Advertisement

ಪಚ್ಚನಾಡಿ ತ್ಯಾಜ್ಯ: ನಿರಾಶ್ರಿತರಿಗೆ “ಬಾಡಿಗೆ ಸೂರು’ ದೂರ

03:35 PM May 19, 2023 | Team Udayavani |

ಮಹಾನಗರ: ಪಚ್ಚನಾಡಿ ತ್ಯಾಜ್ಯ ದುರಂತದಿಂದ ಮನೆ ಕಳೆದು ಕೊಂಡವರಿಗೆ ಸ್ಥಳೀಯಾಡಳಿ ತದಿಂದ ಕುಡುಪು ಬಳಿ ಕಲ್ಪಿಸಿದ ವಸತಿ ಸಮುಚ್ಚಯಕ್ಕೆ ಒಂದು ವರ್ಷದಿಂದ ಪಾಲಿಕೆ ಬಾಡಿಗೆಯೇ ಕಟ್ಟಿಲ್ಲ! ಪರಿಣಾಮ ನಿರಾಶ್ರಿತರು ಇದೀಗ ಸೂರು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

Advertisement

ಮಹಾನಗರ ಪಾಲಿಕೆಯು ಕರ್ನಾಟಕ ಗೃಹ ಮಂಡಳಿಯ ವಸತಿ ಸಮುಚ್ಚಯಕ್ಕೆ ಸುಮಾರು 1.70 ಕೋಟಿ ರೂ. ಬಾಡಿಗೆ ಪಾವತಿಸಬೇಕಾಗಿದ್ದು, ಹಣ ಪಾವತಿ ಮಾಡದಿದ್ದರೆ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಗೃಹ ಮಂಡಳಿಯು ಮಂಗಳೂರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದೆ.

ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉಂಟಾದ ಭೂಕುಸಿತದ ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕುಡುಪು ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿದ ವಸತಿ ಸಮುಚ್ಚಯದಲ್ಲಿನ ಫ್ಲ್ಯಾಟ್‌ “ಬಿ’ ಯ 27 ಫ್ಲಾ éಟ್‌ಗಳನ್ನು 2019ರ ಆಗಸ್ಟ್‌ 9ರಂದು ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ಹಸ್ತಾಂತರ ಮಾಡಲಾಗಿತ್ತು.

ಈ 27 ಫ್ಲ್ಯಾಟ್ ಗಳಿಗೆ ಲೋಕೋಪ ಯೋಗಿ ಇಲಾಖೆಯಿಂದ ಮಾಸಿಕ ಬಾಡಿಗೆ 2,54,775 ರೂ. ನಿಗದಿಪಡಿಸಲಾಗಿತ್ತು. ಆಗಸ್ಟ್‌ 2019ರಿಂದ ಎಪ್ರಿಲ್‌ 2023ರ ವರೆಗೆ (ಒಟ್ಟು 45 ತಿಂಗಳು) ಬಾಡಿಗೆ, ನಿರ್ವಹಣ ವೆಚ್ಚ ಸಹಿತ ಒಟ್ಟು 1,70,28,553 ರೂ.ವನ್ನು ಪಾಲಿಕೆ ಸದ್ಯ ಗೃಹ ಮಂಡಳಿಗೆ ಪಾವತಿಸಬೇಕಾಗಿದೆ.

ಫ್ಲ್ಯಾಟ್ ವಾಸಿಗಳನ್ನು
ತೆರವುಗೊಳಿಸಲು ಸೂಚನೆ
ಪಾಲಿಕೆಯು ಬಾಕಿ ಮೊತ್ತವನ್ನು ಪಾವತಿ ಮಾಡಬೇಕು. ಅಲ್ಲದೆ, ಫ್ಲ್ಯಾಟ್ ಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತರನ್ನು ತೆರವುಗೊಳಿಸಿ ಫ್ಲಾ éಟ್‌ಗಳನ್ನು ಸುಸ್ಥಿತಿಯಲ್ಲಿ ಮಂಡಳಿಗೆ ಮರು ಹಸ್ತಾಂತರಿಸಲು ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಇದೇ ಕಾರಣಕ್ಕೆ ಪಚ್ಚನಾಡಿ ದುರಂತದಿಂದ ಸೂರು ಕಳೆದುಕೊಂಡವರು ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ.

Advertisement

ಪಾಲಿಕೆ ಗಮನಕ್ಕೆ ತರಲಾಗಿತ್ತು
“ಮಹಾನಗರ ಪಾಲಿಕೆ ಬಾಡಿಗೆ ಹಣ ಪಾವತಿ ಮಾಡಲಿಲ್ಲ. ಕೂಡಲೇ ಹಣ ಪಾವತಿ ಮಾಡುವಂತೆ ಏಳು ತಿಂಗಳುಗ ಳ ಹಿಂದೆ ನಮಗೆ ಗೃಹ ಮಂಡಳಿ ಸೂಚನೆ ನೀಡಿತ್ತು. ಆ ವೇಳೆ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದೆವು. ಈ ಕುರಿತು ಗಮನಹರಿಸುವ ಭರವಸೆ ನೀಡಿದ್ದರು. ಕೆಲವು ವಾರದ ಹಿಂದೆ ಗೃಹ ಮಂಡಳಿ ಅಧಿಕಾರಿಗಳು ನಮ್ಮ ವಸತಿ ಸಮುಚ್ಚಯದ ಎಲ್ಲ ಪ್ಲೋರ್‌ಗಳಿಗೆ, ಮುಖ್ಯದ್ವಾರಕ್ಕೆ ನೋಟಿಸ್‌ ಹಚ್ಚಿದ್ದಾರೆ.ಸಂತ್ರಸ್ತರಲ್ಲಿ ನಾವು ಬಹುತೇಕರು ಕೃಷಿಕರೇ ಇರುವುದು. ಕೆಲವು ವರ್ಷಗಳ ಹಿಂದೆ ನಮಗೆ ಮಧ್ಯಂತರ ಪರಿಹಾರ ಸಿಕ್ಕಿತ್ತು. ಬಳಿಕ ಪರಿಹಾರ ಮರೀಚಿಕೆಯಾಗಿದೆ’ ಎನ್ನುತ್ತಾರೆ ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತ ಶ್ರೀರಾಮ ಭಟ್‌.

ಸೂಕ್ತ ಕ್ರಮ
ಪಚ್ಚನಾಡಿ ತ್ಯಾಜ್ಯ ದುರಂತದಿಂದ ಮನೆಕಳೆದುಕೊಂಡವರಿಗೆ ಕಲ್ಪಿಸಿದ ವಸತಿ ಸಮುಚ್ಚಯಕ್ಕೆ ಬಾಡಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಗೃಹ ಮಂಡಳಿಯಿಂದ ನೋಟಿಸ್‌ ಬಂದಿದೆ. ಈ ವಿಚಾರದ ಕುರಿತಂತೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಚನ್ನಬಸಪ್ಪ, ಪಾಲಿಕೆ ಆಯುಕ್ತರು

ಸದ್ಯ ದಲ್ಲೇ ಮುಂದಿನ ಕ್ರಮ
ಕರ್ನಾಟಕ ಗೃಹ ಮಂಡಳಿಯ ವಸತಿ ಸಮುಚ್ಚಯಕ್ಕೆ ಮಹಾನಗರ ಪಾಲಿಕೆಯು ಸುಮಾರು 1.70 ಕೋಟಿ ರೂ. ಬಾಡಿಗೆ ಪಾವತಿಸಬೇಕಾಗಿದೆ. ಈ ಕುರಿತು ಪಾಲಿಕೆಗೆಈಗಾಗಲೇ ಮನವರಿಕೆ ಮಾಡಲಾಗಿದೆ. ಮನಪಾ ಆಯುಕ್ತರ ಬಳಿಯೂ ಚರ್ಚಿಸಲಾಗಿದೆ. ಸದ್ಯದಲ್ಲೇ ಮುಖ್ಯ ಕಚೇರಿಗೆ ಪತ್ರ ಬರೆದು ಅಲ್ಲಿನ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
– ವಿಜಯ ಕುಮಾರ್‌ ಭಂಡಾರಿ, ಕರ್ನಾಟಕ ಗೃಹ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next