ನೋಯ್ಡಾ: ನೋಯ್ಡಾದಲ್ಲಿ ಸಾಕು ನಾಯಿಗಳು ಸಾರ್ವಜನಿಕರಿಗೆ ಕಚ್ಚಿದರೆ ನಾಯಿ ಮಾಲಕರಿಗೆ ಹತ್ತು ಸಾವಿರ ದಂಡ ಹಾಕುವ ನಿಯಮವನ್ನು ಜಾರಿಗೆ ತರಲು ನೋಯ್ಡಾ ಪ್ರಾಧಿಕಾರವು ನಿರ್ಧಾರ ತೆಗೆದುಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳು ಸಾರ್ವಜನಿಕರಿಗೆ ಕಚ್ಚಿದ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಅದರಂತೆ ಮುಂಬರುವ ಮಾರ್ಚ್ 1, 2023 ರ ನಂತರ ನಾಯಿ ಅಥವಾ ಬೆಕ್ಕು ಯಾರನ್ನಾದರೂ ಕಚ್ಚಿದರೆ, ಮಾಲೀಕರು 10,000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ನೋಯ್ಡಾ ಪ್ರಾಧಿಕಾರ ನಿರ್ಧರಿಸಿದೆ. ಸಂತ್ರಸ್ತರಿಗೆ ಈ ಹಣ ಸಿಗಲಿದೆ. ಇದರೊಂದಿಗೆ, ಸಾಕುಪ್ರಾಣಿಗಳ ಮಾಲೀಕರು ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆಯನ್ನೂ ನೀಡಬೇಕಾಗುತ್ತದೆ.
ಬೀದಿ ನಾಯಿಗಳ ಹಾವಳಿ ಮತ್ತು ಸಾಕುಪ್ರಾಣಿಗಳ ದಾಳಿಯ ಸಮಸ್ಯೆಯನ್ನು ಚರ್ಚಿಸಲು ನೋಯ್ಡಾ ಪ್ರಾಧಿಕಾರವು ಶನಿವಾರ ಮಂಡಳಿಯ ಸಭೆಯನ್ನು ನಡೆಸಿತು. ಸಭೆಯ ಬಳಿಕ ನೋಯ್ಡಾ ಪ್ರಾಧಿಕಾರ ಈ ಆದೇಶ ಹೊರಡಿಸಿದೆ. ನೋಯ್ಡಾ ಪ್ರಾಧಿಕಾರವು ಪ್ರಾಣಿ ಕಲ್ಯಾಣ ಮಂಡಳಿಯ ನಿಯಮಗಳ ಅಡಿಯಲ್ಲಿ ವಿವರವಾದ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಎಲ್ಲಾ ಸಾಕು ನಾಯಿಗಳು ಮತ್ತು ಬೆಕ್ಕುಗಳನ್ನು ಮಾರ್ಚ್ 2023 ರೊಳಗೆ ನೋಂದಾಯಿಸಿಕೊಳ್ಳಬೇಕು. ನೋಯ್ಡಾ ಪ್ರಾಧಿಕಾರದ ಪೆಟ್ ರಿಜಿಸ್ಟ್ರೇಶನ್ ಆಪ್ ಮೂಲಕ ನೋಂದಣಿ ಮಾಡಲಾಗುತ್ತದೆ. ಹಾಗೆ ಮಾಡಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ.
ಲಸಿಕೆ ಹಾಕಿಸಿಕೊಳ್ಳದಿದ್ದರೆ ದಂಡ ತೆರಬೇಕಾಗುತ್ತದೆ
ನೋಯ್ಡಾ ಪ್ರಾಧಿಕಾರದ ಆದೇಶದ ಪ್ರಕಾರ ಎಲ್ಲಾ ಸಾಕು ನಾಯಿಗಳಿಗೆ ಕ್ರಿಮಿನಾಶಕ ಮತ್ತು ಆಂಟಿ ರೇಬಿಸ್ ಲಸಿಕೆ ಕಡ್ಡಾಯವಾಗಿದೆ. ಯಾರಾದರೂ ಹಾಗೆ ಮಾಡದಿದ್ದರೆ ತಿಂಗಳಿಗೆ ಎರಡು ಸಾವಿರ ರೂಪಾಯಿಯಂತೆ ದಂಡ ತೆರಬೇಕಾಗುತ್ತದೆ. ಅನಾರೋಗ್ಯ ಅಥವಾ ಆಕ್ರಮಣಕಾರಿ ಬೀದಿ ನಾಯಿಗಳಿಗಾಗಿ ಶ್ವಾನ ಶೆಲ್ಟರ್‌ಗಳನ್ನು ನಿರ್ಮಿಸಲಾಗುವುದು. ಸಾಕು ನಾಯಿ ಸಾರ್ವಜನಿಕ ಸ್ಥಳದಲ್ಲಿ ಗಲೀಜು ಮಾಡಿದರೆ ಅದನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಅದರ ಮಾಲೀಕರ ಮೇಲಿರುತ್ತದೆ.
ಇದನ್ನೂ ಓದಿ : ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿ 5 ಮಂದಿ ಸ್ಥಳದಲ್ಲೇ ಸಾವು, 20 ಮಂದಿಗೆ ಗಾಯ