Advertisement
ಒಂದೆರಡು ಮಳೆ ಬಂದರೆ ಸಾಕು ಎನ್ನುವಂತ ಸ್ಥಿತಿ ಎದುರಾಗಿದೆ. ನದಿ-ಸರೋವರ, ಹಳ್ಳ-ಕೊಳ ಬತ್ತಿ ಹೋಗಿ ಪ್ರಾಣಿ ಪಕ್ಷಿಗಳಿಗಳೂ ಕಂಗಾಲಾಗಿವೆ. ಕಾಸರಗೋಡು ಜಿಲ್ಲೆಯ ತೋಡು, ಕೆರೆ ನದಿಗಳಷ್ಟೇ ಅಲ್ಲದೆ ಬಾವಿ, ಕೊಳವೆ ಬಾವಿಗಳೂ ಬತ್ತಿಹೋಗಿ ಜನರು ಹಲವೆಡೆಗಳಲ್ಲಿ ಕಷ್ಟ ಪಡುತ್ತಿದ್ದಾರೆ. ಬೇಸಿಗೆಯ ನಿಜವಾದ ಬಿಸಿ ಪ್ರತಿಯೊಬ್ಬರನ್ನೂ ತಟ್ಟಿದೆ. ಅಂತಹುದರಲ್ಲಿ ಜಿಲ್ಲೆಯ ಹಲವೆಡೆಗಳಲ್ಲಿ ಬತ್ತದ ಕೊಳಗಳು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಪಳಪಳ ಹೊಳೆಯುತ್ತಾ, ಬೀಸುವ ಬಿಸಿಗಾಳಿಗೆ ಪುಟ್ಟ ಪುಟ್ಟ ತೆರೆಗಳು ಸೃಷ್ಟಿಯಾಗಿ ನೀರಿನಂಶ ಗಾಳಿಯಲಿ ಬೆರೆತು ಸುತ್ತೆಲ್ಲ ತಂಪಾಗಿಸುವ ಅಪರೂಪದ ತಾಣಗಳೂ ಇವೆ ಎನ್ನುವುದು ಸಮಾಧಾನದ ವಿಚಾರ.ಕುಂಬಳೆ ಸಮೀಪದ ನಾಯ್ಕಪುವಿನ ಬಳಿ ಇರುವ ಮುಜುಂಗಾವು ಶ್ರೀ ಪಾರ್ಥಸಾರಥಿ ಕ್ಷೇತ್ರದ ತೀರ್ಥಕೊಳ ಇವುಗಳಲ್ಲೊಂದು. ವರ್ಷ ಪೂರ್ತಿ ಮೈದುಂಬಿ ನಳನಳಿಸುವ ಈ ಕೊಳಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ನಿಸರ್ಗದ ಬೆರಗಿಗೆ ಭಯ ಭಕ್ತಿಯು ಜತೆಯಾಗಿ ಪವಿತ್ರ ಕೆರೆ ಎಂದು ಹೆಸರುಗಳಿಸಿದೆ.
ವಿಶಾಲವಾದ ಕೊಳದಲ್ಲಿ ಭಕ್ತರು ಪವಿತ್ರ ತೀರ್ಥ ಸ್ನಾನ ಮಾಡುತ್ತಾರೆ. ಪ್ರತಿವರ್ಷ ಒಕ್ಟೋಬರ್ ತಿಂಗಳ (ತುಲಾ) ಸಂಕ್ರಮಣದಂದು ಇಲ್ಲಿ ತೀರ್ಥ ಸ್ನಾನ ನಡೆಯುತ್ತಿದ್ದು ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚುಭಕ್ತರು ಆ ದಿನ ಮನೆಯಲ್ಲಿ ಶುಚಿಭೂìತರಾಗಿ ಬಂದು ಕೊಳದಲ್ಲಿ ಪವಿತ್ರ ತೀರ್ಥ ಸ್ನಾನ ಮಾಡಿ ಹುರುಳಿ ಮತ್ತು ಬೆಳ್ತಿಗೆ ಅಕ್ಕಿಯ ಮಿಶ್ರಣವನ್ನು ಕೊಳದ ಸುತ್ತ ಹಾಕಿ ದೇವರ ದರ್ಶನ ಪಡೆಯುತ್ತಾರೆ. ಹೀಗೆ ಮಾಡುವುದರಿಂದ ಚರ್ಮ ರೋಗ ಸೇರಿದಂತೆ ಯಾವುದೇ ರೀತಿಯ ಖಾಯಿಲೆಗಳು ವಾಸಿಯಾಗುತ್ತವೆ ಎನ್ನುವುದು ವಿಶ್ವಾಸ. ಮಾತ್ರ ವಲ್ಲದೆ ಕಂಕಣ ಭಾಗ್ಯ ಕೂಡಿಬರಲು ಇಲ್ಲಿ ಸ್ನಾನ ಮಾಡಿ ಕೃಷ್ಣನ ಸನ್ನಿ ಯಲ್ಲಿ ಪ್ರಾರ್ಥನೆ ಸಲ್ಲಿಸುವುದು ರೂಢಿ. ಪ್ರತಿಸಂಕ್ರಮಣದಂದೂ ತೀರ್ಥ ಸ್ನಾನ ಮಾಡಿ ದೇವರ ದರ್ಶನ ಪಡೆಯುವ ವ್ಯವಸ್ಥೆಯೂ ಇಲ್ಲಿದೆ.
Related Articles
ಕೊಳದಲ್ಲಿ ಹಲವು ಪ್ರಬೇಧಗಳ ಮೀನುಗಳಿದ್ದು ಬೇಸಗೆಯ ಸಮಯ ಪ್ರಾಣಿ ಪಕ್ಷಿಗಳು ಈ ಕೊಳವನ್ನು ನೀರಿಗಾಗಿ ಆಶ್ರಯಿಸುತ್ತವೆ.
Advertisement
ಆದುದರಿಂದಲೇ ಈಗ ಈ ಕೊಳವನ್ನು ಸಂದರ್ಶಿಸಿದರೆ ಹಲವು ವೈವಿಧ್ಯಮಯ ಪಕ್ಷಿಗಳನ್ನು ಕಾಣಬಹುದು, ಅವುಗಳ ದನಿಯನ್ನು ಆಳಿಸಬಹುದು.
ಸಾಕಷ್ಟು ಸಂಖ್ಯೆಯಲ್ಲಿ ಗೋವುಗಳು ದಾಹ ನೀಗಿಸಲು, ದನಿವಾರಿಸಲು ಈ ಪ್ರದೇಶಕ್ಕೆ ಬರುತ್ತವೆ. ಕೊಳದ ಪಕ್ಕ ಗಿಡ ಮರಗಳೂ ಬೆಳೆದುನಿಂತು ಇಲ್ಲಿನ ಸೌಂಧರ್ಯವನ್ನು ಹೆಚ್ಚಿಸಿದೆ.
ಸ್ವಚ್ಛ ಸುಂದರಸ್ವಚ್ಛತೆಗೆ ನೀಡುವ ಆದ್ಯತೆಯಿಂದಾಗಿ ಈ ಕೊಳ ಇನ್ನೂ ಆಕರ್ಷಕವಾಗಿದೆ ಎನ್ನಬಹುದು. ಕೆರೆಯು ಸುತ್ತ ಕಲ್ಲು ಹಾಸಲಾಗಿದೆ.ಈ ಜಲ ಸಂಪತ್ತಿನಿಂದಾಗಿ ಸುತ್ತಮುತ್ತಲಿನ ಬಾವಿ ಮುಂತಾದ ಜಲಮೂಲಗಳಲ್ಲಿ ಕೊನೆಯ ವರೆಗೂ ನೀರಿನ ಸೆಳೆ ಧಾರಾಳವಾಗಿರುತ್ತದೆ. ಪವಿತ್ರ ಕೊಳ-ಕೆರೆಗಳ ಬಗ್ಗೆ ಜನರಿಗೆ ಇನ್ನು ಭಯ-ಭಕ್ತಿ ವಿಶ್ವಾಸ ಜೀವಂತವಾಗಿರುವುದೇ ಇಂತಹ ಜಲಮೂಲಗಳು ತುಂಬಿರಲು ಕಾರಣ. ಇಲ್ಲಾವದರೆ ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗಿ ಬತ್ತಿಹೋಗುವ ದಿನ ದೂರವಿರಲಿಲ್ಲ. -ವಿದ್ಯಾಗಣೇಶ್ ಅಣಂಗೂರು