Advertisement

2ನೇ ಮೀರಜ್‌ ಖ್ಯಾತಿ ಬಾಗಲಕೋಟೆಯಲ್ಲಿ ಆಕ್ಸಿಜನ್‌ ಆತಂಕ

08:50 PM May 06, 2021 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ 2ನೇ ಮೀರಜ್‌ ಎಂಬ ಖ್ಯಾತಿ ಹೊಂದಿದ ಬಾಗಲಕೋಟೆ, ಇದೀಗ ಆಕ್ಸಿಜನ್‌ ಕೊರತೆ ಆತಂಕ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಮಾರಿಗೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯೂ ಸೇರಿದಂತೆ 38 ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿದೆ.

Advertisement

ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ನಿತ್ಯ 3 ಕೆಎಲ್‌ (ಕಿಲೋ ಲೀಟರ್‌) ಬಳಕೆಯಾಗುತ್ತಿದೆ. 38 ಖಾಸಗಿ ಆಸ್ಪತ್ರೆಗಳಲ್ಲಿ ನಿತ್ಯವೂ 14 ಕೆಎಲ್‌ ಬಳಕೆಯಾಗುತ್ತಿದೆ. ಜಿಲ್ಲಾಸ್ಪತ್ರೆ-ಖಾಸಗಿ ಆಸ್ಪತ್ರೆಗಳು ಸೇರಿ ನಿತ್ಯವೂ 17 ಕೆಎಲ್‌ ಆಕ್ಸಿಜನ್‌ ಬಳಕೆ ಆಗುತ್ತಿದೆ. ಆದರೆ ಜಿಲ್ಲಾಸ್ಪತ್ರೆಗೆ 1.5 ಕೆಎಲ್‌ ಇರ್‌ ರೆಗ್ಯೂಲರ್‌ ಪೂರೈಕೆಯಾಗುತ್ತಿದ್ದರೆ, ಖಾಸಗಿ ಆಸ್ಪತ್ರೆಗಳಿಗೆ 6 ಕೆಎಲ್‌ ಆಕ್ಸಿಜನ್‌ ಪೂರೈಕೆ ಆಗುತ್ತಿದೆ. ಜಿಲ್ಲೆಗೆ ಬೇಕಿರುವುದು 17ರಿಂದ 18 ಕೆಎಲ್‌ ಆದರೆ ಜಿಲ್ಲೆಗೆ ಬರುತ್ತಿರುವುದು 7.5 ಕೆಎಲ್‌ ಮಾತ್ರ. ಹೀಗಾಗಿ ಜಿಲ್ಲೆಗೆ 18 ಕೆಎಲ್‌ ಆಕ್ಸಿಜನ್‌ ನಿತ್ಯ ಪೂರೈಕೆ ಮಾಡಬೇಕೆಂಬ ಬೇಡಿಕೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಸಲ್ಲಿಸಲಾಗಿದೆ.

926 ಜನ ಸೋಂಕಿತರು ಆಕ್ಸಿಜನ್‌ ಮೇಲೆ: ಜಿಲ್ಲೆಯಲ್ಲಿ ಸಧ್ಯ 3287 ಸಕ್ರಿಯ ಸೋಂಕಿತರಿದ್ದು, ಅದರಲ್ಲಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 437 ಜನ ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ 817 ಜನ ಹಾಗೂ 2033 ಜನ ಹೋಂ ಐಸೋಲೇಶನ್‌ನಲ್ಲಿದ್ದಾರೆ. ಮುಖ್ಯವಾಗಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 348 ಜನ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 578 ಜನ ಸೇರಿ ಒಟ್ಟು 926 ಜನ ಆಕ್ಸಿಜನ್‌ ಬೆಡ್‌ನ‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೆರವಾದ ಕುಮಾರೇಶ್ವರ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 348 ಜನ ಆಕ್ಸಿಜನ್‌ ಬೆಡ್‌ ನಲ್ಲಿದ್ದು, ನಿತ್ಯ 3 ಕೆಎಲ್‌ ಆಕ್ಸಿಜನ್‌ ಬಳಕೆಯಾಗುತ್ತಿದೆ. ಆದರೆ ಮಂಗಳವಾರ ಸಂಜೆಯೇ ಆಕ್ಸಿಜನ್‌ ಖಾಲಿಯಾಗುತ್ತ ಬಂದಿತ್ತು. ತಕ್ಷಣ ನೆರವಿಗೆ ಬಂದಿರುವ ಬಾಗಲಕೋಟೆ ಶಾಸಕರೂ ಆಗಿರುವ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ, ತಮ್ಮ ಸಂಸ್ಥೆಯ ಬೃಹತ್‌ ಕುಮಾರೇಶ್ವರ ಆಸ್ಪತ್ರೆಗೆ ಬಂದಿದ್ದ 1.50 ಟನ್‌ ಆಕ್ಸಿಜನ್‌ ಅನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ನೀಡಿದ್ದಾರೆ. ಹೀಗಾಗಿ ಕುಮಾರೇಶ್ವರ ಆಸ್ಪತ್ರೆಯಿಂದ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಆಕ್ಸಿಜನ್‌ ನೀಡಿದ್ದರಿಂದ ಸದ್ಯ ಆತಂಕವಿಲ್ಲ. ಆದರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು, ಆಕ್ಸಿಜನ್‌ ವಿಷಯದಲ್ಲಿ ತೀವ್ರ ಆತಂಕದಲ್ಲಿದ್ದು, ಬುಧವಾರ ರಾತ್ರಿ ಕಳೆಯುವುದೇ ದುಸ್ತರವಾಗಿದೆ ಎನ್ನುತ್ತಿದ್ದಾರೆ.

ಬಾಗಲಕೋಟೆ ನಗರದಲ್ಲೇ 192 ಆಸ್ಪತ್ರೆಗಳಿದ್ದು, ಇಡೀ ಜಿಲ್ಲೆಯಲ್ಲಿ ಕ್ಲಿನಿಕ್‌ ಸಹಿತ 814ಕ್ಕೂ ಹೆಚ್ಚು ಆಸ್ಪತ್ರೆ ಇವೆ. ಹೀಗಾಗಿ ಬಾಗಲಕೋಟೆಯನ್ನು “ಮೆಡಿಕಲ್‌ ಹಬ್‌’ ಎಂದೇ ಕರೆಯಲಾಗುತ್ತಿದೆ. ಇಲ್ಲಿಗೆ ವಿಜಯಪುರ, ಬಾಗಲಕೋಟೆ, ರಾಯಚೂರ, ಕೊಪ್ಪಳ, ಗದಗ ಜಿಲ್ಲೆಯ ರೋಗಿಗಳು ಬರುತ್ತಾರೆ. ಈ ಭಾಗದ ಹಲವು ಜಿಲ್ಲೆಯ ಜನರು, ವೈದ್ಯಕೀಯ ಚಿಕಿತ್ಸೆಗಾಗಿ ಬಾಗಲಕೋಟೆಯನ್ನೇ ಅವಲಂಬಿಸಿರುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

Advertisement

 

ವರದಿ : ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next