Advertisement

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

11:53 PM Mar 21, 2023 | Team Udayavani |

ಬೆಂಗಳೂರು: ಅಕ್ರಮಗಳಿದ್ದರೂ ಸಂಸ್ಥೆಗಳಿಗೆ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಅನುಮತಿ ನೀಡಲು ಅವಕಾಶ ಕಲ್ಪಿಸಿ ಹೊರಡಿಸಿದ್ದ ನಿರ್ಣಯವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಹಿಂತೆಗೆದುಕೊಂಡಿದ್ದರೂ ಅಕ್ರಮ ಎಸಗಿರುವ ಸಂಸ್ಥೆಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಹಿಂದೆ ದೊಡ್ಡ ಪ್ರಮಾಣದ ಅಕ್ರಮವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌ ಆರೋಪಿಸಿದ್ದಾರೆ.

Advertisement

ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲಿ (2007) ಮಾಲಿನ್ಯ ಮಂಡಳಿಯು ಸಂಸ್ಥೆಗಳು ಅಕ್ರಮವೆಸಗಿದ್ದರೂ ಅದನ್ನು ಆಡಳಿತ ಶುಲ್ಕ ವಿಧಿಸಿ ಸಕ್ರಮಗೊಳಿಸುವ ನಿರ್ಣಯ ಕೈಗೊಂಡಿತ್ತು. ಆದರೆ ಈ ನಿರ್ಣಯವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ತಾನು ನಿರ್ಣಯ ಹಿಂತೆಗೆದುಕೊಳ್ಳುವುದಾಗಿ 2015ರಲ್ಲಿ ಹೇಳಿತ್ತು. ಆಗ ನ್ಯಾಯಾಲಯವು ಈ ನಿರ್ಣಯದಂತೆ ಸ್ಥಾಪನೆಗೆ ಅನುಮತಿ ಪಡೆದಿರುವ ಅನಧಿಕೃತ ನಿರ್ಮಾಣಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ ಸರ್ಕಾರ ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಉಚ್ಚ ನ್ಯಾಯಾಲಯವು ಈ ಅವಧಿಯಲ್ಲಿ ಮಂಡಳಿಯಿಂದ ಅನುಮತಿ ಪಡೆದ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವಂತೆ 2022ರ ಜುಲೈಯಲ್ಲಿ ಆದೇಶ ನೀಡಿದೆ. ಆದರೆ ಈ ಆದೇಶ ನೀಡಿದ ಬರೋಬ್ಬರಿ ಎಂಟು ತಿಂಗಳ ಬಳಿಕ ಮಂಡಳಿಯು ಈ ಆದೇಶದ ಪುನರ್‌ ಪರಿಶೀಲನೆ ನಡೆಸುವಂತೆ ಅರ್ಜಿ ಹಾಕಿರುವುದು ಮಂಡಳಿಯ ನಿರ್ಲಕ್ಷ್ಯತನ ಮತ್ತು ಕಾಲಹರಣದ ಉದ್ದೇಶವನ್ನು ತೋರಿಸುತ್ತದೆ ಎಂದು ದೂರಿದ್ದಾರೆ.

2007 ರಿಂದ 2015ರ ಮಧ್ಯೆ 1,316 ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ಸ್ಥಾಪನಾ ಸಮ್ಮತಿ ನೀಡಲಾಗಿದೆ. ಮಂಡಳಿಯು 2007ರಲ್ಲಿ ಸಮ್ಮತಿ ಪತ್ರ ನೀಡುವ ತೀರ್ಮಾನ ಕೈಗೊಂಡಿರುವುದೇ ತಪ್ಪು. ಈ ನಿರ್ಣಯದ ಹಿಂದೆ ಅಕ್ರಮವಿದೆ ಎಂದು ಅವರು ಆರೋಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next