ನವದೆಹಲಿ: ದೇಶದ 10 ಲಕ್ಷಕ್ಕೂ ಅಧಿಕ ಯೋಧರು, ಇನ್ನು ಮುಂದೆ ಖಾದಿ ಸಮವಸ್ತ್ರ ಧರಿಸಲಿದ್ದಾರೆ. ಸ್ವತಃ ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆಯಂತೆ ಈ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಸ್ವದೇಶಿ ನಿರ್ಮಿತ ವಸ್ತುಗಳನ್ನು ಪ್ರೋತ್ಸಾಹಿಸಲು ಅಮಿತ್ ಶಾ ಈ ಕ್ರಮ ಕೈಗೊಂಡಿದ್ದಾರೆ. ಅದಕ್ಕೂ ಮುನ್ನ ಸೇನಾಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ.
ಎಲ್ಲವನ್ನೂ ಪರಿಶೀಲಿಸಿದ ಮೇಲೆ ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಎಸ್‌ಬಿ, ಐಟಿಬಿಪಿ, ಸಿಐಎಸ್‌ಎಫ್, ಎನ್‌ಎಸ್‌ಜಿ ಮತ್ತು ಅಸ್ಸಾಂ ರೈಫಲ್ಸ್‌ಗೆ ಸೇರಿದ 10 ಲಕ್ಷಕ್ಕೂ ಅಧಿಕ ಯೋಧರಿಗೆ ಖಾದಿ ಸಮವಸ್ತ್ರ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಖಾದಿ ಆಯೋಗ ಮತ್ತು ಗ್ರಾಮೀಣ ಕೈಗಾರಿಕೆ ಆಯೋಗದೊಂದಿಗೆ ಮಾತುಕತೆ ನಡೆಸಲಾಗಿದೆ. ಇದು ಜಾರಿಯಾದರೆ ದೇಶದ ಖಾದಿ ಉದ್ಯಮದ ಸ್ವರೂಪವೇ ಬದಲಾಗಲಿದೆ.
ಪ್ರಸ್ತುತ ಯೋಧರು ಹತ್ತಿಯ ಬಟ್ಟಗಳನ್ನು ಬಳಸುತ್ತಿದ್ದಾರೆ (ಸಂಪೂರ್ಣ ಯಂತ್ರನಿರ್ಮಿತ). ಮುಂದೆ ಕೈಮಗ್ಗದಿಂದ ತಯಾರಾದ ಖಾದಿ ಬಟ್ಟೆ ಬಳಕೆಯಾಗಲಿದೆ. ಈಗಾಗಲೇ ಸಮವಸ್ತ್ರದ ಮಾದರಿಯನ್ನು ನೀಡಲಾಗಿದೆ. ಆದರೆ ಸಿಆರ್‌ಪಿಎಫ್ ಬಳಸುವ ವಸ್ತ್ರಗಳಿಗೂ, ಬಿಎಸ್‌ಎಫ್ನ ವಸ್ತ್ರಗಳಿಗೂ ವ್ಯತ್ಯಾಸವಿದೆ. ಅದನ್ನು ನೋಡಿಕೊಂಡು ಸಮವಸ್ತ್ರ ಪಡೆಯಲಾಗುತ್ತದೆ ಎಂದು ಸೇನಾಮುಖ್ಯಸ್ಥರು ತಿಳಿಸಿದ್ದಾರೆ.