ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರ್ಘಟನೆಯಲ್ಲಿ ಸಾವಿಗೀಡಾ ದವರ ಕುಟುಂಬಸ್ಥರಿಗೆ 50 ಲಕ್ಷ ಪರಿಹಾರ, ಸಂತ್ರಸ್ತ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ಈ ದುರ್ಘಟನೆಗೆ ಕಾರಣಕರ್ತರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ನಗರದಲ್ಲಿ ನಡೆದ ಸಂತ್ರಸ್ತ ಕುಟುಂಬಗಳ ಸಮಾಲೋಚನಾ ಸಭೆಯಲ್ಲಿ ಎಸ್ ಡಿಪಿಐ ಒತ್ತಾಯಿಸಿತು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜಿದ್ ಅವರ ಅಧ್ಯಕ್ಷತೆಯಲ್ಲಿ ಸಂತ್ರಸ್ತ ಕುಟುಂಬಸ್ಥರೊಂದಿಗೆ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸಮಾಲೋಚನಾ ಸಭೆ ಮಾಡಲಾಯಿತು.
ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2 ರಂದು ಮಧ್ಯರಾತ್ರಿ ಆಕ್ಸಿಜನ್ ಪೂರೈಕೆಯಾಗದೆ 37 ಮಂದಿ ಮೃತರಾದರು. ಈ ಘಟನೆ ನಡೆದು ಎರಡು ವರ್ಷಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ, ಈಗಾಗಲೇ ನ್ಯಾಯ ಮೂರ್ತಿ ವೇಣುಗೋಪಾಲಗೌಡ ಅವರು, ತಮ್ಮ ಪ್ರಾಥಮಿಕ ತನಿಖಾ ವರದಿಯಲ್ಲಿ ಘಟನೆಗೆ ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಅಂದಿನ ಜಿಲ್ಲಾಧಿಕಾರಿಯವರ ಕಾರ್ಯವೈಖರಿ ಕುರಿತು ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖೀಸಿದ್ದರು. ಇಷ್ಟಾದರೂ ಸಹ ಜಿಲ್ಲಾಧಿಕಾರಿ ಸೇರಿದಂತೆ ಯಾವ ಒಬ್ಬ ಅಧಿಕಾರಿಯ ವಿರುದ್ಧವೂ ಸಹ ಸರ್ಕಾರ ಇಲ್ಲಿಯವರೆಗೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಇದು ದುರದೃಷ್ಟಕರ ಎಂದು ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.
ಪ್ರಸ್ತುತ ಸಿದ್ದರಾಮಯ್ಯರವರ ನೇತೃತ್ವದಲ್ಲಿರುವ ಸರ್ಕಾರ ಆಕ್ಸಿಜನ್ ದುರ್ಘಟನೆ ಸಂಬಂಧ ಮರು ತನಿಖೆ ಮಾಡುವ ಕುರಿತು ಪ್ರಸ್ತಾಪ ಮಾಡಿರುವುದು ಸ್ವಾಗತಾರ್ಹ. ತನಿಖೆ ಪ್ರಾರಂಭ ಮಾಡುವ ಮುಂಚೆ ದುರ್ಘಟನೆ ಸಂದರ್ಭದಲ್ಲಿದ್ದ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳನ್ನು ತಕ್ಷಣ ಅಮಾನತ್ತು ಮಾಡಿ ತನಿಖೆ ಪ್ರಾರಂಭಿಸಬೇಕು, ಬಹಳ ಮುಖ್ಯ ವಾಗಿ ನ್ಯಾಯಮೂರ್ತಿ ಎ.ಎನ್.ವೇಣು ಗೋಪಾಲ್ ಗೌಡರವರ ಪ್ರಾಥಮಿಕ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಸಾವಿಗೀಡಾದ 37 ಮಂದಿಯ ಕುಟುಂಬಸ್ಥರಿಗೆ ತಲಾ 50 ಲಕ್ಷ ಪರಿಹಾರ ಹಾಗೂ ಸಂತ್ರಸ್ತ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಏಕೆಂದರೆ ಈಗಾಗಲೇ ಈ ದುರ್ಘಟನೆಯಾಗಿ 2 ವರ್ಷಗಳು ಕಳೆದು ಹೋಗಿದೆ. ಇನ್ನು ಮತ್ತೂಮ್ಮೆ ಹೊಸ ತನಿಖೆ ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡುವುದಾದರೆ ಸುದೀರ್ಘ ವಾದ ಕಾಲಹರಣವಾಗುತ್ತದೆ. ಆದುದರಿಂದ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ತಕ್ಷಣ ಪರಿಹಾರ ಘೋಷಿಸಬೇಕೆಂದು ಅಬ್ದುಲ್ ಮಜೀದ್ ಆಗ್ರಹಿಸಿದರು.
Related Articles
ಜಿಲ್ಲಾಧ್ಯಕ್ಷ ಅಬ್ರಾರ್ ಅಹ್ಮದ್, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಆರೀಫ್, ಜಿಲ್ಲಾ ಉಪಾಧ್ಯಕ್ಷ ಎಂ. ಮಹೇಶ್, ಖಜಾಂಚಿ ನಯಾಜ್ ಉಲ್ಲಾ, ನಗರ ಸಭಾ ಸದಸ್ಯರಾದ ಕಲೀಲ್ ಉಲ್ಲಾ, ಮೊಹ ಮ್ಮದ್ ಅಮೀಕ್, ಮುಖಂಡರಾದ ಇಸ್ರಾರ್ ಪಾಷಾ, ಸಂತ್ರಸ್ತ ಕುಟುಂಬದ ಸದಸ್ಯರು ಇದ್ದರು.