ಉಡುಪಿ: ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿ, ಮೂಲತಃ ಮಣಿಪಾಲದವರಾದ ರಶ್ಮಿ ಸಾಮಂತ್ ಅವರು ಪ್ರತಿಷ್ಠಿತ ಆಕ್ಸ್ ಫರ್ಡ್ ವಿ.ವಿ.ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಯುವತಿಯೊಬ್ಬರಿಗೆ ಈ ಗೌರವ ಪ್ರಾಪ್ತವಾಗುತ್ತಿರುವುದು ಇದೇ ಮೊದಲು. ಇವರು ಮಣಿಪಾಲದ ವತ್ಸಲಾ ಮತ್ತು ದಿನೇಶ್ ಸಾಮಂತ್ ಅವರ ಪುತ್ರಿ.
ಉಡುಪಿ ಮಣಿಪಾಲದ ಎಂಐಟಿ ಹಳೆವಿದ್ಯಾರ್ಥಿ ಮೂಲತಃ ಮಣಿಪಾಲದವರಾದ ರಶ್ಮಿ ಸಾಮಂತ್ ಅವರು 2021ರ ಫೆ. 11ರಂದು ಆಕ್ಸ್‌ಫರ್ಡ್ ಸ್ಟೂಡೆಂಟ್ಸ್ ಯೂನಿಯನ್‌ನ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
ಇತರ ಮೂರು ಮಂದಿ ಸ್ಪರ್ಧಾಳುಗಳಿಗಿಂತ ಇವರಿಗೆ ಅಧಿಕ ಮತಗಳು ಲಭಿಸಿದ್ದವು. ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಾಮಂತ್ ಈ ಹುದ್ದೆಗಾಗಿ ಸ್ಪರ್ಧಿಸಿದ್ದ ಇತರ ಮೂವರು ಪ್ರತಿಸ್ಪರ್ಧಿಗಳ ಒಟ್ಟು ಮತಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದಾರೆ.
ರಶ್ಮಿ ಸಾಮಂತ್ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಲಿನಾಕ್ರೆ ಕಾಲೇಜಿನ ಎಂಎಸ್ಸಿ ಪದವಿ ವಿದ್ಯಾರ್ಥಿನಿ. ವತ್ಸಲಾ ಸಾಮಂತ್ ಮತ್ತು ದಿನೇಶ್ ಸಾಮಂತ್ ಅವರ ಪುತ್ರಿ. ಅವರು ಮಣಿಪಾಲ ಮತ್ತು ಉಡುಪಿಯಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದರು. ಎಂಐಟಿಯಲ್ಲಿ (2016-2020 ಬ್ಯಾಚ್) ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಅವರು ಸಂಸ್ಥೆಯಲ್ಲಿ ನಾಯಕತ್ವ ಕೌಶಲ ಮತ್ತು ಉತ್ಸಾಹಭರಿತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು. ಎಂಐಟಿಯಲ್ಲಿ ವಿದ್ಯಾರ್ಥಿ ಪರಿಷತ್ತಿನ ತಾಂತ್ರಿಕ ಕಾರ್ಯದರ್ಶಿಯಾಗಿದ್ದರು ಹಾಗೂ ಸಂಸ್ಥೆಯಲ್ಲಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ಸವಾಲುಗಳಿಗೆ ಆಧುನಿಕ ಡಿಜಿಟಲ್ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಮಣಿಪಾಲ್ ಹ್ಯಾಕಥಾನ್ ಅನ್ನು ಪರಿಚಯಿಸಿದ್ದರು.
ಮಗಳ ಸಾಧನೆ ಕಂಡು ತುಂಬ ಸಂತಸವಾಗಿದೆ. ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ಸ್ಟೂಡೆಂಡ್ ಯೂನಿಯನ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ. ಗುರುವಾರ ರಾತ್ರಿ ಫಲಿತಾಂಶ ಪ್ರಕಟಗೊಂಡಿದೆ. ಆಕ್ಸ್‌ಫರ್ಡ್ ಇತಿಹಾಸದಲ್ಲೇ ಇದು ಉತ್ತಮ ಫಲಿತಾಂಶ.
– ದಿನೇಶ ಸಾಮಂತ, ಶಿವಪಾಡಿ, ಮಣಿಪಾಲ