Advertisement

ಸಿದ್ಧಗೊಂಡಿತು ಸರಕಾರಿ ಆಸ್ಪತ್ರೆ ಆಮ್ಲಜನಕ ಘಟಕ

08:58 PM Aug 17, 2021 | Team Udayavani |

ಕುಂದಾಪುರ:  ಇಲ್ಲಿನ ಸರಕಾರಿ ಆಸ್ಪತ್ರೆ ಬಳಿ ನಿರ್ಮಾಣಗೊಂಡ ಆಕ್ಸಿಜನ್‌ ಉತ್ಪಾದನ ಘಟಕದ ನಿರ್ಮಾಣ ಕಾಮಗಾರಿ ಪೂರ್ಣವಾಗಿದ್ದು ಆ.19ರಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವ ರಿಂದ ಲೋಕಾರ್ಪಣೆಗೊಳ್ಳಲಿದೆ. ಮೂರು ತಿಂಗಳುಗಳ ಹಿಂದೆಯೇ ಇದು ನಿರ್ಮಾಣ ಪೂರ್ಣವಾಗಬೇಕಿದ್ದರೂ ಯಂತ್ರಗಳ ಸರಬರಾಜು ವಿಳಂಬದಿಂದಾಗಿ ತಡವಾಗಿದೆ.

Advertisement

60 ಲಕ್ಷ ರೂ. ವೆಚ್ಚ :

ಕೇಂದ್ರ ಸರಕಾರದ ಸೂಚನೆಯಂತೆ ಹೆದ್ದಾರಿ ಇಲಾಖೆ ಮುತುವರ್ಜಿಯಲ್ಲಿ ಕಾರ್ಪೋರೆಟ್‌ ಸಂಸ್ಥೆಗಳ ಸಿಎಸ್‌ಆರ್‌ ನಿಧಿಯಲ್ಲಿ ಮೆಡಿಕಲ್‌ ಆಮ್ಲ ಜನಕ ಉತ್ಪಾದನ ಘಟಕ ನಿರ್ಮಾಣಗೊಂಡಿದೆ. ಇದಕ್ಕೆ 60 ಲಕ್ಷ ರೂ. ವೆಚ್ಚವಾಗಿದ್ದು  ಯಂತ್ರದ ಖರ್ಚನ್ನು ಗೇಲ್‌ ಸಂಸ್ಥೆ ಭರಿಸಿದ್ದು ಇತರ ಖರ್ಚು ಸಂಸದರ ನಿಧಿಯಿಂದ ಬಳಕೆಯಾಗಿದೆ. ನೊಯ್ಡಾದ ಮಾಲೆಸಿವ್‌ ಸಂಸ್ಥೆ ಇದನ್ನು ನಿರ್ವಹಿಸಲಿದೆ.

ಕೋವಿಡ್‌ ಚಿಕಿತ್ಸೆ :

ಕೊರೊನಾ ಮೊದಲ ಅಲೆ ಸಂದರ್ಭ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ಕೋವಿಡ್‌ ಚಿಕಿತ್ಸೆ ರಾಜ್ಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು. ಎರಡನೇ ಅಲೆಯ ಸಂದರ್ಭದಲ್ಲೂ ಚಿಕಿತ್ಸೆ ಉತ್ತಮವಾಗಿಯೇ ನಡೆದಿತ್ತು. ಸರಕಾರಿ ಆಸ್ಪತ್ರೆಗಳ ಪೈಕಿ ಕೋವಿಡ್‌ ಚಿಕಿತ್ಸೆಗೆ, ಹೆರಿಗೆ ಹಾಗೂ ಇತರ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆ ಹೆಸರು ಪಡೆದಿದೆ.

Advertisement

ಅತೀ ಹೆಚ್ಚು ಕೋವಿಡ್‌ ರೋಗಿಗಳಿಗೆ ಹೆರಿಗೆ  ಮಾಡಿಸಿದ ಖ್ಯಾತಿಯೂ ಈ ಆಸ್ಪತ್ರೆಗೆ ಇದೆ. ಎರಡನೇ ಅಲೆಯ ಸಂದರ್ಭ ಅಲ್ಲಲ್ಲಿ ಆಕ್ಸಿಜನ್‌ಗೆ ಬೇಡಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರಕ್ಕೆ ಆಕ್ಸಿಜನ್‌ ಘಟಕ ಮಂಜೂರಾಗಿತ್ತು. ಲಕ್ಷ್ಮೀ ಸೋಮ ಬಂಗೇರ ಹೆರಿಗೆ ಆಸ್ಪತ್ರೆಯನ್ನು ಪೂರ್ಣಪ್ರಮಾಣದಲ್ಲಿ  ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು

ಈಗಲೂ ಕಾರ್ಯ ನಿರ್ವಹಿಸುತ್ತಿದೆ. 120 ಹಾಸಿಗೆಗಳ ಆಸ್ಪತ್ರೆಯಲ್ಲಿ ಐಸಿಯು ಹಾಗೂ ಆಕ್ಸಿಜನ್‌ ಬೆಡ್‌ಗಳು ಲಭ್ಯವಿವೆ. ರೆಡ್‌ಕ್ರಾಸ್‌ ಸಂಸ್ಥೆ ಸಹಿತ ಅನೇಕ ದಾನಿಗಳು ಇಲ್ಲಿಗೆ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಬಳಕೆ :

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ನಿರ್ಮಿಸಿದ ಹೊಸ ಕಟ್ಟಡ ಹಾಗೂ ಹಳೆ ಕಟ್ಟಡದಲ್ಲಿ ಆಕ್ಸಿಜನ್‌ ಪೈಪ್‌ಲೈನ್‌ ಅಳವಡಿಸಲಾಗಿದೆ. ವಾತಾವರಣದಲ್ಲಿ ಇರುವ ಗಾಳಿಯಲ್ಲಿ ಆಕ್ಸಿಜನ್‌, ನೈಟ್ರೋಜನ್‌ ಮೊದಲಾದ ಅಂಶಗಳಿರುತ್ತದೆ. ಇದರಿಂದ ಶುದ್ಧ ಆಮ್ಲಜನಕವನ್ನು ಪ್ರತ್ಯೇಕಿಸಿ ರೋಗಿಗಳಿಗೆ ನೀಡುವುದು ಈ ಯಂತ್ರದ ವಿಶೇಷತೆ. ಈ ಮೊದಲು ಜಂಬೋ ಸಿಲಿಂಡರ್‌ ಮೂಲಕ ಆಕ್ಸಿಜನ್‌ ಬಳಸಲಾಗುತ್ತಿತ್ತು. ಘಟಕ ರಚನೆಯಿಂದ ಆಕ್ಸಿಜನ್‌ ಉತ್ಪಾ ದನೆ ನಿರಂತರ 24 ತಾಸು ಕೂಡ ಆಗುತ್ತದೆ. ಐಸಿಯುಗೆ ಬೇಕಾದ ಸರಬರಾಜು ಮಾಡಲು ಸುಲಭ. ಹೆಚ್ಚುವರಿ ಬೆಡ್‌ಗಳಿಗೂ ಕೂಡ ಅಳವಡಿಸಲಾಗಿದ್ದು ಯಾವುದೇ ರೋಗಿ ದಾಖ ಲಾದರೂ ಸದ್ಯದ ಮಟ್ಟಿಗೆ ಆಕ್ಸಿಜನ್‌ ಕೊರತೆ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ.

ತಾಯಿ ಮಕ್ಕಳ ಆಸ್ಪತ್ರೆ ಮಂಜೂರು :

ಬಹು ದಿನಗಳ ಬೇಡಿಕೆಯಾದ ತಾಯಿ ಮಕ್ಕಳ ಆಸ್ಪತ್ರೆ ಕುಂದಾಪುರಕ್ಕೆ ಮಂಜೂರಾಗಿದ್ದು ಇದಕ್ಕೆ ಕೂಡ ಮಕ್ಕಳ ಐಸಿಯು ಸೇರಿದಂತೆ ವಿವಿಧ ಅಗತ್ಯಗಳಿಗೆ ಈ ಘಟಕ ನೆರವಾಗಲಿದೆ. ಇಲ್ಲಿ ಅತೀ ಹೆಚ್ಚು ಹೆರಿಗೆ ಆಗುತ್ತದೆಯಾದರೂ ವಿಶೇಷವಾಗಿ ತಾಯಿ ಮಕ್ಕಳ ಆಸ್ಪತ್ರೆ ಎಂದು ಪ್ರತ್ಯೇಕ ಇರಲಿಲ್ಲ. ಈಗ ಪ್ರತ್ಯೇಕ ಮಂಜೂರಾದ ಕಾರಣ ಹೆಚ್ಚುವರಿ ವೈದ್ಯರು ಹಾಗೂ ಸಿಬಂದಿ ನೇಮಕವಾಗಲಿದೆ.

ಭಟ್ಕಳ ಸೇರಿದಂತೆ ವಿವಿಧೆಡೆಯಿಂದ ಇಲ್ಲಿಗೆ ಚಿಕಿತ್ಸೆಗಾಗಿ ಜನ ಆಗಮಿಸುತ್ತಾರೆ. ಪ್ರತಿದಿನ 400ಕ್ಕಿಂತ ಹೆಚ್ಚು ಮಂದಿ ಇಲ್ಲಿ ಚಿಕಿತ್ಸೆಗಾಗಿ  ನೋಂದಾಯಿಸುತ್ತಾರೆ. ಕೊರೊನಾ ಮೂರನೆಯ ಅಲೆ ಎದುರಿಸಲು ನಿರ್ಮಿತಿ ಸಂಸ್ಥೆಯ ಲಾಭಾಂಶದ ಹಣದಲ್ಲಿ ಉಡುಪಿಯಲ್ಲಿ 15, ಕುಂದಾಪುರದಲ್ಲಿ 10 ಐಸಿಯು ಹಾಸಿಗೆಗಳ ಮಕ್ಕಳ ಆಸ್ಪತ್ರೆ ನಿರ್ಮಾಣ ವಾಗಲಿದೆ ಎಂದು ಸಿದ್ಧತೆ ನಡೆದಿತ್ತು. ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅನುಭವಿಗಳ ವರದಿ ಮೇಲೆ ಈ ಕ್ರಮ ಕೈಗೊಳ್ಳಲಾಗಿತ್ತು.

100 ಆಕ್ಸಿಜನ್‌  ಬೆಡ್‌ : ತಾಲೂಕು ಆಸ್ಪತ್ರೆಯಲ್ಲಿ ಒಟ್ಟು 180 ಬೆಡ್‌ಗಳಿವೆ. 20 ಐಸಿಯು ಬೆಡ್‌ಗಳಿವೆ. 100 ಆಕ್ಸಿಜನ್‌ ಬೆಡ್‌ಗಳಿಗೆ ಸಿದ್ಧಪಡಿಸಲಾಗಿದೆ. 11 ವೆಂಟಿಲೇಟರ್‌ ಬೆಡ್‌ಗಳಿವೆ. ನೂತನ ಘಟಕ ನಿಮಿಷಕ್ಕೆ 500 ಲೀ. ಉತ್ಪಾದನೆ ಮಾಡಲಿದೆ.

ವಾತಾವರಣದಲ್ಲಿನ ಗಾಳಿಯಿಂದ ಆಕ್ಸಿಜನ್‌ ಅನ್ನು ಪ್ರತ್ಯೇಕಿಸಿ ಕೊಡುವ ಘಟಕ ಸ್ಥಾಪನೆಯಾದ ಕಾರಣ ಸಿಲಿಂಡರ್‌ ಮೂಲಕ ಆಕ್ಸಿಜನ್‌ ತರಿಸಬೇಕಾದ ಅನಿವಾರ್ಯ ಇರುವುದಿಲ್ಲ. ಹಾಗಿದ್ದರೂ ಸಿಲಿಂಡರ್‌ಗಳನ್ನು ಆಪತ್ಕಾಲದ ಬಳಕೆಗಾಗಿ, ತುರ್ತು ಸ್ಥಿತಿ ನಿಭಾವಣೆಗಾಗಿ ಇಟ್ಟುಕೊಳ್ಳಲಾಗುತ್ತದೆ. ಡಾ| ರಾಬರ್ಟ್‌ ರೆಬೆಲ್ಲೋ, ಆಡಳಿತ ಶಸ್ತ್ರಚಿಕಿತ್ಸಕರು ಉಪವಿಭಾಗ ಆಸ್ಪತ್ರೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next