ಸುರತ್ಕಲ್: ಪಚ್ಚನಾಡಿಯ ಡಂಪಿಂಗ್ ಯಾರ್ಡ್ ನಿಂದ ಹರಿದ ಕಸ, ಮಲಿನ ಸಮೀಪದ ಮಂದಾರ ಎಂಬ ಸ್ಥಳಕ್ಕೆ ಹರಿದು ಜನರ ಜೀವನವೇ ನರಕ ಸದೃಶವಾಗಿದೆ. ಸುಮಾರು 12 ಎಕರೆಯಷ್ಟು ತೋಟ ಸಂಪೂರ್ಣ ಹಾಳಾಗಿದ್ದು, ಹಲವು ಮನೆಗಳು ಕಸದಿಂದ ಮುಚ್ಚಿಹೋಗಿವೆ.
ಶನಿವಾರ ಶಾಸಕ ಭರತ್ ಶೆಟ್ಟಿಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ಡಂಪಿಂಗ್ ಯಾರ್ಡ್ ಕಸ ಹರಿದು ಸುಮಾರು 2000 ತೆಂಗಿನ ಮತ್ತು ಅಡಿಕೆ ಮರಗಳು ಧರೆಗುರಿಳಿವೆ. ಒಂದು ಹಳೇಯ ಮನೆ ನೆಲಸಮವಾಗಿದ್ದು, ನಾಗಬನ, ದೈವಸ್ಥಾನಗಳು ಕಸದಿಂದ ಮುಚ್ಚಿಹೋಗಿದೆ. ಹಲವು ಮನೆಗಳ ಸುತ್ತಲೂ ಕಸದ ರಾಶಿ ತುಂಬಿದ್ದು, ವಾಸನೆಯಿಂದ ಮೂಗು ಮುಚ್ಚುವ ಪರಿಸ್ಥಿತಿಯಾಗಿದೆ.
ತಾತ್ಕಾಲಿಕ ವ್ಯವಸ್ಥೆ: ಸದ್ಯ ತ್ಯಾಜ್ಯ ರಾಶಿ ಬಿದ್ದು ಅಪಾಯದಲ್ಲಿರುವ ಮನೆಯವರಿಗೆ ಹುಡ್ಕೋ ಕಾಲನಿಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ವ್ಯವಸ್ಥೆ ಮಾಡಲಾಗುವುದು ಎಂದು ಭರತ್ ಶೆಟ್ಟಿ ಹೇಳಿದರು.
ಅವೈಜ್ಞಾನಿಕ ಡಂಪಿಂಗ್ ಯಾರ್ಡ್: ಪಚ್ಚನಾಡಿ ಡಂಪಿಂಗ್ ಯಾರ್ಡ್ ಅವೈಜ್ಞಾನಿಕವಾಗಿದೆ. ಇಲ್ಲಿನ ಸಂಸ್ಕರಣಾ ಘಟಕದ ಸಾಮರ್ಥ್ಯಕ್ಕಿಂತ ಇಲ್ಲಿನ ಬರುವ ತ್ಯಾಜ್ಯದ ಪ್ರಮಾಣ ಹೆಚ್ಚಾಗಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.