Advertisement

365 ದಿನಗಳಲ್ಲಿ 32 ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರು ಸೇರ್ಪಡೆ!

07:37 PM Nov 17, 2021 | Team Udayavani |

ಬೆಂಗಳೂರು: ಕೇವಲ ಒಂದು ವರ್ಷದ ಅಂತರದಲ್ಲಿ ದೇಶದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಸುಮಾರು 32 ಕೋಟಿ ಹೆಚ್ಚಾಗಿದೆ!

Advertisement

ಹೌದು, 2020ರಲ್ಲಿ ದೇಶದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು 50 ಕೋಟಿ ಇದ್ದರು. ಈಗ ಅದು 82 ಕೋಟಿಗೆ ಏರಿಕೆಯಾಗಿದೆ ಎಂದು ಕಿಂಡ್ರೆಲ್‌ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಟಿನ್‌ ಶ್ರೋಟರ್‌ ಮಾಹಿತಿ ನೀಡಿದರು.

ಮೂರು ದಿನಗಳ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಬುಧವಾರ “ವಿದ್ವತ್‌ ಗೋಷ್ಠಿ’ಯಲ್ಲಿ ಮಾತನಾಡಿದ ಅವರು, ಕೋವಿಡ್‌ ನಂತರ ಜಗತ್ತಿನ ಡಿಜಿಟಲ್‌ ಆರ್ಥಿಕ ವ್ಯವಸ್ಥೆಯು ಬಹುದೊಡ್ಡ ಸ್ಥಿತ್ಯಂತರವನ್ನು ಕಂಡಿದ್ದು, ಭಾರತದಲ್ಲೇ ನೂರು ಕೋಟಿ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಇದೆಲ್ಲವೂ ತಂತ್ರಜ್ಞಾನದ ಫ‌ಲ ಎಂದ ಅವರು, ಇದೇ ಕೊರೊನಾ ಮಹಾಮಾರಿ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ವರ್ಷದ ಅವಧಿಯಲ್ಲಿ 320 ದಶಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎಂದರು.

ಸಾಮಾಜಿಕ ಜೀವನ, ವೈದ್ಯವೃತ್ತಿ, ಉದ್ಯೋಗಗಳು, ಕೃಷಿ-ಆಹಾರ ಉತ್ಪನ್ನಗಳ ಕ್ಷೇತ್ರಗಳ ಕಾರ್ಯಶೈಲಿಯಲ್ಲಿ ಕೋವಿಡ್‌ ತರುವಾಯದ ಸಮಗ್ರ ಬದಲಾವಣೆಗೆ ತಂತ್ರಜ್ಞಾನವು ಸಹಾಯಕವಾಗಿ ಒದಗಿಬಂದಿದೆ ಎಂದ ಅವರು, ಕೇಂದ್ರವು ಕೇವಲ 278 ದಿನಗಳಲ್ಲಿ 100 ಕೋಟಿ ಕೋವಿಡ್‌ ಲಸಿಕೆ ನೀಡಿರುವುದು ದೊಡ್ಡ ಸಾಧನೆಯಾಗಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯ ಉಜ್ವಲವಾಗಿದ್ದು, ದತ್ತಾಂಶಗಳ ಬಳಕೆ ಮತ್ತು ನಿರ್ವಹಣೆ ಮೂಲಕ ಮಹತ್ತನ್ನು ಸಾಧಿಸಬಹುದು ಎಂದು ಹೇಳಿದರು.

ಇದನ್ನೂ ಓದಿ:ಒಳ ಹರಿವು ಹೆಚ್ಚಳದಿಂದ ರಸ್ತೆಗೆ ಹರಿದ ನೀರು: ಕೊಚ್ಚಿಕೊಂಡು ಹೋದ ನಿಲ್ಲಿಸಿದ್ದ ಕಾರು

Advertisement

“ಭವಿಷ್ಯದ ಸದೃಢತೆಗೆ ಸಂಶೋಧನೆಯಲ್ಲಿ ಹೂಡಿಕೆ’
ಕಡಿಮೆ ದರದಲ್ಲಿ ದೊರಕುವ ಉದ್ಯೋಗಿಗಳಿಂದ ಆರ್ಥಿಕತೆ ಬೆಳೆಯುವುದಿಲ್ಲ; ಬದಲಿಗೆ ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆಯಿಂದ ಮಾತ್ರ ಭವಿಷ್ಯ ಸದೃಢವಾಗಿರಲಿದೆ ಎಂದು ನೊಬೆಲ್‌ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್‌ ಪ್ರತಿಪಾದಿಸಿದರು.

ಭಾರತದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ದೇಶದ ಆಂತರಿಕ ವೃದ್ಧಿ ದರ (ಜಿಡಿಪಿ)ಯ ಕೇವಲ ಶೇ. 0.8ರಷ್ಟು ಹೂಡಿಕೆಯಾಗುತ್ತಿದೆ. ಇದು ಕೊರಿಯಾ, ಜಪಾನ್‌ ಮತ್ತಿತರ ದೇಶಗಳಿಗೆ ಹೋಲಿಸಿದರೆ, ಶೇ. 25ಕ್ಕಿಂತ ಕಡಿಮೆ. ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದಲ್ಲಿ ಮಾತ್ರ ಭವಿಷ್ಯ ಸದೃಢ ಆಗಿರಲಿದೆ ಎಂದು ಸೂಚ್ಯವಾಗಿ ಹೇಳಿದರು.

ಸುಸ್ಥಿರ ಅಭಿವೃದ್ಧಿ ಹೆಚ್ಚಿಸುವ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ನಡೆಸುವ ಸಾಧ್ಯತೆಗಳು ಹೆಚ್ಚಬೇಕು ಎಂದ ಅವರು, ಆಹಾರ ಭದ್ರತೆ, ಸುಸ್ಥಿರ ಇಂಧನ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ನಿರಂತರ ಅಧ್ಯಯನ ಮತ್ತು ಸಂಶೋಧನೆಗಳು ನಡೆಯುವುದು ಅತ್ಯವಶ್ಯಕ. ಗೂಗಲ್, ಮೈಕ್ರೊಸಾಫ್ಟ್ ನಂತಹ ಖಾಸಗಿ ಸಂಸ್ಥೆಗಳು ಸಹ ಸಂಶೋಧನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ ಎಂದರು.

ಇಂದು ಜಗತ್ತಿನ ಟ್ರಿಲಿಯನ್‌ಗಟ್ಟಲೆ ಡಾಲರ್‌ ವ್ಯವಹಾರ ನಡೆಸುವ ಹಲವು ಕಂಪನಿಗಳು ಹುಟ್ಟಿರುವುದಕ್ಕೆ ಹೊಸ ಸಂಶೋಧನೆಗಳೇ ಕಾರಣ. ಕ್ವಾಂಟಮ್‌ ವಿಜ್ಞಾನದ ಅಧ್ಯಯನದ ಫ‌ಲವಾಗಿ ಟ್ರಾನ್ಸಿಸ್ಟರ್‌, ಲೇಸರ್‌ನಂತಹ ಹೊಸ ಶೋಧನೆಗಳು ಸಾಧ್ಯವಾದವು. ನ್ಯೂಟನ್‌ ಅವರ “ಲಾ ಆಫ್ ಮೋಷನ್‌’ ಬಳಸಿ ರಾಕೆಟ್‌, ಉಪಗ್ರಹಗಳ ಉಡಾವಣೆಯಲ್ಲಿ ಬಹಳ ದೊಡ್ಡ ಸಾಧನೆ ಸಾಧ್ಯವಾಯಿತು. ಜಿಪಿಎಸ್‌ ಅನ್ವೇಷಣೆಯ ಹಿಂದಿನ ತತ್ವವು ಆಲ್ಬರ್ಟ್‌ ಐನ್‍ಸ್ಟೈನ್ ಅವರ “ಥಿಯರಿ ಆಫ್ ರಿಲೇಟಿವಿಟಿ’ ಯನ್ನು ಆಧರಿಸಿದೆ ಎಂದು ಮೆಲುಕು ಹಾಕಿದ ಅವರು, ಕೋವಿಡ್‌ ಸಂದರ್ಭದಲ್ಲಿ ನೀಡಲಾದ ಲಸಿಕೆಯ ಶೋಧನೆಯ ಹಿಂದೆ ಸುಮಾರು 1965-2018ರ ನಡುವಿನ ಹಲವು ಶೋಧನೆಗಳು ನೆರವಿಗೆ ಬಂದಿವೆ ಎಂದೂ ಹೇಳಿದರು. ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ ಇದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next