Advertisement

ಪತಂಜಲಿಯಲ್ಲಿ ಆಕ್ಸಿಜನ್‌ ಬೆಡ್‌ ವ್ಯವಸ್ಥೆ

06:06 PM May 01, 2021 | Team Udayavani |

ಕಾರವಾರ: ಕೋವಿಡ್‌- 19 ಎರಡನೇ ಅಲೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಈಗಾಗಲೇ ಕೆಲವೆಡೆ ಬೆಡ್‌ ಗಳು ಸಿಗದೇ ಸೋಂಕಿತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕಾರಣದಿಂದಾಗಿ ವೆಸ್ಟರ್ನ್ ನೇವಲ್‌ ಕಮಾಂಡ್‌ಗೆ ಒಳಪಡುವ ಗೋವಾದ ಐಎನ್‌ಎಚ್‌ಎಸ್‌ ಜೀವಂತಿ, ಕಾರವಾರದ ಐಎನ್‌ ಎಚ್‌ಎಸ್‌ ಪತಂಜಲಿ ಮತ್ತು ಮುಂಬೈನ ಐಎನ್‌ ಎಚ್‌ಎಸ್‌ ಸಂಧಾನಿಯಲ್ಲಿ ನಾಗರಿಕ ಆಡಳಿತ ಬಳಸಿಕೊಳ್ಳಲು ಆಕ್ಸಿಜನ್‌ ಸಹಿತ ಬೆಡ್‌ಗಳನ್ನು ಸಿದ್ಧಮಾಡಿದ್ದು, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.

Advertisement

ಕಾರವಾರದ ನೌಕಾ ಅಧಿಕಾರಿಗಳು ಸುಮಾರು 1500 ವಲಸೆ ಕಾರ್ಮಿಕರಿಗಾಗುವಷ್ಟು ಅಗತ್ಯ ವಸ್ತುಗಳು, ಪಡಿತರ ಮತ್ತು ಮೂಲ ಆರೋಗ್ಯ ಸೇವೆ ಒದಗಿಸಲು ವ್ಯವಸ್ಥೆ ಮಾಡಿದ್ದಾರೆ. ಸಶಸ್ತ್ರ ಪಡೆಗಳ ಆಸ್ಪತ್ರೆಗಳಲ್ಲೇ ಮೊದಲು ಎಂಬಂತೆ ಕಳೆದ ವರ್ಷ ಇಲ್ಲಿನ ಐಎನ್‌ಎಚ್‌ಎಸ್‌ ಪತಂಜಲಿಯಲ್ಲಿ ನಾಗರಿಕ ಕೋವಿಡ್‌- 19 ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿತ್ತು. ಈ ಬಾರಿ ಕೂಡ ಅವಶ್ಯಕತೆ ಇದ್ದರೆ ಕೋವಿಡ್‌ ರೋಗಿಗಳನ್ನು ಉಪಚರಿಸಲು ತುದಿಗಾಲಲ್ಲಿ ನಿಂತಿದೆ.

ಗೋವಾದ ನೌಕಾ ತಂಡಗಳು ಕೋವಿಡ್‌-19ರ ಮೊದಲ ಅಲೆಯಲ್ಲಿ ಸಮುದಾಯ ಅಡುಗೆ ಮನೆಗಳನ್ನು ತೆರೆದು ಸಹಕಾರ ನೀಡಿತ್ತು. ಈ ಬಾರಿ ಕೂಡ ಅಗತ್ಯವಿದ್ದರೆ ಅದೇ ರೀತಿಯ ಸಹಾಯ ನೀಡಲು ಸಿದ್ಧವಾಗಿವೆ. ಐಎನ್‌ಎಚ್‌ಎಸ್‌ ಜೀವಂತಿಯಲ್ಲಿ ನಾಗರಿಕರಿಗಾಗಿ ಕೆಲವು ಆಕ್ಸಿಜನ್‌ ಸಹಿತ ಬೆಡ್‌ಗಳನ್ನು ಮೀಸಲಿಟ್ಟಿದೆ. ನಗರ ಆಡಳಿತದಿಂದ ಆಸ್ಪತ್ರೆಗಳಿಗೆ ಆಕ್ಸಿಜನ್‌ ಒದಗಿಸಲು ಕೋರಿದರೆ ಗೋವಾ ನೇವಲ್‌ ಏರಿಯಾ ಹೆಡ್‌ಕ್ವಾಟ್ರಸ್‌ ಅದನ್ನು ಒದಗಿಸಲು ಕೂಡ ಸಜ್ಜಾಗಿದೆ. ಮುಂಬೈನಲ್ಲಿ, ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳುವುದನ್ನು ತಡೆಯಲು ನೌಕಾನೆಲೆ ಆವರಣದೊಳಗೆ ಮೂಲಭೂತ ಸೌಕರ್ಯಗಳನ್ನು, ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ.

ನೌಕಾ ಅಧಿಕಾರಿಗಳು ಸಹ ನಾಗರಿಕ ಆಡಳಿತದೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದು, ಅವರು ವಿನಂತಿಸಿದರೆ ಯಾವುದೇ ಕೋವಿಡ್‌ಗೆ ಸಂಬಂಧಿಸಿ ತುರ್ತು ಸಹಾಯ ನೀಡಲು ಎಲ್ಲಾ ಪೂರ್ವ ಸಿದ್ಧತಾ ಕ್ರಮ ಹೆಚ್ಚಿಸಲಾಗಿದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರ ನಿರ್ದೇಶನದ ಮೇರೆಗೆ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗುತ್ತಿರುವ ಆಸ್ಪತ್ರೆಗಳಿಗೆ ಯುದ್ಧಭೂಮಿ ನರ್ಸಿಂಗ್‌ ಸಹಾಯಕರಾಗಿ ತರಬೇತಿ ಪಡೆದ ವೈದ್ಯಕೀಯ ಮತ್ತು ವೈದ್ಯಕೀಯೇತರರು ಸೇರಿದಂತೆ ಸಣ್ಣಪುಟ್ಟ ಕರ್ತವ್ಯಕ್ಕೆ ನಿಯೋಜನೆಗಾಗಿ ಸಂಯೋಜಿತ ತಂಡಗಳನ್ನು ಮುಂಬೈನ ಐಎನ್‌ ಎಚ್‌ಎಸ್‌ ಅಶ್ವಿ‌ನಿಯಲ್ಲಿ ತಯಾರು ಮಾಡಲಾಗಿದೆ.

ಕೋವಿಡ್‌ ಪೀಡಿತ ಪ್ರದೇಶಗಳಿಗೆ ಅತ್ಯವಶ್ಯ ವೈದ್ಯಕೀಯ ಮಳಿಗೆಗಳು/ ಸಲಕರಣೆಗಳನ್ನು ಸಾಗಿಸಲು, ಬಡವರಿಗೆ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಲು ಮತ್ತು ಅಗತ್ಯವಿರುವ ಇತರ ತಾಂತ್ರಿಕ ಸಹಾಯಕ್ಕಾಗಿ ಗುಜರಾತ್‌ ನೌಕಾ ಪ್ರದೇಶವು ನಾಗರಿಕ ಆಡಳಿತಕ್ಕೆ ಬೆಂಬಲ ನೀಡಿರುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next