ರಾಮನಗರ: ತಾಲೂಕಿನ ಬಿಡದಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ನಿರ್ಮಿಸಲು ಟೊಯೋ ಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಮುಂದಾಗಿದ್ದು, ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು. ಭೂಮಿ ಪೂಜೆ ನಂತರ ಮಾತನಾಡಿದ ಶಾಸಕ ಎ.ಮಂಜುನಾಥ್, ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಸರ್ಕಾರದ ಪ್ರಯತ್ನಗಳಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸೇರಿದಂತೆ ಕಾರ್ಪೋರೇಟ್ ಸಂಸ್ಥೆಗಳು ನೆರವು ನೀಡುತ್ತಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಹ ಸಹಕಾರಿಯಾಗಿದೆ ಎಂದರು.
2 ತಿಂಗಳಲ್ಲಿ ನಿರ್ಮಾಣ: ಬಿಡದಿಯ ಸಮು ದಾಯ ಆರೋಗ್ಯ ಕೇಂದ್ರವನ್ನು 12 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಮುಂದಾಗಿರುವ ಟಿಕೆಎಂ, ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್ ಉತ್ಪಾದನಾ ಘಟಕವನ್ನು 1.36 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. 2 ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಘಟಕದಲ್ಲಿ ಸುಮಾರು 50ರಿಂದ 60 ಸಿಲಿಂಡರ್ ಆಕ್ಸಿಜನ್ ಉತ್ಪಾದಿಸುವ ಸಾಮಥ್ಯವುಳ್ಳದ್ದಾಗಿದೆ ಎಂದು ಟೊಯೋಟಾದ ಸಹಕಾಕ್ಕೆ ಜಿಲ್ಲೆಯ ಜನರ ಪರವಾಗಿ ಕೃತಜ್ಞತೆ ಅರ್ಪಿಸಿದರು.
ಸರ್ಕಾರಕ್ಕೆ ಟಿಕೆಎಂ ಸಹಕಾರ: ಕೋವಿಡ್ ಸೋಂಕು ಹಿನ್ನೆಲೆ ಟಿಕೆಎಂ ತನ್ನ ಸಿಎಸ್ಆರ್ ಚಟುವಟಿಕೆಗಳ ಮೂಲಕ 130 ಆಮ್ಲಜನಕ ಸಾಂದ್ರಕಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಗೆ 10 ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗಿದೆ. ಜಿಲ್ಲೆಯ ಆರೋಗ್ಯ ಇಲಾಖೆಗೆ ಆಂಬು ಬ್ಯಾಗ್ಗಳು, ಬೆಡ್ ಸೈಡ್ ಮಾನಿಟರ್ಗಳು, ಆಕ್ಸಿಮೀಟರ್ಗಳು, ಗ್ಲೂಕೋಮೀಟರ್ಗಳು, ಮಾಸ್ಕ್, ಫೇಸ್ ಶೀಲ್ಡ್ ಗಳನ್ನು ನೀಡಿರುವುದಾಗಿ, ಬಿಡದಿಯಲ್ಲಿ ಸುಸಜ್ಜಿತ ಅಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಟಿಕೆಎಂ ಅಧಿಕಾರಿಗಳು ತಿಳಿಸಿದರು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಸಿಎಸ್ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಿಕ ರಾಜೇಂದ್ರ ಹೆಗ್ಡೆ, ಬಿಡದಿ ಪುರಸಭೆ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಸಿ.ಲೋಕೇಶ್, ಸದಸ್ಯರಾದ ಕುಮಾರ್, ಉಷಾ, ರಮೇಶ್ ಕುಮಾರ್, ಮುಖ್ಯಾಧಿಕಾರಿ ರಮೇಶ್, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.