Advertisement

ಶಂಕಿತ ಡೆಂಗ್ಯೂಗೆ 10ಕ್ಕೂ ಹೆಚ್ಚು ಬಲಿ!

11:06 PM Sep 16, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಂದಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆಯಾದರೂ ಬಾಧಿತರ ಸಂಖ್ಯೆ, ಸಾವಿನ ಪ್ರಕರಣಗಳು ಏರುತ್ತಿರುವುದು ಗಂಭೀರ ವಿಚಾರ.
ಕಳೆದ ಒಂದು ವಾರದ ಅವಧಿಯಲ್ಲಿ ಇಬ್ಬರು ಯುವಕರು ಶಂಕಿತ ಡೆಂಗ್ಯೂನಿಂದ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 10 ದಾಟಿದೆ. ಎಂಟು ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 1,027 ಮಂದಿ ಡೆಂಗ್ಯೂ ಬಾಧಿತರಾಗಿ ಗುಣಮುಖರಾಗಿದ್ದಾರೆ.

Advertisement

ಆರೋಗ್ಯ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಎಂಟು ತಿಂಗಳಲ್ಲಿ ಡೆಂಗ್ಯೂನಿಂದ ಮೃತಪಟ್ಟಿರುವುದು ಕೇವಲ ಮೂವರು. ಖಾಸಗಿ ಸುದ್ದಿವಾಹಿನಿ ಕೆಮರಾಮನ್‌ ನಾಗೇಶ್‌ ಪಡು, ಕಡಬದ ವೀಣಾ ನಾಯಕ್‌, ವಿದ್ಯಾರ್ಥಿನಿ ಶ್ರದ್ಧಾ ಮಾತ್ರ ಎನ್ನುವುದು ಅದರ ವರದಿ. ಪುತ್ತೂರಿನ ಉದ್ಯಮಿ ಪ್ರಶಾಂತ್‌ ಸರಳಾಯ ಮತ್ತು ತೊಕ್ಕೊಟ್ಟಿನ ಹರ್ಷಿತ್‌ ಗಟ್ಟಿ
ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದಾರೆ. ಅಲ್ಲದೆ ಗಣೇಶ್‌ ಕರ್ಕೇರ, ವಿದ್ಯಾರ್ಥಿ ಕೃಷ್‌, ಕಡಬದ ಶ್ರೀಧರ ಗೌಡ, ಬೋಳಾರ ಮುಳಿಹಿತ್ಲು ನಿವಾಸಿ ಕಾರ್ತಿಕ್‌ ಶೆಟ್ಟಿ, ಬೆಂಗ್ರೆಯ ಎಂಟು ವರ್ಷದ ಬಾಲಕಿಯ ಸಾವಿಗೂ ಶಂಕಿತ ಡೆಂಗ್ಯೂ ಕಾರಣ ಎನ್ನಲಾಗಿದ್ದರೂ ಇನ್ನೂ ದೃಢಪಟ್ಟಿಲ್ಲ.

ಡೆಂಗ್ಯೂನಿಂದ ಪಾರು; ಮೆದುಳು ಊತಕ್ಕೆ ಬಲಿ
ಮಂಗಳೂರು: ಡೆಂಗ್ಯೂ ಬಾಧೆಗೊಳಗಾಗಿ ಚೇತರಿಸಿಕೊಂಡಿದ್ದ ನಗರದ ಬಲ್ಲಾಳ್‌ಬಾಗ್‌ನ ಯುವಕ ಚಂದ್ರಕಾಂತ (30) ಮೆದುಳಿನ ಊತಕ್ಕೆ ಒಳಗಾಗಿ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಚಂದ್ರಕಾಂತ ಅವರು “ರೈನೋ ಸೆರೆಬ್ರೆಲ್‌ ಮುಕೋಮಿಕೋಸಿಸ್‌’ನಿಂದ (ಒಂದು ರೀತಿಯ ಮೆದುಳಿನ ಊತ) ಮೃತಪಟ್ಟಿರುವುದಾಗಿ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಶಂಕಿತ ಡೆಂಗ್ಯೂನಿಂದ ಬಳಲುತ್ತಿದ್ದ ಚಂದ್ರಕಾಂತ 15 ದಿನಗಳ ಹಿಂದೆ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ಪೂರ್ಣ ಚೇತರಿಸಿಕೊಂಡಿದ್ದರು. ಆದರೆ ಹೊಸ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

Advertisement

ವೈರಲ್‌ ಜ್ವರ ಹೆಚ್ಚಳ
ವಾತಾವರಣ ಬದಲಾವಣೆಯಿಂದಾಗಿ ಈಗ ಸಾಮಾನ್ಯ ವೈರಲ್‌ ಜ್ವರವೂ ಹೆಚ್ಚಳವಾಗಿದೆ. ಮಳೆ-ಬಿಸಿಲು ಕಣ್ಣಾಮುಚ್ಚಾಲೆಯಿಂದ ಹಲವಾರು ಮಂದಿ ಸಾಮಾನ್ಯ ಜ್ವರಕ್ಕೀಡಾಗಿದ್ದಾರೆ. ಹೀಗಾಗಿ ಸಾಮಾನ್ಯ ಜ್ವರ- ಡೆಂಗ್ಯೂ ಗೊಂದಲ ಮೂಡಿಸುವ ಸಾಧ್ಯತೆ ಇದೆ. ರೋಗ ಲಕ್ಷಣಗಳನ್ನು ಎಚ್ಚರಿಕೆಯಿಂದ ಗಮನಿಸಿ ವೈದ್ಯರ ಸಲಹೆ ಪಡೆಯಬೇಕು. ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನವೀನ್‌ಚಂದ್ರ ತಿಳಿಸಿದ್ದಾರೆ.

ಸೊಳ್ಳೆ ಬಗ್ಗೆ ಎಚ್ಚರ ವಹಿಸಿ
ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಆರೋಗ್ಯ ಸಹಾಯವಾಣಿ-104ಕ್ಕೆ ಮಾಹಿತಿ ನೀಡಿ. ಮನಪಾ ವ್ಯಾಪ್ತಿಯಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಪಾಲಿಕೆಯ ಕಂಟ್ರೋಲ್‌ ರೂಂ ಸಂಖ್ಯೆ: 2220306; ಜನಹಿತ -ಟೋಲ್‌ಫ್ರೀ ನಂ. 155313; ನಿರ್ಮಾಣ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ 0824-2410093 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next