ಹಾವೇರಿ: ಧರ್ಮಸ್ಥಳ ಧರ್ಮಾಧಿಕಾರಿಗಳ ಟ್ರಸ್ಟ್ ವತಿಯಿಂದ ಜಿಲ್ಲೆಯ ಕೋವಿಡ್ ಸೋಂಕಿತರ ಬಳಕೆಗಾಗಿ ಉಚಿತವಾಗಿ ಪೂರೈಸಿರುವ ಐದು ಕೆಎಲ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕರ್ ಅನ್ನು ಶನಿವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ಬರಮಾಡಿಕೊಂಡರು.
ಕೋವಿಡ್-19 ಎರಡನೇ ಅಲೆಯ ತೀವ್ರ ಸಂಕಷ್ಟದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಎಲ್ಲೆಡೆ ಕಾಡುತ್ತಿದೆ. ತುರ್ತು ಅಗತ್ಯತೆ ಇರುವ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ಜತೆಗೆ ಗ್ರಾಮೀಣ ಭಾಗದ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಗುಣಮುಖರಾದವರನ್ನು ಮನೆಗೆ ಕರೆದೊಯ್ಯಲು ಅನುಕೂಲವಾಗುವಂತೆ ಐದು ವಾಹನಗಳ ಉಚಿತ ವ್ಯವಸ್ಥೆ ಮಾಡುವ ಮೂಲಕ ಕೋವಿಡ್ ರೋಗಿಗಳ ನೆರವಿಗೆ ಸಹಾಯ ಹಸ್ತ ಚಾಚಿದ್ದಾರೆ.
ವಾಹನ ವ್ಯವಸ್ಥೆ: ತುರ್ತು ಸಂದರ್ಭಗಳಲ್ಲಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಗುಣಮುಖರಾದ ಬಡ ರೋಗಿಗಳನ್ನು ಮನೆಗೆ ಕಳುಹಿಸಲು ಅನುಕೂಲವಾಗುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಜಿಲ್ಲೆಗೆ ಐದು ವಾಹನಗಳನ್ನು ಒದಗಿಸಲಾಗಿದೆ. ಈ ವಾಹನಗಳನ್ನು ಧರ್ಮಸ್ಥಳ ವ್ಯವಸ್ಥಾಪನ ಸಮಿತಿ ನಿರ್ವಹಿಸಲಿದೆ.
ಸವಣೂರು-ಶಿಗ್ಗಾವಿ ತಾಲೂಕಿಗೆ ಒಂದು ವಾಹನ. ಹಾವೇರಿ-ಬ್ಯಾಡಗಿ ತಾಲೂಕಿಗೆ, ಹಾನಗಲ್ಲ, ಹಿರೇಕೆರೂರು ಹಾಗೂ ರಾಣಿಬೆನ್ನೂರಿಗೆ ತಲಾ ಒಂದು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಯೋಜನಾ ಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರು ಹಾಗೂ ತಾಲೂಕು ಮಟ್ಟದ ಸಂಘದ ಯೋಜನಾ ಧಿಕಾರಿಗಳು ಸಮನ್ವಯ ಸಾಧಿ ಸಿ ಅವಶ್ಯವಿರುವ ಕೋವಿಡ್ ಸೋಂಕಿತರಿಗೆ ವಾಹನ ಸೇವೆ ಕಲ್ಪಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಭಿನಂದನೆ: ಜಿಲ್ಲೆಗೆ ಉಚಿತವಾಗಿ ಟ್ಯಾಂಕರ್ ಮೂಲಕ ಆಕ್ಸಿಜನ್ ಪೂರೈಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಜಿಲ್ಲಾ ಧಿಕಾರಿ ಸಂಜಯ ಶೆಟ್ಟಣ್ಣವರ ಅವರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ. ಈ ಕುರಿತಂತೆ ಧರ್ಮಾ ಧಿಕಾರಿಗಳಿಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿಗಳು, ಕೋವಿಡ್ ಎರಡನೇ ಅಲೆಯ ವೈದ್ಯಕೀಯ ತುರ್ತು ಸಂದರ್ಭ ಘೋಷಣೆಯಾಗಿದೆ. ಕೊರೊನಾ ಸೋಂಕಿತರ ಪೈಕಿ ಕೆಲವರಿಗೆ ಉಸಿರಾಟದ ತೊಂದರೆಯಾಗಿದೆ. ಇವರ ತುರ್ತು ಚಿಕಿತ್ಸೆಗೆ ಮೆಡಿಕಲ್ ಆಕ್ಸಿಜನ್ ತುರ್ತು ಅವಶ್ಯವಿರುವ ಸಂದರ್ಭದಲ್ಲಿ ತಾವು ರೋಗಿಗಳಿಗೆ ಸಹಕಾರಿಯಾಗುವಂತೆ ಆಮ್ಲಜನಕವನ್ನು ಜಿಲ್ಲಾಸ್ಪತ್ರೆಗೆ ಪೂರೈಸಿದ್ದೀರಿ ಹಾಗೂ ಸೋಂಕಿತರ ಸಾಗಾಣಿಕೆಗಾಗಿ ಪ್ರತಿ ತಾಲೂಕಿಗೆ ವಾಹನಗಳನ್ನು ಉಚಿತವಾಗಿ ಒದಗಿಸುವ ಮೂಲಕ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದೀರಿ. ಈ ಮಹಾತ್ಕಾರ್ಯಕ್ಕೆ ಜಿಲ್ಲಾಡಳಿತದಿಂದ ತಮಗೆ ಹಾಗೂ ತಮ್ಮ ಸಿಬ್ಬಂದಿಗೆ ಸಂತೋಷದಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಆಕ್ಸಿಜನ್ ವಾಹನ ಬರಮಾಡಿಕೊಂಡ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಿ.ಎಸ್.ಹಾವನೂರು, ಸಹಾಯಕ ಔಷಧ ನಿಯಂತ್ರಕರಾದ ನೀಲಿಮಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿ ಕಾರಿ ಮಲ್ಲಿಕಾರ್ಜುನ ಮಠದ, ಧರ್ಮಸ್ಥಳ ಧರ್ಮಾಧಿ ಕಾರಿ ಯೋಜನಾ ಸಂಘದ ಜಿಲ್ಲಾ ಯೋಜನಾ ನಿರ್ದೇಶಕ ಮಂಜುನಾಥ್ ಇತರರು ಹಾಜರಿದ್ದರು.