Advertisement

ಪಚ್ಚನಾಡಿ ಬಯೋ ಮೈನಿಂಗ್‌ ಪ್ರಕ್ರಿಯೆ; ಟೆಂಡರ್‌ ಅವಧಿ ಇಳಿಕೆ

06:16 PM Jan 23, 2023 | Team Udayavani |

ಮಹಾನಗರ: ಕೆಲವು ದಿನಗಳ ಹಿಂದೆ ಪಚ್ಚನಾಡಿ ತ್ಯಾಜ್ಯ ರಾಶಿಗೆ ಬೆಂಕಿ ಬಿದ್ದು ಆತಂಕಕ್ಕೆ ಕಾರಣವಾಗಿತ್ತು. ಅದೇ ತ್ಯಾಜ್ಯವನ್ನು ಸಂಸ್ಕರಿಸುವ ಬಯೋಮೈನಿಂಗ್‌ ಪ್ರಕ್ರಿಯೆಗೆ ಇದೀಗ ಮತ್ತಷ್ಟು ವೇಗ ನೀಡಲು ಪಾಲಿಕೆ ನಿರ್ಧರಿಸಿದೆ. ಗುತ್ತಿಗೆ ಅವಧಿಗೂ ಮುನ್ನ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಟೆಂಡರ್‌ ವಹಿಸಿರುವ ಸಂಸ್ಥೆಯ ಜತೆ ಪಾಲಿಕೆ ಮಾತುಕತೆ ನಡೆಸಲು ಮುಂದಾಗಿದೆ.

Advertisement

ಪಚ್ಚನಾಡಿಯಲ್ಲಿ ಬೆಂಕಿ ಶಮನಗೊಂಡಿ ದ್ದರೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳವರೆಗೆ ನಿಂತಿದ್ದ ಬಯೋಮೈನಿಂಗ್‌ ಪ್ರಕ್ರಿಯೆ ಮತ್ತೆ ಆರಂಭಗೊಂಡಿದೆ. ಈಗಾಗಲೇ ಮೊದಲನೇ ಹಂತದಲ್ಲಿ ಬಯೋಮೈನಿಂಗ್‌ ಅನ್ನು ಒಂದು ಯುನಿಟ್‌ ಸ್ಥಾಪಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಕಸದಿಂದ ಜಲ್ಲಿ ಕಲ್ಲು, ಗೊಬ್ಬರ ಸಹಿತ ವಿವಿಧ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದ್ದು, ಈ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲು ನಿರ್ಧರಿಸಲಾಗಿದೆ.

ಪಚ್ಚನಾಡಿಯಲ್ಲಿ ಕೆಲವು ದಿನಗಳ ಹಿಂದೆ ಬೆಂಕಿ ಬಿದ್ದ ಕಾರಣ ತ್ಯಾಜ್ಯ ಸಂಸ್ಕರಣೆಯ ಬಯೋಮೈನಿಂಗ್‌ ವ್ಯವಸ್ಥೆಗೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈಗಾಗಲೇ ಪ್ರಕ್ರಿಯೆ ಆರಂಭಿಸಿದ ಜಾಗದಲ್ಲಿ ಸದ್ಯ ಬೆಂಕಿ ತಗುಲಿಲ್ಲ. ಕೆಲವೊಂದು ವಸ್ತುಗಳನ್ನು ಬೆಂಕಿಗೆ ಆಹುತಿಯಾಗಿರಬಹುದು. ಅಲ್ಲದೆ ತ್ಯಾಜ್ಯದ ಮೇಲಿನ ಪದರಕ್ಕೆ ಬೆಂಕಿ ತಗುಲಿದೆ. ಇದರಿಂದ ಬಯೋಮೈನಿಂಗ್‌ ಪ್ರಕ್ರಿಯೆಗೆ ದೊಡ್ಡ ಮಟ್ಟದ ಪರಿಣಾಮ ಬೀರದು. ಇದರಿಂದ ಮತ್ತಷ್ಟು ವೇಗ ಸಿಗಬಹುದು ಎನ್ನುತ್ತಾರೆ ಅಧಿಕಾರಿಗಳು.

4 ವರ್ಷದಿಂದ 3 ವರ್ಷಕ್ಕೆ ಇಳಿಕೆ?
ಪಚ್ಚನಾಡಿಯ ಮಂದಾರ ಬಳಿ ರಾಶಿ ಬಿದ್ದ ತ್ಯಾಜ್ಯವನ್ನು ಬಯೋಮೈನಿಂಗ್‌ ವ್ಯವಸ್ಥೆಯ ಮೂಲಕ ತೆರವುಗೊಳಿಸಲಾಗುತ್ತಿದೆ. “ನ್ಯಾಕಾಫ್‌’ ಎಂಬ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದ್ದು, ಅವರಿಗೆ 4 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಕೆಲಸ ಪೂರ್ಣಗೊಳಿಸುವ ಅವಧಿ ಎರಡು ವರ್ಷ ಇದ್ದರೂ ಮಳೆಗಾಲದಲ್ಲಿ ಈ ಪ್ರಕ್ರಿಯೆ ನಿರ್ವಹಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ 4 ವರ್ಷಗಳವರೆಗೆ ಅವಧಿ ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ಒಂದು ವರ್ಷಗಳ ಕಡಿತಕ್ಕೆ ಪಾಲಿಕೆ ಚಿಂತನೆ ನಡೆಸುತ್ತಿದೆ. ಈ ಮೂಲಕ ಪಚ್ಚನಾಡಿಯಲ್ಲಿ ಆಗಿದ್ದಾಗ್ಗೆ ಆಗುವ ಅನಾಹುತ ತಪ್ಪಿಸಲು ಕ್ರಮ ವಹಿಸಲಾಗಿದೆ.

3 ವರ್ಷಗಳಲ್ಲಿ ಮುಗಿಸಲು ಕ್ರಮ
ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೆಲವು ದಿನಗಳ ಹಿಂದೆ ಬೆಂಕಿತಗುಲಿದ್ದು, ಸದ್ಯ ಶಮನಗೊಂಡಿದೆ. ಆದರೂ ಮುನ್ನೆಚ್ಚರಿಕೆ ವಹಿಸಿಕೊಳ್ಳಲಾಗುತ್ತಿದೆ. ಈಗಗಾಲೇ ಸುಮಾರು 9 ಲಕ್ಷ ಟನ್‌ ಕಸ ರಾಶಿ ಬಿದ್ದಿದ್ದು, ಸಂಸ್ಕರಣೆಗೆ ಬಯೋಮೈನಿಂಗ್‌ ವಿಧಾನ ಆರಂಭಗೊಂಡಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು 4 ವರ್ಷ ಅಗತ್ಯವಿದೆ. ಆದರೆ ಈ ಕಾಮಗಾರಿಗೆ ವೇಗ ಒದಗಿಸಿ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಅಕ್ಷಯ್‌ ಶ್ರೀಧರ್‌, ಮನಪಾ ಆಯುಕ್ತರು

Advertisement

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next