Advertisement

ಇಂಜಿನಿಯರ್ ಅಸೋಸಿಯೇಷನ್‌ಗೆ ಸ್ವಂತ ಕಟ್ಟಡ

02:25 PM Sep 10, 2019 | Team Udayavani |

ಚಿಕ್ಕಮಗಳೂರು: ಸಿವಿಲ್ ಇಂಜಿನಿಯರ್ ಅಸೋಸಿಯೇಷನ್‌ಗೆ ವರ್ಷದೊಳಗೆ ನಗರದಲ್ಲಿ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶ ಇದೆ ಎಂದು ನೂತನ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌ ನುಡಿದರು.

Advertisement

ಜಿಲ್ಲಾ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್‌ ಸರ್ವಸದಸ್ಯರ ವಿಶೇಷ ಸಾಮಾನ್ಯ ಸಭೆಯು ಲಯನ್ಸ್‌ ಸೇವಾ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ಎಸ್‌. ಹರೀಶ್‌ ನೇತೃತ್ವದಲ್ಲಿ ನಡೆಯಿತು. 2019-20ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಎನ್‌. ಮಲ್ಲೇಶ್‌, ಕಾರ್ಯದರ್ಶಿ ಬಿ.ಎಂ. ಪ್ರಕಾಶ್‌ ಮತ್ತು ಖಜಾಂಚಿ ನಂದೀಶ್‌ ತಂಡ ಆಯ್ಕೆಗೊಂಡು ಪ್ರಮಾಣ ವಚನ ಸ್ವೀಕರಿಸಿದರು.

1996ರಲ್ಲಿ ಲವಕುಮಾರ್‌ ಅರಸ್‌ ಪ್ರಯತ್ನದಿಂದ ಪ್ರಾರಂಭಗೊಂಡ ಸಿವಿಲ್ ಇಂಜಿನಿಯರ್ ಸಂಘ ಪ್ರಸ್ತುತ 118 ಸದಸ್ಯರನ್ನು ಹೊಂದಿದೆ. 13ನೇ ಅಧ್ಯಕ್ಷರಾಗಿ ಎಲ್ಲ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಮಲ್ಲೇಶ್‌, ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಹೆಚ್ಚಾಗಿದೆ. ನಗರವ್ಯಾಪ್ತಿಯಲ್ಲಿ ಸಿ.ಎ.ನಿವೇಶನವನ್ನು ಗುರುತಿಸಿ ಶೀಘ್ರದಲ್ಲೇ ಕಟ್ಟಡ ಕೆಲಸ ಆರಂಭಿಸಿ ತಮ್ಮ ವರ್ಷದ ಅವಧಿಯಲ್ಲಿ ನಿರ್ಮಾಣ ಮಾಡುವ ಗುರಿ ಇದೆ ಎಂದರು.

ಹೇಳುವುದಕ್ಕಿಂತ ಮಾಡಿ ತೋರಿಸುವುದು ಮುಖ್ಯ ಎಂಬುದು ಸರ್‌.ಎಂ.ವಿಶ್ವೇಶ್ವರಯ್ಯ ಅವರ ಮಾತಾಗಿತ್ತು. ಸಂಘ ನನಗೇನು ಮಾಡಿತು ಎನ್ನುವುದಕ್ಕಿಂತ ನಾನು ಸಂಘಕ್ಕೇನು ಕೊಡುಗೆ ನೀಡಿದೆ ಎಂದು ಆಲೋಚಿಸಿದಾಗ ಸಂಘದ ಬೆಳವಣಿಗೆಯಾಗುತ್ತದೆ. ಸಂಘದ ನೂತನ ಕಟ್ಟಡಕ್ಕೆ ಬೇಕಾದ ಜಲ್ಲಿ, ಮರಳು, ಕಲ್ಲನ್ನು ಉಚಿತವಾಗಿ ಕೊಡುವುದಾಗಿ ಭರವಸೆಯಿತ್ತ ಅವರು, ಎಲ್ಲ ಸದಸ್ಯರ ಸಹಕಾರ ಪಡೆದು ಕಾರ್ಯನಿರ್ವಹಿಸುವ ಆಶಯವಿದೆ. ಸಂಘದ ರಥವನ್ನು ಮುನ್ನಡೆಸಲು ಎಲ್ಲ ಪದಾಧಿಕಾರಿಗಳು, ಸದಸ್ಯರು ಹಾಗೂ ಎಲ್ಲ ಕುಟುಂಬವರ್ಗ ಕೈಜೋಡಿಸಬೇಕೆಂದು ಕೋರಿದರು.

ನಿರ್ಗಮಿತ ಅಧ್ಯಕ್ಷ ಬಿ.ಎಸ್‌.ಹರೀಶ್‌ ಮಾತನಾಡಿ, ವರ್ಷದ ಅವಧಿಯಲ್ಲಿ ವಿವಿಧ ಪ್ರವಾಸಗಳನ್ನು ಕುಟುಂಬದ ಸದಸ್ಯರೊಂದಿಗೆ ಆಯೋಜಿಸಿದ್ದರಿಂದ ಸಂಘದ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಮೂಡಿಗೆರೆ ತಾಲೂಕಿನ ನೆರೆಸಂತ್ರಸ್ತರಿಗೆ 1.3ಲಕ್ಷ ರೂ.ಗಳ ನೆರವು, ಪಾಲಿಟೆಕ್ನಿಕ್‌ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶುದ್ಧಕುಡಿಯುವ ನೀರಿನ ಘಟಕ, ಅರ್ಥಪೂರ್ಣ ಇಂಜಿನಿಯರ್‌ ದಿನಾಚರಣೆ ಸ್ಮರಣೀಯ ಕಾರ್ಯಕ್ರಮವಾಗುತ್ತದೆ ಎಂದರು.

Advertisement

ಮಾಜಿ ಅಧ್ಯಕ್ಷ ಎಂ.ಎಸ್‌. ಮಹೇಶ್‌ ಮಾತನಾಡಿ, ಸಿಡಿಎ ಮತ್ತು ನಗರಸಭೆಯ ತೊಂದರೆ ನಿವಾರಣೆಗಾಗಿ ಏಳೆಚಿಟು ಜನರಿಂದ ಆರಂಭವಾದ ಸಂಘ ಇಂದು ವಿಶಾಲವಾಗಿ, ಸದೃಢವಾಗಿ ಬೆಳೆಯಲು ಹಲವರ ಪರಿಶ್ರಮ ಕಾರಣವಾಗಿದೆ. ಬದಲಾವಣೆ ಜಗದ ನಿಯಮ. ಪ್ರತಿವರ್ಷ ಹೊಸ ಅಧ್ಯಕ್ಷರ ನೇತೃತ್ವದ ಸಮಿತಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಂಘ ಹೆಚ್ಚು ಕ್ರಿಯಾಶೀಲವಾಗಿದೆ ಎಂದರು.

ಕಾರ್ಯದರ್ಶಿ ವರದಿಯನ್ನು ಬಿ.ಕೆ.ಗುರುಮೂರ್ತಿ ಪಿಪಿಟಿಯೊಂದಿಗೆ ಮಂಡಿಸಿದರು. ಖಜಾಂಚಿ ಜಿ.ಎಸ್‌. ಶಶಿಧರ್‌ ಲೆಕ್ಕಪತ್ರ ಮಂಡಿಸಿದ್ದು, ಮಹಾಸಭೆ ಅನುಮೋದನೆ ನೀಡಿತು. ಇಂಜಿನಿಯರ್‌ ಎಂ.ಎ.ನಾಗೇಂದ್ರ ಚೀನಾ ಪ್ರವಾಸದ ಅನುಭವ ಹಂಚಿಕೊಂಡರು. ಮಾಜಿ ಅಧ್ಯಕ್ಷ ಎನ್‌.ಎಸ್‌. ನಾಗೇಂದ್ರ ನೂತನ ತಂಡಕ್ಕೆ ಪ್ರಮಾಣ ವಚನ ಬೋಧಿಸಿದರು. ಇಂಜಿನಿಯರ್‌ಗಳಾದ ಲಿಂಗರಾಜು ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಎಂ.ಪ್ರಕಾಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next