ಬೀಜಿಂಗ್ : ಈಶಾನ್ಯ ಚೀನದ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿರುವ ಭೀಕರ ಭೂ ಕುಸಿತ ದುರಂತದಲ್ಲಿ ನೂರಕ್ಕೂ ಅಧಿಕ ಜನರು ಮಣ್ಣಿನೊಳಗೆ ಜೀವಂತ ಸಮಾಧಿಯಾಗಿರುವ ಭೀತಿ ಇದೆ.
ಗುಡ್ಡ ಕುಸಿದು ನೂರಾರು ಮನೆಗಳ ಮೇಲೆ ಎರಗಿದ ಪರಿಣಾಮವಾಗಿ ಜನರು ತಮ್ಮ ಮನೆಯೊಳಗೇ ಮಣ್ಣಿನ ರಾಶಿಯಡಿ ಹುಗಿದು ಹೋದರು ಎಂದು ಮಾವೋಕ್ಸಿಯಾನ್ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರದ ಕ್ಸಿನ್ ಹುವಾ ಸುದ್ದಿ ಸಂಸ್ಥೆಯ ಇದನ್ನು ವರದಿ ಮಾಡಿದೆ.
ಬೆಳಗ್ಗಿನ ಆರು ಗಂಟೆಯ ವೇಳೆಗೆ ಟಿಬೆಟ್ – ಕಿಯಾಂಗ್ ಸ್ವಾಯತ್ತ ಪ್ರಾಂತ್ಯದಲ್ಲಿ ಎತ್ತರದ ಪರ್ವತವೊಂದರ ಭಾಗವು ಕ್ಸಿನ್‌ಮೋ ಗ್ರಾಮದ ಮೇಲೆ ಉರುಳಿ ಬಿತ್ತು. ಇದರಿಂದಾಗಿ ಎರಡು ಕಿ.ಮಿ. ಉದ್ದಕ್ಕೆ ನದಿ ಹರಿವು ತಡೆಗೀಡಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಿಯ ಸರಕಾರವು ಪ್ರಥಮ ದರ್ಜೆಯ ಅತ್ಯಾಧುನಿಕ ಪರಿಕರಗಳೊಂದಿಗೆ ಭೂಗರ್ಭ ದುರಂತ ನಿರ್ವಹಣೆ ಮತ್ತು ರಕ್ಷಣಾ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ.
ಈ ವರ್ಷ ಜನವರಿಯಲ್ಲಿ ಮಧ್ಯ ಹುಬೇಯಿ ಪ್ರಾಂತ್ಯದಲ್ಲಿ ಹೊಟೇಲೊಂದರ ಮೇಲೆಯೇ ಗುಡ್ಡ ಕುಸಿದು ಕನಿಷ್ಠ 12 ಮಂದಿ ಮೃತಪಟ್ಟಿದ್ದರು.