Advertisement

ಓಝೋನ್‌ ಪದರ ರಕ್ಷಣೆ ಅಗತ್ಯ

03:09 PM Sep 20, 2017 | |

ಚಿತ್ರದುರ್ಗ: ಓಝೋನ್‌ ಪದರ ನಾಶವಾದರೆ ನಾವು ಮಕ್ಕಳನ್ನು ಹೊರಗಡೆ ಕಳುಹಿಸದೆ ಮನೆಯಲ್ಲೇ ಕಿಟಕಿ, ಬಾಗಿಲು ಮುಚ್ಚಿ ಅವರನ್ನು ಸೂರ್ಯನ ವಿಕಿರಣಗಳಿಂದ ರಕ್ಷಿಸಬೇಕಾಗುತ್ತದೆ ಎಂದು ಪರಿಸರವಾದಿ  ಡಾ| ಎಚ್‌.ಕೆ.ಎಸ್‌. ಸ್ವಾಮಿ ಎಚ್ಚರಿಸಿದರು.

Advertisement

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ, ಸಂತ ಜೋಸೆಫರ ಬಾಲಕಿಯರ ಹಿರಿಯ ಮತ್ತು ಪ್ರೌಢಶಾಲೆ, ಋಷಿ ಸಂಸ್ಕೃತಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕಲಾ ಚೈತನ್ಯ ಸೇವಾ ಸಂಸ್ಥೆ ಇವುಗಳ ಸಂಯುಕ್ತಾಶ್ರದಲ್ಲಿ ಅಂತಾರಾಷ್ಟ್ರೀಯ ಓಜೋನ್‌ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಥಾದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಕಣ್ಣಿಗೆ ಕನ್ನಡಕ ಹಾಕಿ ಕಣ್ಣಿನ ಪೊರೆ ಬಾರದ ರೀತಿ ಕಾಪಾಡಬೇಕಾದ ದಿನಗಳು ದೂರವಿಲ್ಲ. ಹೆಚ್ಚುತ್ತಿರುವ
ವಾಯುಮಾಲಿನ್ಯಕ್ಕೆ ಕಾರಣ ಹುಡುಕುತ್ತಿದ್ದೇವೆ. ಇನ್ನೂ ಹೆಚ್ಚು ಹೆಚ್ಚು ವಾಹನಗಳನ್ನ ಬಳಸುತ್ತಿದ್ದು, ಪೆಟ್ರೋಲ್‌, ಡೀಸೆಲ್‌ ಸುಡುತ್ತಾ ಕೈಗಾರಿಕೆಗಳನ್ನು ಹೆಚ್ಚಿಸಿಕೊಂಡು ಓಝೋನ್‌ ಪರದೆ ನಾಶಕ್ಕೆ ಕಾರಣರಾಗುತ್ತಿದ್ದೇವೆ ಎಂದು ಆತಂಕ
ವ್ಯಕ್ತಪಡಿಸಿದರು.

ಚಿತ್ರಕಲಾವಿದ ನಾಗರಾಜ ಬೇದ್ರೆ ಮಾತನಾಡಿ, ಬಣ್ಣಗಳಿಂದ ನೀರಿನ ಮಾಲಿನ್ಯವಾಯಿತು. ಈಗ ಗಾಳಿಗೆ ರಾಸಾಯನಿಕ ಬಿಟ್ಟು ಮಾಲಿನ್ಯ ಹೆಚ್ಚಾಗಿಸುತ್ತಿದ್ದೇವೆ. ಇದರಿಂದ ಓಜೋನ್‌ ಪದರ ಕ್ಷೀಣಿಸುತ್ತಿದೆ. ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಸುಗಂಧ ದ್ರವ್ಯಗಳ ಕ್ಯಾನ್‌ಗಳಲ್ಲಿ ಬಳಸುವ ಅನಿಲದ ಬಗ್ಗೆ ನಾವು ಎಚ್ಚರ ವಹಿಸಲಿಲ್ಲ. ಬೆಂಕಿ ನಂದಿಸುವ ಸಿಲಿಂಡರ್‌ನಲ್ಲಿ ಸಿಎಫ್‌ಸಿ ತುಂಬಲಾಗುತ್ತದೆ. ಥರ್ಮೋಕೋಲ್‌ ಉತ್ಪಾದನೆಗೆ ಸಿಎಪ್ಸಿ ಬಳಸುತ್ತಿದ್ದೇವೆ. ರಾಸಾಯನಿಕಗಳ ಬಳಕೆಯಾಗಿ ಓಝೋನ್‌ ಪದರಕ್ಕೆ ತೊಂದರೆಯಾಗಿದೆ. ಗೊಬ್ಬರಗಳಲ್ಲಿರುವ ನೈಟ್ರಸ್‌ ಆಕ್ಸೈಡ್‌ ಸಹ ಓಝೋನ್‌ ನಾಶಕ್ಕೆ ದಾರಿಯಾಗಿದೆ ಎಂದರು.

ಮುಖ್ಯ ಶಿಕ್ಷಕಿ ನೇತ್ರಾವತಿ, ದೈಹಿಕ ಶಿಕ್ಷಕ ದೀಕ್ಷಿತ್‌, ತಿಪ್ಪೇಸ್ವಾಮಿ, ಗುರುರಾಜ್‌, ಸಹಶಿಕ್ಷಕಿ ನೀಲವೇಣಿ, ಪರಿಸರ ಇಲಾಖೆಯ ಯೂನಸ್‌, ಸುರೇಶ್‌, ಸಿದ್ದಲಿಂಗಯ್ಯ,ಆನಂದ ಇದ್ದರು. ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಗಣಪತಿ ಚೌಧರಿ, ನಿತಿನ್‌ಕುಮಾರ್‌, ಶಾಫಿಲ್, ಶುಭ್ರಾ ಅವರಿಗೆ ಬಹುಮಾನ ವಿತರಿಸಲಾಯಿತು.

Advertisement

ಮಕ್ಕಳು ತಿನ್ನುವ ಆಹಾರದಲ್ಲಿ ಬಣ್ಣ ಬಣ್ಣದ ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತಿದೆ, ಸ್ವಚ್ಛ ನೀರಿಗಾಗಿ ಬಳಸುವ ಕ್ಲೋರಿನ್‌ ಅಂಶ ಕೂಡ ಜೀವಕ್ಕೆ ಅಪಾಯಕಾರಿ. ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನಾವು ಪರಿಸರ ಉಳಿಸಿಕೊಳ್ಳಬೇಕಾಗಿದೆ.
ನಾಗರಾಜ ಬೇದ್ರೆ, ಚಿತ್ರಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next