Advertisement
ತ್ಯಾಜ್ಯ ರಾಶಿಗೆ ಬೆಂಕಿ ಬಿದ್ದಿರುವುದರಿಂದ ಗುರುವಾರ ಸಂಜೆ ವೇಳೆಗೆ ವಾಮಂಜೂರು ಪ್ರದೇಶವಿಡೀ ದಟ್ಟ ಹೊಗೆ ಆವರಿಸಿತ್ತು. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಹೊಗೆ ಆವರಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮನಪಾ ಅಧಿಕಾರಿಗಳು ರಾತ್ರಿಯಿಡೀ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದರಿಂದ ಶನಿವಾರ ಸಂಜೆ ವೇಳೆಗೆ ಹೊಗೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಬೆಳಗ್ಗಿನ ಹೊತ್ತಲ್ಲಿ ಹೊಗೆ ಹೆಚ್ಚಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ತ್ಯಾಜ್ಯ ವಿಲೇವಾರಿ ಪ್ರದೇಶದ ಸಮೀಪದಲ್ಲಿ ಹಲವಾರು ಕುಟುಂಬಗಳು ವಾಸವಾಗಿದ್ದು, ಉಸಿರಾಟದೊಂದಿಗೆ ದೇಹ ಸೇರುವ ಹೊಗೆಯಿಂದಾಗಿ ಜನರಿಗೆ ಅನಾರೋಗ್ಯ ಭೀತಿ ಉಂಟಾಗಿದೆ. ಸ್ಥಳೀಯ ಮನೆಯ ಮಹಿಳೆ ಮತ್ತು ಅವರ ಪುತ್ರಿ ಶೀತ-ಜ್ವರದಿಂದ ಬಳಲುತ್ತಿದ್ದು, ಹೊಗೆಯಿಂದಾಗಿ ಗಂಟಲು ಕೆರೆತ ಉಂಟಾಗಿದೆ. ಆದರೆ ತ್ಯಾಜ್ಯ ವಿಲೇವಾರಿ ಘಟಕದಿಂದ ಬಂದ ಹೊಗೆ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದರೆ ನಂಬುವವರೂ ಇಲ್ಲ ಎಂದು ‘ಉದಯವಾಣಿ-ಸುದಿನ’ ಜತೆ ಅಳಲು ತೋಡಿಕೊಂಡಿದ್ದಾರೆ. ಎಷ್ಟು ಮಂದಿ ಅನಾರೋಗ್ಯಕ್ಕೊಳಗಾಗಿರುವರೋ ಗೊತ್ತಿಲ್ಲ. ಆದರೆ ಇದನ್ನು ಸಂಬಂಧಪಟ್ಟವರಲ್ಲಿ ತಿಳಿಸಿದರೆ ಪ್ರತಿ ಬಾರಿಯೂ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಸ್ಥಳೀಯರಾದ ರವೀಂದ್ರ ಭಟ್ ಮಂದಾರಬೈಲು ತಿಳಿಸಿದ್ದಾರೆ.