ಅಥಣಿ: ಬಸವೇಶ್ವರ ಏತ ನೀರಾವರಿ ಯೋಜನೆ ವಿಳಂಬದ ಬಗ್ಗೆ ಸಾಕಷ್ಟು ಬಾರಿ ನಿಗಮದ ಅಧಿ ಕಾರಿಗಳು, ನೀರಾವರಿ ಸಚಿವರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ನಮ್ಮ ಮನವಿಗೆ ಯಾರೊಬ್ಬರೂ ಸ್ಪಂದಿಸಿಲ್ಲ. ಹೀಗಾಗಿ ಸುಮಾರು 6 ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಈ ವಿಳಂಬ ನೀತಿ ಖಂಡಿಸಿ ಜ.17ರಿಂದ ಖೀಳೇಗಾಂವ ಬಸವೇಶ್ವರ ದೇವಸ್ಥಾನದಿಂದ ಅಥಣಿ ತಹಶೀಲ್ದಾರ್ ಕಚೇರಿವರೆಗೆ ತಾಲೂಕಿನ ಉತ್ತರ ಭಾಗದ ಜನರ ಸಹಭಾಗಿತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಅಥಣಿ ನ್ಯಾಯವಾದಿಗಳ ಸಂಘದ ಸದಸ್ಯ ಎಸ್.ಎಸ್. ಪಾಟೀಲ ಆರೋಪಿಸಿದರು.
ಅಥಣಿ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖೀಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ರಾಜಕಾರಣಿಗಳು ನೀರಾವರಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆದುಕೊಂಡಿದ್ದರಿಂದಲೇ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
ಯೋಜನೆಗೆ 2017ರ ಮಾರ್ಚ್ ತಿಂಗಳಲ್ಲಿ ಚಾಲನೆ ನೀಡಿ 2020ರ ಮಾರ್ಚ್ ತಿಂಗಳಲ್ಲಿ ಪೂರ್ಣಗಳಿಸಬೇಕೆಂದು ಗುತ್ತಿಗೆದಾರರಿಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಇನ್ನೆರಡೇ ತಿಂಗಳಲ್ಲಿ ಸಮಯ ಮುಕ್ತಾಯಗೊಂಡು ಒಂದು ವರ್ಷವಾಗುತ್ತದೆ ಆದರೂ ಯೋಜನೆ ಅರ್ಧದಷ್ಟೂ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆದ
ಜನಪ್ರತಿನಿಧಿ ಹಾಗೂ ಅಧಿ ಕಾರಿಗಳನ್ನು ತನಿಖೆಗೊಳಪಡಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
Related Articles
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್. ಹುಚಗೌಡರ ಮಾತನಾಡಿ, ಇತ್ತೀಚೆಗೆ 2017ರಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಯೋಜನೆ ವಿಳಂಬ ಧೋರಣೆಯಿಂದ ಜನರ ಉತ್ಸಾಹ ಕುಗ್ಗಿದೆ. ಯೋಜನೆಗೆ ಶೀಘ್ರ ಚಾಲನೆ ನೀಡಬೇಕು. ಇಲ್ಲದಿದ್ದಲ್ಲಿ ಪಾದಯಾತ್ರೆ ಸೇರಿದಂತೆ ಅನೇಕ ರೀತಿಯ ಉಗ್ರ ಹೋರಾಟಕ್ಕೆ ಅಣಿಯಾಗುವುದಾಗಿ ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸನಗೌಡಾ ಪಾಟೀಲ ಮಾತನಾಡಿ, ಈ ಯೋಜನೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೇ ನೀರಾವರಿ ಇಲಾಖೆ ಸಚಿವರಾಗಿದ್ದು, ಯೋಜನೆಯಲ್ಲಿ ವಿಳಂಬ ಏಕೆ ಆಗುತ್ತಿದೆ? ಎನ್ನುವ ಮಾಹಿತಿ ಪಡೆಯಬಹುದಿತ್ತು. ಆದರೆ ಅವರ ಮೌನ ನಡೆ ಸರಿಯಲ್ಲ ಎಂದರು.
ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಬಿ.ಟಿ. ಕಾಂಬಳೆ, ವಿಜಯ ಕಲಮಡಿ, ಭೀಮನಗೌಡರ, ಶಂಕರಗೌಡರ, ರೈತ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ, ಅನಂತಪುರ ಗ್ರಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ, ಭೀಮನಗೌಡ ಪಾಟೀಲ, ಶಬ್ಬೀರ ಸಾತಬಚ್ಚೆ ಇತರರಿದ್ದರು.
ಶಾಸಕ ಶ್ರೀಮಂತ ಪಾಟೀಲ ಶೀಘ್ರ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದಾಗಿ ಆಶ್ವಾಸನೆ ನೀಡಿದರೂ ಅದು ಇನ್ನೂ ಈಡೇರಿಲ್ಲ. ಇವರ ನಿರ್ಲಕ್ಷವೇ ಇವತ್ತು ಕಾಮಗಾರಿ ಸ್ಥಗಿತಕ್ಕೆ ಕಾರಣವಾಗಿದೆ. 17ರಂದು ನಡೆಯುವ ಹೋರಾಟದಲ್ಲಿ ತಾಲೂಕಿನ ಚಿಂತಕರು, ಸಾಹಿತಿಗಳು, ಪತ್ರಕರ್ತರು, ಕನ್ನಡಪರ ಹೋರಾಟಗಾರರು, ನ್ಯಾಯವಾದಿಗಳು, ವ್ಯಾಪಾರಸ್ಥರು, ಗಣ್ಯ ನಾಗರಿಕರು ಸೇರಿದಂತೆ ಯೋಜನೆಯ ವ್ಯಾಪ್ತಿಯ 22 ಗ್ರಾಮಗಳ ಗ್ರಾಮಸ್ಥರು ಪಾಲ್ಗೊಳ್ಳಲ್ಲಿದ್ದು, ಈ ಹೋರಾಟ ಸಂಪೂರ್ಣ ಪಕ್ಷಾತೀತ.
ಎಸ್.ಎಸ್. ಪಾಟೀಲ,
ಅಥಣಿ ನ್ಯಾಯವಾದಿಗಳ ಸಂಘದ ಸದಸ್ಯ