ಹುಬ್ಬಳ್ಳಿ: ಸ್ಥಳೀಯ ರಾಷ್ಟ್ರೋತ್ಥಾನ ರಕ್ತ ಕೇಂದ್ರ ವತಿಯಿಂದ ಇನ್ಫೋಸಿಸ್ ಫೌಂಡೇಶನ್, ಎಸ್.ಎಸ್.ಶೆಟ್ಟರ ಫೌಂಡೇಶನ್, ಬೆಲ್ಲದ ಶಿಕ್ಷಣ ಮತ್ತು ಕೃಷಿ ಪ್ರತಿಷ್ಠಾನ, ಕ್ಷಮತಾ ಸೇವಾ ಸಂಸ್ಥೆ, ಸೇವಾ ಭಾರತಿ ಟ್ರಸ್ಟ್, ಕೆ.ಎಚ್. ಪಟ್ವಾ ಫೌಂಡೇಶನ್, ರೌಂಡ್ ಟೇಬಲ್ ಇಂಡಿಯಾ ಸಹಕಾರದೊಂದಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಬ್ಯಾಂಕ್ ಬುಧವಾರ ಆರಂಭಿಸಲಾಯಿತು.
ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ರಘು ಅಕಮಂಚಿ ಮಾತನಾಡಿ, ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಸಮಾಜದ ಕಳಕಳಿ ಹೊಂದಿದ ಅನೇಕ ಸಂಘ-ಸಂಸ್ಥೆಗಳು, ಸಂಘಟನೆಗಳು ಸಹಾಯ ಕಾರ್ಯ ಮಾಡುತ್ತಿವೆ. ಸಮಾಜದ ಹಲವರು ಇದಕ್ಕೆ ಕೈಜೋಡಿಸುತ್ತಿದ್ದಾರೆ. ಸಮಾಜಮುಖೀ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರು ಯಾವ ಕೆಲಸ ಮಾಡದೆ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲವನ್ನೂ ಸರಕಾರದಿಂದಲೇ ನಿರೀಕ್ಷಿಸುತ್ತಿದ್ದಾರೆ ಎಂದರು.
ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಧರ್ಮದರ್ಶಿ ದತ್ತಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯ ರಕ್ತ ನಿಧಿ ಕೇಂದ್ರದಲ್ಲಿ ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು ಕೊಡಮಾಡಿದ 27 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳಿವೆ. ಇನ್ನು ಕೆಲವೇ ದಿನಗಳಲ್ಲಿ ಇನ್ನು 50 ಬರಲಿವೆ. ವೈದ್ಯರು ಸಲಹೆ ಮಾಡಿದ ಹು-ಧಾ.ದಲ್ಲಿ ಅವಶ್ಯಕತೆ ಇರುವ ರೋಗಿಗಳಿಗೆ ಈ ಸೇವೆ ಒದಗಿಸಲಾಗುವುದು. ಜತೆಗೆ ಸಂಸ್ಥೆಯು ಆಂಬ್ಯುಲೆನ್ಸ್ ಸೇವೆ, ಅವಶ್ಯ ಇರುವವರಿಗೆ ರಕ್ತ, ಕೋವಿಡ್ ಪ್ಲಾಸ್ಮಾ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಸೇರಿದಂತೆ ಇತರೆ ತುರ್ತು ಸೇವೆಗಳನ್ನು ನೀಡಲಾಗುತ್ತಿದೆ ಎಂದರು.
ಆರ್‌ಎಸ್‌ಎಸ್ ಪ್ರಮುಖ ಶ್ರೀಧರ ನಾಡಿಗೇರ, ಶಾ ದಾಮಜಿ ಜಾದವಜಿ ಛಡ್ಡಾ ಮೆಮೋರಿಯಲ್‌ನ ವೀರೇಂದ್ರ ಛಡ್ಡಾ, ಎಸ್. ಎಸ್. ಶೆಟ್ಟರ ಫೌಂಡೇಶನ್‌ದ ಸಂಕಲ್ಪ ಶೆಟ್ಟರ, ಮಲ್ಲಿಕಾರ್ಜುನ ಸಾವಕಾರ, ಕೆ.ಎಚ್. ಪಟ್ವಾ ಫೌಂಡೇಶನ್‌ದ ವಿನೋದ ಪಟ್ವಾ,ರೌಂಡ್ ಟೇಬಲ್ ಇಂಡಿಯಾದ ಕಿರಣ ಹೆಬಸೂರ ಮೊದಲಾದವರಿದ್ದರು. ಶ್ರೀಧರ ಜೋಶಿ ಸ್ವಾಗತಿಸಿದರು. ಕಿರಣ ಗಡ ನಿರೂಪಿಸಿದರು. ಕಿರಣ ಗುಡ್ಡದಕೇರಿ ವಂದಿಸಿದರು.