Advertisement

400ಕ್ಕೂ ಹೆಚ್ಚು ಸುಪ್ರೀಂ ತೀರ್ಪುಗಳ ಭಾಷಾಂತರ; ಕನ್ನಡಕ್ಕೆ ತರ್ಜುಮೆಗೊಂಡಿವೆ 23 ತೀರ್ಪುಗಳು

07:53 PM Jun 13, 2022 | Team Udayavani |

ನವದೆಹಲಿ: ಪ್ರಾದೇಶಿಕ ಭಾಷೆಗಳಲ್ಲೂ ಸುಪ್ರೀಂ ಕೋರ್ಟ್‌ ತೀರ್ಪುಗಳು ಲಭ್ಯವಾಗುವಂತೆ ಮಾಡುವ ನಿಯಮ ಜಾರಿಯಾದ ಬಳಿಕ ಸುಮಾರು 450 ತೀರ್ಪುಗಳು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಗೊಂಡಿವೆ.

Advertisement

ಕೃತಕ ಬುದ್ಧಿಮತ್ತೆ(ಎಐ) ಸಾಫ್ಟ್ ವೇರ್‌ ಬಳಸಿಕೊಂಡು ತೀರ್ಪುಗಳನ್ನು ತರ್ಜುಮೆ ಮಾಡಲಾಗಿದೆ.

ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಗೊಂಡ ತೀರ್ಪುಗಳ ಪೈಕಿ ಹೆಚ್ಚಿನ ಪಾಲು ಹಿಂದಿಯದ್ದಾಗಿದ್ದರೆ, ಎರಡನೇ ಸ್ಥಾನ ತಮಿಳು ಭಾಷೆಯದ್ದಾಗಿದೆ. 23 ತೀರ್ಪುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. 2018ರ ಆಗಸ್ಟ್‌ನಲ್ಲಿ ಈ ನಿಯಮ ಜಾರಿಯಾದ ಬಳಿಕ 469 ತೀರ್ಪುಗಳು ಭಾಷಾಂತರಗೊಂಡಿವೆ.

ನಂತರ ಕೊರೊನಾ ಸೋಂಕು-ಲಾಕ್‌ಡೌನ್‌ ಅವಧಿಯಲ್ಲಿ ಇದು ಸ್ಥಗಿತಗೊಂಡಿತ್ತು. ಈಗ ಮತ್ತೆ ಈ ಕೆಲಸ ಆರಂಭವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

469ರ ಪೈಕಿ ಶೇ.86ರಷ್ಟು ತೀರ್ಪುಗಳು ಕೊರೊನಾ ಪೂರ್ವದಲ್ಲೇ ಭಾಷಾಂತರಗೊಂಡಿರುವಂಥದ್ದು. ಇನ್ನು ಹಿಂದಿ ಭಾಷೆಗೆ 243 ತೀರ್ಪುಗಳು ಭಾಷಾಂತರಗೊಂಡರೆ, ತಮಿಳಿಗೆ 70 ತೀರ್ಪುಗಳು ಭಾಷಾಂತರಗೊಂಡಿವೆ. ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ತೆಲುಗಿನಲ್ಲೂ ಕೆಲವು ಜಡ್ಜ್ ಮೆಂಟ್‌ಗಳು ಪ್ರಕಟವಾಗಿವೆ.

Advertisement

ಇದಲ್ಲದೇ, ಕೆಲವು ತೀರ್ಪುಗಳನ್ನು ಉರ್ದು, ಅಸ್ಸಾಮೀಸ್‌, ಪಂಜಾಬಿ ಮತ್ತು ಒಂದು ತೀರ್ಪನ್ನು ನೇಪಾಳಿ ಭಾಷೆಗೂ ಭಾಷಾಂತರ ಮಾಡಲಾಗಿದೆ.

ಶೇ.90ರಷ್ಟು ನಿಖರತೆ:
9 ಭಾಷೆಗಳಿಗೆ ಭಾಷಾಂತರಗೊಂಡ ತೀರ್ಪುಗಳು ಶೇ.90ರಷ್ಟು ನಿಖರತೆ ಹೊಂದಿದ್ದು, ಸಣ್ಣಪುಟ್ಟ ತಪ್ಪುಗಳು ಕಂಡುಬಂದರೆ ಕೈಯ್ಯಲ್ಲೇ ಅವುಗಳನ್ನು ಸರಿಪಡಿಸಿ, ನಂತರವೇ ಅಪ್‌ಲೋಡ್‌ ಮಾಡಲಾಗುತ್ತಿದೆ. ಕೃತಕ ಬುದ್ಧಿಮತ್ತೆಯ ಸಾಫ್ಟ್ ವೇರ್‌ ಅನ್ನು ಕೆಲವು ಹೈಕೋರ್ಟ್‌ಗಳಿಗೂ ಹಂಚಿಕೆ ಮಾಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

2017ರಲ್ಲಿ ಕೇರಳ ಹೈಕೋರ್ಟ್‌ನ ವಜ್ರಮಹೋತ್ಸವದಲ್ಲಿ ಮಾತನಾಡಿದ್ದ ರಾಷ್ಟ್ರಪತಿ ಕೋವಿಂದ್‌ ಅವರು, ತೀರ್ಪುಗಳ ಭಾಷಾಂತರವು ಅರ್ಜಿದಾರರಿಗೆ ಲಭ್ಯವಾಗುವಂತೆ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದರು. ತದನಂತರ, 2019ರ ಜುಲೈನಲ್ಲಿ ಅಂದಿನ ಸಿಜೆಐ ಆಗಿದ್ದ ನ್ಯಾ.ರಂಜನ್‌ ಗೊಗೋಯ್‌ ಅವರು ಕನ್ನಡ ಸೇರಿದಂತೆ 6 ಪ್ರಾದೇಶಿಕ ಭಾಷೆಗಳಲ್ಲೂ ತೀರ್ಪು ಲಭ್ಯವಾಗುವಂಥ ನಿಯಮ ಜಾರಿಗೆ ತಂದರು.

ಯೋಜನೆ ಆರಂಭವಾಗಿದ್ದು – ಆಗಸ್ಟ್‌ 2018
ಭಾಷಾಂತರಗೊಂಡ ತೀರ್ಪುಗಳು- 469
ಒಟ್ಟು ಎಷ್ಟು ಭಾಷೆಗಳಿಗೆ ಭಾಷಾಂತರ? – 12
ಹಿಂದಿಗೆ ತರ್ಜುಮೆಗೊಂಡ ತೀರ್ಪುಗಳು- 243
ತಮಿಳಿಗೆ ಭಾಷಾಂತರಗೊಂಡಿದ್ದು – 70
ಮಲಯಾಳಂಗೆ – 42
ಮರಾಠಿಗೆ – 25
ಕನ್ನಡ ಮತ್ತು ಒರಿಯಾಗೆ – ತಲಾ 23
ತೆಲುಗಿಗೆ ಭಾಷಾಂತರಗೊಂಡಿದ್ದು- 19

Advertisement

Udayavani is now on Telegram. Click here to join our channel and stay updated with the latest news.

Next