Advertisement

ನದಿಯಂತೆ ಹರಿದ ಪಚ್ಚನಾಡಿಯ ತ್ಯಾಜ್ಯ ರಾಶಿ!

11:52 PM Aug 08, 2019 | mahesh |

ಮಹಾನಗರ: ಜರಿದ ಕಸದ ರಾಶಿ; ಹರಿದ ಮಲಿನ ನೀರಿಗೆ ಮಂದಾರದ ಮಣ್ಣು ಮಾತ್ರ ಕೊಚ್ಚಿಹೋದದ್ದಲ್ಲ; ಬದಲಾಗಿ ಇಲ್ಲಿನ ಜನರ ಅಸ್ತಿತ್ವವೇ ಮರೆಗೆ ಸರಿಯುತ್ತಿದೆ. ಇಲ್ಲಿನ ಬದುಕು ಅಕ್ಷರಶಃ ನರಕಸದೃಶವಾಗಿದೆ.

Advertisement

ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಸರಿಸುಮಾರು ಒಂದೂವರೆ ಕಿ.ಮೀ.ನಷ್ಟು ಉದ್ದಕ್ಕೆ ಜಾರಿಬಂದ ಕಾರಣದಿಂದ ಮಂದಾರ ವ್ಯಾಪ್ತಿಯ ಮನೆಗಳಲ್ಲಿ ಆತಂಕದ ಕ್ಷಣಗಳು ಇನ್ನೂ ಮಡುಗಟ್ಟಿದೆ. ಮುಂದೇ ನಾಗುವುದೋ ಎಂಬ ಭಯ ಇಲ್ಲಿ ಇನ್ನೂ ಕಡಿಮೆಯಾಗಿಲ್ಲ. ಸದ್ಯ ತ್ಯಾಜ್ಯ ರಾಶಿಯ ಚಲನೆ ನಿಂತಿದೆಯಾದರೂ ಯಾವ ಘಳಿಗೆಯಲ್ಲಿ ಮತ್ತಷ್ಟು ಅನಾಹುತಗಳಿಗೆ ಕಾರಣವಾಗುತ್ತದೆಯೋ ಎಂಬ ಆತಂಕ ಮಾತ್ರ ಕಡಿಮೆಯಾಗಿಲ್ಲ.

ಮಂಗಳವಾರ ಸಂಜೆ ತ್ಯಾಜ್ಯ ರಾಶಿಯು ಡಂಪಿಂಗ್‌ ಯಾರ್ಡ್‌ನಿಂದ ಕೆಳಭಾಗಕ್ಕೆ ಜಾರಿದೆ. ಇದು ಹಂತ ಹಂತವಾಗಿ ಮಂದಾರ ವ್ಯಾಪ್ತಿಯ ಇಳಿಜಾರಿನ ಅಡಿಕೆ ತೋಟಗಳಲ್ಲಿ ಮುನ್ನುಗ್ಗಿದ್ದು ಬುಧವಾರ ಮಧ್ಯಾಹ್ನ ಅನಂತರವಂತೂ ಒಂದು ಹಳೆಯ ಮನೆಯನ್ನು ನೆಲಸಮ ಮಾಡಿದೆ. ಜತೆಗೆ ನಾಗಬನ, ದೈವಸ್ಥಾನ ಕೂಡ ತ್ಯಾಜ್ಯ ರಾಶಿಯಡಿಯಲ್ಲಿ ಮುಚ್ಚಿಹೋಗಿವೆ. 2,000ಕ್ಕೂ ಅಧಿಕ ಅಡಿಕೆ ಮರಗಳು ತ್ಯಾಜ್ಯರಾಶಿಯಡಿ ಸಿಲುಕಿವೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗಿನವರೆಗೆ ತ್ಯಾಜ್ಯರಾಶಿಯು ಮತ್ತೆ ಮುಂದುವರಿದು ಒಂದು ದೈವಸ್ಥಾನ, ಒಂದು ಬಾವಿಯನ್ನೂ ಅಪೋಷನಗೈದಿದೆ. ಬಳಿಕ ತ್ಯಾಜ್ಯ ರಾಶಿಯ ಚಲನೆ ನಿಂತಿದ್ದು, ಯಾವುದೇ ಕ್ಷಣದಲ್ಲಿ ಮತ್ತೆ ಮುಂದುವರಿಯುವ ಅಪಾಯ ಬಹುತೇಕ ನಿಚ್ಚಳ.

ಅಪಾಯದಲ್ಲಿದ್ದಾರೆ ಮನೆಮಂದಿ

ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯ ರಾಶಿಯು ಸುಮಾರು 50 ಮೀಟರ್‌ ಅಗಲದಲ್ಲಿ ಮಂದಾರ ಪ್ರದೇಶದ ತೋಟ ಗಳನ್ನು ನೆಲಸಮ ಮಾಡಿ ಮುನ್ನುಗ್ಗಿದ್ದು, ಅಕ್ಕಪಕ್ಕದಲ್ಲಿ ಹಲವು ಮನೆಗಳು ಇನ್ನೂ ಅಪಾಯದಲ್ಲಿವೆ. ರಾಮ ಭಟ್ ಬೆಳ್ಳಾರೆ ಅವರಿಗೆ ಸೇರಿದ ಹಳೆಯ ಮನೆ ತ್ಯಾಜ್ಯ ರಾಶಿಯಿಂದ ಮುಳುಗಡೆಯಾಗಿದ್ದು, ಮಂದಾರ ರವೀಂದ್ರ ಭಟ್ ಅವರ ಮನೆಯ ಮುಂಭಾಗದಲ್ಲಿಯೇ ತ್ಯಾಜರಾಶಿ ಆವರಿಸಿಕೊಂಡಿದೆ. ತೆಂಗಿನ ಮರ ಕೂಡ ಇವರ ಮನೆಗೆ ಬಿದ್ದು ಅಪಾಯ ಸಂಭವಿಸಿದೆ. ಜತೆಗೆ, ಮಂದಾರ ಭೋಜ ಮೊಲಿ, ಶೇಖರ ಮೊಲಿ, ಸೋಂಪ ಮೊಲಿ, ನಾರಾಯಣ ಅವರ ಮನೆಗಳು ಕೂಡ ಸದ್ಯ ಅಪಾಯದಲ್ಲಿದೆ. ರೇವತಿ, ಗೋಪಾಲ, ಕರುಣಾಕರ, ನಾಗೇಶ, ಜಲಜ ಬೆಳ್ಚಾಡ್ತಿ ಅವರ ಮನೆಗಳೂ ಅಪಾಯದಲ್ಲಿದೆ.

Advertisement

ನಾಗೇಶ್‌, ಕರುಣಾಕರ, ಸುಮತಿ, ಸುಲೋಚನಿ, ಲಕ್ಷ್ಮೀ, ರಾಜೀವ, ಸುನೀತಾ ಸಹಿತ ಹಲವರಿಗೆ ಸೇರಿದ ಅಡಿಕೆ ತೋಟಗಳು ಈಗ ತ್ಯಾಜ್ಯ ರಾಶಿಯಲ್ಲಿ ಕಣ್ಮರೆಯಾಗಿವೆ. ಜತೆಗೆ ಸುಮಾರು 150ಕ್ಕೂ ಅಧಿಕ ತೆಂಗಿನ ಮರ, 70ಕ್ಕೂ ಅಧಿಕ ಹಲಸಿನ, ಮಾವಿನ ಸೇರಿದಂತೆ ಹಲವು ಮರಗಳು ತ್ಯಾಜ್ಯ ರಾಶಿಯಿಂದ ನೆಲಕ್ಕುರುಳಿದೆ.

ದ.ಕ. ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳು ಭೇಟಿ ನೀಡಿದರು.

ಗುರುವಾರ ಬೆಳಗ್ಗಿನಿಂದ ಪಾಲಿಕೆ ಹಾಗೂ ಸ್ಥಳೀಯರು ಸೇರಿಕೊಂಡು ತ್ಯಾಜ್ಯ ರಾಶಿ ಹರಡಿರುವ ಎರಡೂ ಬದಿಗಳಲ್ಲಿ ಜೇಸಿಬಿ ಸಹಾಯದಿಂದ ತೋಡು ಮಾಡಿ ತ್ಯಾಜ್ಯದ ನೀರನ್ನು ಬಿಡಲಾಗಿದೆ. ಇದರಿಂದಾಗಿ ತ್ಯಾಜ್ಯದಲ್ಲಿ ತುಂಬಿದ್ದ ಗಲೀಜು ನೀರು ತೋಡಿನಲ್ಲಿ ಹರಿಯುತ್ತಿದೆ. ಜತೆಗೆ, ಗಲೀಜು ನೀರು ರವೀಂದ್ರ ಭಟ್ ಸಹಿತ ಕೆಲವರ ಮನೆಯ ಮುಂಭಾಗದಲ್ಲಿಯೇ ನಿಂತು ವಾಸನೆ ಬರುತ್ತಿದೆ. ಮಳೆನೀರು ಸೇರಿ ಮತ್ತಷ್ಟು ಸಮಸ್ಯೆ ಆಗುವ ಜತೆಗೆ; ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಅಪಾಯವಿದೆ. ಮಂದಾರದಿಂದ ಸ್ಥಳೀಯ ಸುಮಾರು 50ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಾರ-ಕಂಜಿರಾಡಿ ರಸ್ತೆ ತ್ಯಾಜ್ಯ ರಾಶಿಯಿಂದ ಕಣ್ಮರೆಯಾಗಿದೆ.

ಪರ್ಯಾಯ ವ್ಯವಸ್ಥೆಗೆ ಕ್ರಮ

ಪಚ್ಚನಾಡಿಯಲ್ಲಿ ಡಂಪಿಂಗ್‌ ಯಾರ್ಡ್‌ನ ತ್ಯಾಜ್ಯದ ರಾಶಿಯು ಜಾರಿಕೊಂಡು ಮಂದಾರ ವ್ಯಾಪ್ತಿಯಲ್ಲಿ ಹಲವು ಎಕರೆಗಳಲ್ಲಿ ತುಂಬಿಕೊಂಡಿದೆ. ಇದರಿಂದಾಗಿ ಸಮಸ್ಯೆ ಎದುರಿಸುವ ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
– ಮೊಹಮ್ಮದ್‌ ನಝೀರ್‌, ಆಯುಕ್ತರು-ಮನಪಾ

ಮಂದಾರ ವ್ಯಾಪ್ತಿಯಲ್ಲಿ ಗಲೀಜು ನೀರು

ಗುರುವಾರ ಬೆಳಗ್ಗಿನಿಂದ ಪಾಲಿಕೆ ಹಾಗೂ ಸ್ಥಳೀಯರು ಸೇರಿಕೊಂಡು ತ್ಯಾಜ್ಯ ರಾಶಿ ಹರಡಿರುವ ಎರಡೂ ಬದಿಗಳಲ್ಲಿ ಜೇಸಿಬಿ ಸಹಾಯದಿಂದ ತೋಡು ಮಾಡಿ ತ್ಯಾಜ್ಯದ ನೀರನ್ನು ಬಿಡಲಾಗಿದೆ. ಇದರಿಂದಾಗಿ ತ್ಯಾಜ್ಯದಲ್ಲಿ ತುಂಬಿದ್ದ ಗಲೀಜು ನೀರು ತೋಡಿನಲ್ಲಿ ಹರಿಯುತ್ತಿದೆ. ಜತೆಗೆ, ಗಲೀಜು ನೀರು ರವೀಂದ್ರ ಭಟ್ ಸಹಿತ ಕೆಲವರ ಮನೆಯ ಮುಂಭಾಗದಲ್ಲಿಯೇ ನಿಂತು ವಾಸನೆ ಬರುತ್ತಿದೆ. ಮಳೆನೀರು ಸೇರಿ ಮತ್ತಷ್ಟು ಸಮಸ್ಯೆ ಆಗುವ ಜತೆಗೆ; ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಅಪಾಯವಿದೆ. ಮಂದಾರದಿಂದ ಸ್ಥಳೀಯ ಸುಮಾರು 50ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಾರ-ಕಂಜಿರಾಡಿ ರಸ್ತೆ ತ್ಯಾಜ್ಯ ರಾಶಿಯಿಂದ ಕಣ್ಮರೆಯಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next