ವರದಿ : ಯಮನಪ್ಪ ಪವಾರ
ಸಿಂಧನೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೇರಳವಾಗಿ ಭತ್ತ ಬೆಳೆಯಲಾಗುತ್ತಿದ್ದರೂ ಬೆಂಬಲ ಬೆಲೆಯಡಿ ಖರೀದಿಸುವಲ್ಲಿ ಯಶಸ್ಸನ್ನೇ ಕಂಡಿಲ್ಲ. ಖರೀದಿ ಕೇಂದ್ರಗಳು ತೆರೆದರೂ ಬೆದರಗೊಂಬೆಗಳೆಂಬ ಶಾಪಕ್ಕೆ ಗುರಿಯಾಗಿದ್ದು, ಈ ಬಾರಿಯಾದರೂ ಶಾಪ ವಿಮೋಚನೆಯಾದೀತೇ? ಎಂಬ ಪ್ರಶ್ನೆ ಎದ್ದಿದೆ.
ಎಂದಿನಂತೆ ಈ ಬಾರಿಯೂ ಸರಕಾರ 2021-22ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ತೆರೆಯಲು ಹಸಿರು ನಿಶಾನೆ ತೋರಿಸಲಾಗಿದೆ. ಸಹಜವಾಗಿಯೇ ರೈತರಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಕಳೆದ ಎರಡು ದಶಕಗಳಿಂದ ಹೋರಾಟದ ಬಳಿಕ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಸರಕಾರ ವಿಧಿ ಸಿದ ಷರತ್ತುಗಳನ್ನು ಪೂರೈಸಲಾಗದ ಹಿನ್ನೆಲೆಯಲ್ಲಿ ರೈತರು ಖಾಸಗಿ ವರ್ತಕರ ಕಡೆಗೆ ಮುಖ ಮಾಡುತ್ತಿದ್ದರು. ಸರಕಾರ ತೆರೆದ ಅಂಗಡಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುತ್ತಿದ್ದವು. 3.50 ಲಕ್ಷ ಕ್ವಿಂಟಲ್‌ನಷ್ಟು ಜೋಳವನ್ನು ಖರೀದಿ ಮಾಡಿರುವುದರಿಂದ ಅದೇ ಹುಮ್ಮಸ್ಸಿನಲ್ಲಿ ಭತ್ತವನ್ನು ಕೂಡ ಖರೀದಿ ಮಾಡುತ್ತೇವೆ ಎಂಬ ಅಭಿಪ್ರಾಯಗಳು ಆಡಳಿತ ವರ್ಗದಿಂದ ಕೇಳಿಬಂದಿದ್ದು, ಚರ್ಚೆಗೆ ನಾಂದಿ ಹಾಡಿದೆ.
ಇತಿಹಾಸದಲ್ಲೇ ಮೊದಲು, ಐದೇ ರೈತರು: ಮಾರುಕಟ್ಟೆಯಲ್ಲಿ ಬೆಲೆ ಚೇತರಿಕೆಗೆ ಪೂರಕವೆಂಬ ಕಾರಣಕ್ಕೆ ಬೆದುರುಗೊಂಬೆಯಂತೆ ಈ ಕೇಂದ್ರಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ಬಾರಿ ಖರೀದಿ ಮಾಡೇ ತೀರುತ್ತೇವೆ ಎಂದು ಸ್ವತಃ ಅ ಧಿಕಾರಿಗಳು ಕಳೆದ ವರ್ಷ ರೈತರ ಜಮೀನುಗಳಿಗೆ ಹೋಗಿದ್ದರು. ಅಭಿಯಾನ ಮಾದರಿಯಲ್ಲಿ ಪ್ರತಿದಿನ ರೈತರ ಜಮೀನುಗಳಿಗೆ ಹೋಗಿ ಮನವೊಲಿಸಿ ಬಗ್ಗೆಯೂ ಹೇಳಿಕೊಂಡಿದ್ದರು. ಈ ಎಲ್ಲ ಕಸರತ್ತಿನ ಬಳಿಕ ಐವರು ರೈತರಿಂದ ಮಾತ್ರ ತಲಾ 75 ಕ್ವಿಂಟಲ್‌ನಂತೆ 375 ಕ್ವಿಂಟಲ್ ಖರೀದಿ ಮಾಡುವ ಮೂಲಕ ಒಂದೇ ಚೀಲ ಭತ್ತ ಖರೀದಿಸುವುದಿಲ್ಲವೆಂಬ ಅಪವಾದಿಂದ ಮುಕ್ತವಾಗಿದ್ದರು.
ಈ ಬಾರಿ ಮತ್ತೆ ನಿರೀಕ್ಷೆ: 2021-22ನೇ ಸಾಲಿಗೆ ಸಂಬಂಧಿ ಸಿ ಖರೀದಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 1,868 ರೂ., ಎ.ಗ್ರೇಡ್ ಭತ್ತ ಕ್ವಿಂಟಲ್‌ಗೆ 1,888 ರೂ.ನಂತೆ ಖರೀದಿಸಬೇಕಿದೆ. ಕರ್ನಾಟಕ ಆಹಾರ ನಿಗಮದ 5 ಮಳಿಗೆಗಳು ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಒಳಗೊಂಡು ಜಿಲ್ಲೆಯಲ್ಲಿ 35 ಕೇಂದ್ರಗಳನ್ನು ನೋಂದಣಿಗೆ ಗುರುತಿಸಲಾಗಿದೆ. ಏ.1ರಿಂದಲೇ ಅನ್ವಯಿಸುವಂತೆ ಕೃಷಿ ಇಲಾಖೆಯ ಐಡಿಯ ಪ್ರಕಾರ ಹೆಸರುಗಳನ್ನು ರೈತರು ನಮೂದಿಸಬೇಕಿದೆ.
ಏ.1ರಿಂದ ಜೂನ್, 30, 2021ರ ತನಕ ಖರೀದಿ ನಡೆಯಲಿದೆ. ಮಾರುಕಟ್ಟೆಯಲ್ಲಿ ಆರ್‌ಎನ್‌ಆರ್ ದರ ಪ್ರತಿ ಕ್ವಿಂಟಲ್‌ಗೆ 1,650 ರೂ. ನಂತಿದ್ದರೆ, ಕಾವೇರಿ ಸೋನಾಕ್ಕೆ 1,700 ರೂ. ಸಿಗುತ್ತಿದೆ. ಬೆಂಬಲ ಬೆಲೆಗೂ ಮುಕ್ತ ಮಾರುಕಟ್ಟೆಯ ದರಕ್ಕೂ ವ್ಯತ್ಯಾಸ ಇರುವುದರಿಂದ ಖರೀದಿ ನಡೆದರೆ, ರೈತರಿಗೆ ಅನುಕೂಲವಾಗಲಿದೆ. ಕಳೆದ ಬಾರಿ ಸಮರೋಪಾದಿಯಲ್ಲಿ ಕೆಲಸ ಆರಂಭಿಸಿದಾಗಲೂ ವಿಫಲವಾಗಿದ್ದ ಆಡಳಿತ ವರ್ಗ, ಈ ಸಲವಾದರೂ ಭತ್ತ ಖರೀದಿಯ ಮೂಲಕ ರೈತರಲ್ಲಿ ನಿರೀಕ್ಷೆ ಮೂಡಿಸುವುದೇ? ಎಂಬುದನ್ನು ಕಾದು ನೋಡಬೇಕಿದೆ.