Advertisement

ಕರಾವಳಿಯಲ್ಲಿ ಭತ್ತದ ಪೈರು ಕಟಾವು ಆರಂಭ

04:54 PM Oct 21, 2019 | sudhir |

ಕೋಟ: ಕರಾವಳಿಯ ಹಲವು ಕಡೆ ಭತ್ತದ ಪೈರು ಮಾಗಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಯಂತ್ರಗಳು ಆಗಮಿಸುತ್ತಿದ್ದು, ಕಟಾವು ಆರಂಭಗೊಂಡಿದೆ. ವಾರದಲ್ಲಿ ಚುರುಕು ಪಡೆಯುವ ಲಕ್ಷಣವಿದ್ದರೂ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಚಿಂತೆಗೀಡಾಗಿದ್ದಾರೆ.
ಕೃಷಿ ಇಲಾಖೆಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಸುಮಾರು 34,730 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ನಡೆದಿದೆ. ದ.ಕ. ಜಿಲ್ಲೆಯಲ್ಲಿ 10,600 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿಯಾಗಿದೆ.

Advertisement

ಯಂತ್ರಗಳ ಆಗಮನ
ಪ್ರತಿ ವರ್ಷ ಜಿಲ್ಲೆಗೆ ತಮಿಳುನಾಡು, ಕೇರಳ, ದಾವಣಗೆರೆ, ರಾಯಚೂರು, ಶಿವಮೊಗ್ಗ ಮುಂತಾದ ಕಡೆಗಳಿಂದ ನೂರಾರು ಕಟಾವು ಯಂತ್ರಗಳು ಆಗಮಿ ಸುತ್ತವೆ. ಈ ಬಾರಿಯೂ ಯಂತ್ರಗಳು ಆಗಮಿಸ ತೊಡಗಿವೆ.

ಹಲವೆಡೆ ವಿಳಂಬ
ಈ ವರ್ಷ ಮುಂಗಾರು ಸಾಕಷ್ಟು ವಿಳಂಬವಾದ್ದರಿಂದ ಹೆಚ್ಚಿನ ಕಡೆಗಳಲ್ಲಿ ನಾಟಿ ಒಂದು ತಿಂಗಳು ತಡವಾಗಿದ್ದು, ಈಗ ತೆನೆ ಸರಿಯಾಗಿ ಮಾಗಿಲ್ಲ. ಅಂತಹ ಕಡೆಗಳಲ್ಲಿ ದೀಪಾವಳಿ ಅನಂತರ ಕಟಾವು ಆರಂಭವಾಗಲಿದೆ. ಯಂತ್ರಗಳು ಆಗಮಿಸುತ್ತಿದ್ದಂತೆ ರೈತರು ಕಟಾವಿಗೆ ಸಿದ್ಧವಾಗಿದ್ದಾರೆ. ಆದರೆ ಕೆಲವು ದಿನಗಳಿಂದ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಗದ್ದೆಗಿಳಿಯಲು ಹಿಂದೆಮುಂದೆ ಆಲೋಚಿಸುತ್ತಿದ್ದಾರೆ. ಮಳೆ ಮುಂದುವರಿದಲ್ಲಿ ಕಟಾವು ವಿಳಂಬವಾಗಲಿದೆ.

ಕಟಾವು ಯಂತ್ರಗಳ ಬಾಡಿಗೆ
ಕೃಷಿ ಯಂತ್ರಧಾರೆ ಕೇಂದ್ರಗಳ ಮೂಲಕ ಕಾರ್ಯ ನಿರ್ವಹಿಸುವ ಕರ್ತರ್‌ ಕಟಾವು ಯಂತ್ರಕ್ಕೆ ಗಂಟೆಗೆ 1,800 ರೂ. ಬಾಡಿಗೆ ವಿಧಿಸಲಾಗುತ್ತದೆ. ಖಾಸಗಿ ಯಂತ್ರಗಳಿಗೆ 1,800ರಿಂದ 2,000 ರೂ. ತನಕ ಬಾಡಿಗೆ ಇದೆ. ಬೇಡಿಕೆಯನ್ನು ಗಮನಿಸಿ ದರ ವ್ಯತ್ಯಯವಾಗುವ ಸಾಧ್ಯತೆ ಇದೆ.

ಸಾಧಾರಣ ಇಳುವರಿ
ದಕ್ಷಿಣ ಕನ್ನಡದಲ್ಲಿ 10,600 ಹೆಕ್ಟೇರ್‌ನಲ್ಲಿ ನಾಟಿಯಾಗಿದ್ದು, ಸಾಧಾರಣ ಇಳುವರಿ ಇದೆ.
-ಡಾ| ಸೀತಾ, ಜಂಟಿ ಕೃಷಿ ನಿರ್ದೇಶಕರು, ದ.ಕ.

Advertisement

ಕಟಾವಿಗೆ ಕಾದಿದ್ದೇವೆ
ಕಟಾವು ಯಂತ್ರದೊಂದಿಗೆ ತಮಿಳನಾಡಿನ ಸೇಲಂನಿಂದ ಉಡುಪಿ ಜಿಲ್ಲೆಗೆ ಬಂದಿದ್ದೇವೆ. ಒಂದೆರಡು ದಿನದಲ್ಲಿ ಕಟಾವು ಆರಂಭಗೊಳ್ಳುವ ನಿರೀಕ್ಷೆ ಇದೆ.
-ಮೋಹನ್‌ ಸೇಲಂ, ಕಟಾವು ಯಂತ್ರ ಕೆಲಸಗಾರ

ಕುಂದಾಪುರದ ಕೆಲವೆಡೆ ಕಟಾವು ಆರಂಭ
ನಾಟಿ ವಿಳಂಬವಾದರೂ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಇಳುವರಿ ಇದೆ. ಸುಮಾರು 34,730 ಹೆಕ್ಟೇರ್‌ ಕಟಾವಾಗಬೇಕಿದ್ದು, ಕುಂದಾಪುರ ತಾಲೂಕಿನ ಕೆಲವು ಕಡೆ ಮತ್ತು ಬ್ರಹ್ಮಾವರದ ಚೇರ್ಕಾಡಿ, ಕಾಡೂರು ಮುಂತಾದೆಡೆ ಆರಂಭಗೊಂಡಿದೆ. ವಾರದಲ್ಲಿ ಚುರುಕುಗೊಳ್ಳಲಿದೆ.
– ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ

ಬಾಡಿಗೆ ನೀಡುವಾಗ ಚೌಕಾಸಿ ನಡೆಸಿ
ಆರಂಭದಲ್ಲಿ ಯಂತ್ರಗಳಿಗೆ ಹೆಚ್ಚು ಬಾಡಿಗೆ ಕೇಳುತ್ತಾರೆ. ಆಗ ರೈತರು ಪರಸ್ಪರ ಚರ್ಚಿಸಿ, ಕೃಷಿ ಸಂಘಟನೆ, ಇಲಾಖೆಯ ಮಾರ್ಗದರ್ಶನದಂತೆ ಬಾಡಿಗೆ ನೀಡಬೇಕು. ಯಾರಾದರೂ ಒಬ್ಬ ರೈತ ಹೆಚ್ಚಿಗೆ ನೀಡಿದರೂ ಅದನ್ನೇ ಎಲ್ಲರಿಗೂ ಅನ್ವಯ ಮಾಡುತ್ತಾರೆ, ಎಚ್ಚರವಿರಲಿ.
-ಉಮೇಶ್‌, ರೈತರು, ಕೋಟ

– ರಾಜೇಶ ಗಾಣಿಗ ಅಚ್ಲ್ಯಾಡಿ

Advertisement

Udayavani is now on Telegram. Click here to join our channel and stay updated with the latest news.

Next