Advertisement

ಉಡುಪಿ : ಕಟಾವು ಆರಂಭವಾದರೂ ಖರೀದಿ ಕೇಂದ್ರ ತೆರೆದಿಲ್ಲ!

08:36 AM Nov 07, 2022 | Team Udayavani |

ಉಡುಪಿ: ಕರಾವಳಿಯಾದ್ಯಂತ ಭತ್ತದ ಕಟಾವು ಆರಂಭಗೊಂಡಿದ್ದು, ಮುಂದಿನ 15 ದಿನದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಸರಕಾರ ಇನ್ನೂ ಭತ್ತ ಖರೀದಿ ಕೇಂದ್ರ ತೆರೆದಿಲ್ಲ.

Advertisement

ಪಡಿತರ ವ್ಯವಸ್ಥೆಯಡಿ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಕೇಂದ್ರ ಸರಕಾರ ಈಗಾಗಲೇ ಅನುಮತಿ ನೀಡಿದೆ. ಅದರಂತೆ ರಾಜ್ಯ ಸರಕಾರ ಭತ್ತ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ ಇನ್ನೂ ಈ ಪ್ರಕ್ರಿಯೆ ಆರಂಭವಾಗದೇ ಇರುವುದರಿಂದ ಕೆಲವು ಭಾಗಗಳಲ್ಲಿ ರೈತರು ಕಳೆದ ವರ್ಷದಂತೆ ಯಥಾ ಪ್ರಕಾರ ಮಿಲ್‌ಗ‌ಳಿಗೆ ನೀಡುತ್ತಿದ್ದಾರೆ.

ಸಣ್ಣ ಹಿಡುವಳಿದಾರರಿಗೆ ಕಟಾವು ಮಾಡಿದ ಭತ್ತವನ್ನು ಸಂಗ್ರಹಿಸಿ ಇಟ್ಟುಕೊಂಡು ಸರಕಾರ ಭತ್ತ ಖರೀದಿ ಕೇಂದ್ರ ತೆರೆಯುವ ವರೆಗೂ ಕಾಯಲು ಬೇಕಾದ ವ್ಯವಸ್ಥೆ ಇಲ್ಲವಾದ್ದರಿಂದ ಕಟಾವು ಆಗುತ್ತಿದ್ದಂತೆ ಮಾರಾಟ ಮಾಡುತ್ತಿದ್ದಾರೆ. ಸರಕಾರ ಕರಾವಳಿಯ ಭತ್ತದ ಬೆಳೆಗಾರರನ್ನು ಈ ರೀತಿಯಲ್ಲಿ ಅವಗಣಿಸಿರುವುದು ಸರಿಯಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

ಬೆಂಬಲ ಬೆಲೆಯಡಿ ಭತ್ತ ಖರೀದಿ ಸಾಧ್ಯತೆ ಹೆಚ್ಚಿರುವುದರಿಂದ (ಪಡಿತರ ವ್ಯವಸ್ಥೆಯಲ್ಲಿ ಭತ್ತ ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ) ಖಾಸಗಿಯವರು ಭತ್ತ ಖರೀದಿಯ ದರವನ್ನು ಹೆಚ್ಚಳ ಮಾಡಿದ್ದಾರೆ. ಕಳೆದ ವರ್ಷ ಕೆ.ಜಿ.ಗೆ 16ರಿಂದ 18 ರೂ.ಗಳನ್ನು ನೀಡಿ ಖರೀದಿಸಿದವರು ಈ ಬಾರಿ 20ರಿಂದ 22 ರೂ.ಗಳ ವರೆಗೂ ನೀಡಿ ಖರೀದಿಸಲು ಆರಂಭಿಸಿದ್ದಾರೆ. ಇದರಿಂದ ರೈತರಿಗೆ ಸ್ವಲ್ಪ ಮಟ್ಟಿನ ಅನುಕೂಲವೂ ಇದೆ. ಅಲ್ಲದೆ ಪ್ರತೀ ವರ್ಷ ಭತ್ತ ಖರೀದಿಸುವವರಿಗೆ ನೀಡಿದರೆ ಸಂಗ್ರಹಿಸುವ ಸಮಸ್ಯೆಯೂ ಇರುವುದಿಲ್ಲ ಎಂಬ ಆಶಯವೂ ರೈತರಲ್ಲಿದೆ. ಹೀಗಾಗಿ ಸರಕಾರದ ಆದೇಶಕ್ಕೆ ಕಾಯದೇ ರೈತರು ಕಟವು ಆದ ತತ್‌ಕ್ಷಣವೇ ಮಾರಾಟ ಮಾಡುತ್ತಿದ್ದಾರೆ ಎಂದು ರೈತ ನಾಯಕರೊಬ್ಬರು ಮಾಹಿತಿ ನೀಡಿದರು.

ಶೀಘ್ರ ಕೇಂದ್ರ ತೆರೆಯಲಿ
ಕಟಾವು ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ. ರೈತರಿಂದ ಭತ್ತ ಖರೀದಿಗೆ ಆದಷ್ಟು ಬೇಗ ಖರೀದಿ ಕೇಂದ್ರವನ್ನು ತೆರೆಯಲು ಸರಕಾರ ಆದೇಶ ಮಾಡಬೇಕು. ಇಲ್ಲವಾದರೆ ಗ್ರಾಮೀಣ ಭಾಗದ ರೈತರಿಗೆ ಭತ್ತ ಸಂಗ್ರಹಿಸಿಕೊಳ್ಳುವುದು ಕಷ್ಟವಾಗಲಿದೆ. ಸ್ಥಳೀಯರಿಗೆ ಪಡಿತರ ವ್ಯವಸ್ಥೆಯಲ್ಲಿ ಕುಚ್ಚಲು ಅಕ್ಕಿ ನೀಡಲು ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಎಂದು ಹಿರಿಯ ರೈತರಾದ ಯಡ್ತಾಡಿ ಕೆ. ಸತೀಶ್‌ ಕುಮಾರ್‌ ಶೆಟ್ಟಿ ಆಗ್ರಹಿಸಿದ್ದಾರೆ.

Advertisement

ಶೀಘ್ರ ಆದೇಶ ಸಾಧ್ಯತೆ
ಭತ್ತ ಖರೀದಿ ಕೇಂದ್ರ ತೆರೆಯುವ ಸಂಬಂಧ ಶೀಘ್ರದಲ್ಲೇ ಸರಕಾರದಿಂದ ಆದೇಶ ಬರುವ ಸಾಧ್ಯತೆಯಿದೆ. ಸರಕಾರದಿಂದ ಬರುವ ನಿರ್ದೇಶನಂತೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ| ಕೆಂಪೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next