Advertisement

ಅರಿವೆಂಬ ತಮಟೆ ಬಾರಿಸಿ ಅಸಮಾನತೆ ನೀಗಿಸಿ

01:30 PM Jul 22, 2017 | |

ದಾವಣಗೆರೆ: ಅರಿವು ಮತ್ತು ಆಲೋಚನೆಯತಮಟೆ ಬಾರಿಸಿದಾಗ ಮಾತ್ರ ಸಮಾಜದಲ್ಲಿನ ಅಸಮಾನತೆ, ಅಶಾಂತಿ ತೊಲಗಿ ಸಮಾನತೆ, ಶಾಂತಿ-ಸೌಹಾರ್ದತೆ ನೆಲೆಗೊಳ್ಳುತ್ತದೆ ಎಂದರು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದ್ದಾರೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಡಾ| ಬಿ.ಆರ್‌. ಅಂಬೇಡ್ಕರ್‌ರ 126ನೇ
ಜನ್ಮದಿನೋತ್ಸವ ಪ್ರಯುಕ್ತ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೂರು ನುಡಿ-ನೂರು ದುಡಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಈ ಚರ್ಮವಾದ್ಯಗಳ ಬಡಿತ ಚಳಿಯನ್ನೇ ದೂರ ಮಾಡುವ ಶಕ್ತಿ ಇದೆ. ಸಾಂಕೇತಿಕವಾಗಿ ಹೇಳಬೇಂದರೆ ಚಳಿ ಎಂದರೆ ಸಮಾಜದಲ್ಲಿನ ಅನಿಷ್ಟ ಪದ್ಧತಿ, ಅಸಮಾನತೆ, ಅಶಾಂತಿ, ಅಧರ್ಮ ಇತ್ಯಾದಿಯಾಗಿದೆ. ಇಂತಹ ಬಡಿತದಿಂದ ಇವುಗಳನ್ನು ಹೊಡೆದೋಡಿಸುವ ಶಕ್ತಿ ತಂದು ಕೊಟ್ಟವರು ಡಾ| ಬಿ ಆರ್‌ ಅಂಬೇಡ್ಕರ್‌ ಎಂದು ಸ್ಮರಿಸಿದರು.

ಅರಿವು ಮತ್ತು ಆಲೋಚನೆಯೆಂಬ ತಮಟೆ ಬಾರಿಸಿದಾಗ ಮಾತ್ರ ಈ ಚಳಿ ಹೋಗಲು ಸಾಧ್ಯ. ಅಂಬೇಡ್ಕರ್‌ ತಮ್ಮ ಆಲೋಚನೆಯೆಂಬ ತಮಟೆ ಮೂಲಕ ಸಮಾಜದಲ್ಲಿ ಆವರಿಸಿದ್ದ ಅಸಮಾನತೆಯೆಂಬ ಚಳಿ ಹೋಗಲಾಡಿಸಲು ಅವಿರತ ಪ್ರಯತ್ನಿಸಿದ್ದರು. ಈಗ ನಾವು ಆ ಕೆಲಸವನ್ನು ಮುಂದುವರೆಸಬೇಕಿದೆ ಎಂದು ಅವರು ತಿಳಿಸಿದರು. ಅಂಬೇಡ್ಕರ್‌ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕಡಾ| ಪ್ರಕಾಶ್‌ ಹಲಗೇರಿ, ರಾಜಕೀಯ ಅಸ್ಮಿತೆ ತಿಳಿಯಲು ಸಹಕರಿಸಿದ ಧೀಮಂತ ನಾಯಕ ಅಂಬೇಡ್ಕರ್‌. ಆಧುನಿಕ ಭಾರತದ ನಿರ್ಮಾತೃ ಎಂದು ಕರೆಸಿಕೊಳ್ಳುವ ಅಂಬೇಡ್ಕರ್‌ ಧಮನಿತರು, ಶೋಷಿತರಿಗೆ ಸ್ವಾಭಿಮಾನದ ಮಂತ್ರ ಹೇಳಿಕೊಟ್ಟವರು. ಶಿಕ್ಷಣದ ಮೂಲಕ ಸಂಕೋಲೆಗಳಿಂದ ಮುಕ್ತಿ ಪಡೆಯಬಹುದೆಂದು ತೋರಿಸಿದವರು. ಅವರ ಕೊಡುಗೆ ನಮ್ಮ ದೇಶಕ್ಕೆ ಚಿರಂತನವಾದದ್ದು ಎಂದರು.

ಉಪ ಮೇಯರ್‌ ಮಂಜಮ್ಮ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕುಮಾರ್‌ ಹನುಮಂತಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ವಾರ್ತಾಧಿಕಾರಿ ಅಶೋಕ್‌ ಕುಮಾರ್‌, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ ಸುನೀತಾ, ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next