲಿ ಅಗ್ರಪಂಕ್ತಿಯ ಮದ್ದಳೆ ವಾದಕ. ತನ್ನದೇ ಆದ ಶೈಲಿಯಲ್ಲಿ ಭಾಗವತರ ಮನೋಭಾವವನ್ನು ಅರಿತು ನುಡಿಸಬಲ್ಲ ಕಲಾವಿದ. ಭಾಗವತಿಕೆಗೂ ಸೈ ಎನಿಸಿರುವವರು.
ಕಳೆದ ಒಂದು ದಶಕದಿಂದ ತೆಂಕುತಿಟ್ಟಿನ ಹೊಸನಗರ, ಎಡನೀರು, ಹನುಮಗಿರಿ ಮೇಳದಲ್ಲಿ ಅಣ್ಣ ಖ್ಯಾತ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ಅವರಿಗೆ ಮದ್ದಳೆಗಾರನಾಗಿ ಸಾಥ್ ನೀಡುತ್ತಿರುವ ಅವರ ಕೈ ಚಳಕಕ್ಕೆ ಗೌರವಯುತ ಸ್ಥಾನವಿದೆ. ಯಕ್ಷಗಾನದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ತಿರುಗಾಟದ ಅನುಭವವನ್ನು ಹೊಂದಿರುವ ಪದ್ಯಾಣ ಜಯರಾಮ ಭಟ್ ಅವರಿಗೆ 2018ನೇ ಸಾಲಿನ ಪ್ರತಿಷ್ಠಿತ “ಅರಸಂಕಲ ಕಲಾ ಪ್ರಶಸ್ತಿ’ ಸಂದಿದೆ.
ಮಂಜೇಶ್ವರ ಸಮೀಪದ ಸಂತಡ್ಕ ಅರಸು ಸಂಕಲ ದೈವ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ವಿಜಯ ಫ್ರಂಡ್ಸ್ ಕ್ಲಬ್ ಸಂತಡ್ಕ ಇದರ ವಾರ್ಷಿಕೋತ್ಸವ ಸಂದರ್ಭ ಜ.19ರಂದು ರಾತ್ರಿ ಹನುಮಗಿರಿ ಮೇಳದ ಯಕ್ಷಗಾನ ಪ್ರದರ್ಶನ ವೇದಿಕೆಯಲ್ಲಿ ಪ್ರಸಸ್ತಿ ಪ್ರದಾನ ನಡೆಯಿತು.
ತಿರುಮಲೇಶ್ವರ ಭಟ್ – ಸಾವಿತ್ರಮ್ಮ ದಂಪತಿಯ ಪುತ್ರ ಜಯರಾಮ್ ಭಟ್. ಬಿ.ಕಾಂ. ಪದವೀಧರರಾಗಿದ್ದರೂ ಅವರನ್ನು ಕೈಬೀಸಿ ಕರೆದದ್ದು ಯಕ್ಷಗಾನ. ಅಜ್ಜ ಪುಟ್ಟು ನಾರಾಯಣ ಖ್ಯಾತ ಭಾಗವತರು, ತಂದೆ ತಿರುಮಲೇಶ್ವರ ಭಡ್ ಕೂಡಾ ಕಲಾವಿದರು.ಸಹೋದರ ಪದ್ಯಾಣ ಗಣಪತಿ ಭಟ್ ಕೂಡ ಭಾಗವತರು. ಹೀಗೆ ಕಲಾವಿದರ ಮನೆಯ ವಾತಾವರಣದಲ್ಲಿ ಬೆಳೆದ ನಾರಾಯಣ ಭಟ್ ಮದ್ದಳೆ ವಾದನ ಕೇಳಿ-ನೋಡಿ ಅಭ್ಯಸಿಸಿಕೊಂಡವರು. ಎಡನೀರು ಶ್ರೀಗಳಿಂದ ಒಂದು ವರ್ಷ ಭಾಗವತಿಕೆ ಕಲಿತವರು. ಶ್ರೀಗಳಿಗೆ ಭಾಗವತ ಶಿಷ್ಯ ಬಹುಶಃ ಇವರೋರ್ವರೇ.
ಎರಡು ವರ್ಷ ಗಲ್ಫ್ ಉದ್ಯೋಗ , ಮೂರು ವರ್ಷ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸಿದ ಜಯರಾಮ್ ಭಟ್ ಮುಂದೆ ಸುದೀರ್ಘ ಕಾಲ ಭಾಗವತಿಕೆ ಹಾಗೂ ಮದ್ದಳೆಗಾರನಾಗಿ ಕಲಾ ಸೇವೆಗೈಯುತ್ತಾ ಬಂದಿದ್ದಾರೆ. ಕರ್ನಾಟಕ ಮೇಳದಲ್ಲಿ ಒಂದು ವರ್ಷ, ಕದ್ರಿ ಮೇಳದಲ್ಲಿ ಎರಡು ವರ್ಷ, ಕುಂಟಾರು ಮೇಳದಲ್ಲಿ ಎರಡು ವರ್ಷ ಹೀಗೆ ಐದು ವರ್ಷಗಳ ಕಾಲ ಭಾಗವತರಾಗಿದ್ದರು. ಮುಂದೆ ಮಂಗಳಾದೇವಿ ಮೇಳದಲ್ಲಿ ಎರಡು ವರ್ಷ ಭಾಗವತನಾಗಿ ಮತ್ತು ಮದ್ದಳೆಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಅನಂತರ ಎಡನೀರು, ಹೊಸನಗರ ಮೇಳಗಳಿಗೆ ಹೋಗಿ ಪ್ರಸ್ತುತ ಹನುಮಗಿರಿ ಮೇಳದಲ್ಲಿ ಮದ್ದಳೆಗಾರನಾಗಿ ದುಡಿಯುತ್ತಿದ್ದಾರೆ.
ದಾಮೋದರ ಮಂಡೆಚ್ಚ, ಪದ್ಯಾಣ ಗಣಪತಿ ಭಟ್, ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಕಡತೋಕ ಮಂಜುನಾಥ ಭಾಗವತ ಹಾಗೂ ಈಗಿನ ಎಲ್ಲಾ ಭಾಗವತರಿಗೆ ಸಾಥ್ ನೀಡಿದ ಜಯರಾಮ್ ಭಟ್ ರಾಗಗಳ ಸಂಚಾರ, ಸಂದಭೋಚಿತ ರಾಗಗಳ ಆಯ್ಕೆ ಕುರಿತು ಇದಮಿತ್ಥಂ ಎಂದು ಹೇಳಬಲ್ಲ ಅನುಭವಿ. ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಮಿತ ಮಾತುಗಾರನಾಗಿದ್ದುಕೊಂಡು ಆಸಕ್ತರಿಗೆ ಮಾತ್ರ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂದಿನ ಅಬ್ಬರದ ಪ್ರಚಾರ ಯುಗದಲ್ಲಿ ಸದ್ದಿಲ್ಲದೆ ಶ್ರದ್ಧೆಯಿಂದ ಕಲಾಸೇವೆಗೈಯುತ್ತಿರುವ ಕಲಾಜೀವಿಗೆ ಅರಸಂಕಲ ಪ್ರಶಸ್ತಿ ಲಭಿಸಿರುವುದು ಅರ್ಹರಿಗೆ ದೊರೆತ ಮನ್ನಣೆಯೇ ಸರಿ.
ಯೋಗೀಶ ರಾವ್