ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಗಾದವರ ಸಂಖ್ಯೆ ಲಕ್ಷದತ್ತ ಮುಂದುವರಿದಿದೆ. ಇದುವರೆಗೂ 99,528 ಮಂದಿಗೆ ಪರೀಕ್ಷೆ ನಡೆಸಲಾಗಿದೆ.
ಆರ್‌ಟಿಪಿಸಿಆರ್ ಮೂಲಕ 57911 ಮಂದಿಗೆ ಪರೀಕ್ಷೆ ನಡೆಸಿದರೆ, ರ್ಯಾಪಿಡ್ ಟೆಸ್ಟ್‌ಗೆ 41617 ಮಂದಿ ಒಳಗಾಗಿದ್ದಾರೆ. ಆರ್‌ಟಿಪಿಸಿಆರ್ ಪರೀಕ್ಷೆಗೆ ಮಿಮ್ಸ್ ಹಾಗೂ ಆದಿಚುಂಚನಗಿರಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಆದರೆ, ವರದಿಗಾಗಿ ಎರಡು ದಿನ ಕಾಯಬೇಕು. ಆದರೆ, ರ್ಯಾಪಿಡ್ ಟೆಸ್ಟ್ ಎಲ್ಲ ಕಡೆ ಮಾಡಲಾಗುತ್ತಿದ್ದು, ಸ್ಥಳದಲ್ಲಿಯೇ ವರದಿ ಸಿಗಲಿದೆ.
ತಾಲೂಕು ವಿವರ: ಮಂಡ್ಯ ತಾಲೂಕಿನಲ್ಲಿ 11085 ಆರ್ ಟಿಪಿಸಿಆರ್, 14103 ರ್ಯಾಪಿಡ್, ಮದ್ದೂರು ತಾಲೂಕಿನಲ್ಲಿ 7613 ಆರ್ ಟಿಪಿಸಿಆರ್, 4940 ರ್ಯಾಪಿಡ್, ಮಳವಳ್ಳಿ ತಾಲೂಕಿನಲ್ಲಿ 8026 ಆರ್ ಟಿಪಿಸಿಆರ್, 4216 ರ್ಯಾಪಿಡ್, ಪಾಂಡವಪುರತಾಲೂಕಿನಲ್ಲಿ 6130 ಆರ್‌ಟಿಪಿಸಿಆರ್, 3749 ರ್ಯಾಪಿಡ್, ಶ್ರೀರಂಗಪಟ್ಟಣ ತಾಲೂಕಿನಲ್ಲಿ 5583 ಆರ್ ಟಿಪಿಸಿಆರ್, 3928 ರ್ಯಾಪಿಡ್, ಕೆ.ಆರ್.ಪೇಟೆ ತಾಲೂಕಿನಲ್ಲಿ 9347 ಆರ್‌ಟಿಪಿಸಿಆರ್, 5449 ರ್ಯಾಪಿಡ್ ಹಾಗೂ ನಾಗಮಂಗಲದಲ್ಲಿ 10048 ಆರ್ ಟಿಪಿಸಿಆರ್, 5232 ರ್ಯಾಪಿಡ್ ಪರೀಕ್ಷೆ ನಡೆಸಲಾಗಿದೆ.
ರ್ಯಾಪಿಡ್ ಪರೀಕ್ಷೆಯಿಂದ ಹೆಚ್ಚು ಸೋಂಕಿತರ ಪತ್ತೆ: ಆರ್‌ಟಿಪಿಸಿಆರ್ ಪರೀಕ್ಷೆಯಿಂದ 3859 ಮಂದಿಗೆ ಸೋಂಕು ದೃಢಪಟ್ಟರೆ, ರ್ಯಾಪಿಡ್ ಪರೀಕ್ಷೆಯಿಂದ 4400 ಮಂದಿಗೆ ಪಾಸಿಟಿವ್ ಬಂದಿದೆ. ಹೈರಿಸ್ಕ್ ರೋಗಿಗಳಿಗೆ ಪರೀಕ್ಷೆ: ಬಿಪಿ, ಶುಗರ್, ಗರ್ಭಿಣಿ, ಕ್ಯಾನ್ಸರ್ ಸೇರಿದಂತೆ ಕೋವಿಡೇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವರೋಗಿಗಳನ್ನು ಗುರುತಿಸಿ, ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕು ಕಂಡು ಬಂದ ತಕ್ಷಣ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
28 ಮೊಬೈಲ್ ಟೆಸ್ಟಿಂಗ್ ತಂಡ: ಜಿಲ್ಲೆಯ 7 ತಾಲೂಕುಗಳಲ್ಲಿ ತಲಾ ನಾಲ್ಕು ತಂಡಗಳಂತೆ ಒಟ್ಟು 28 ಮೊಬೈಲ್ ಟೆಸ್ಟಿಂಗ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚು ಸೋಂಕಿತರು ಕಂಡು ತಾಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲ ತಾಲೂಕು ಸರ್ಕಾರಿಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸ್ವ್ಯಾಬ್ ಸಂಗ್ರಹಿಸಲಾಗುತ್ತಿದೆ.
ಹೋಂ ಐಸೋಲೇಷನ್‌ಗೆ ಒತ್ತು: ಹೆಚ್ಚು ಪರೀಕ್ಷೆಗಳು ನಡೆಯುತ್ತಿರುವುದರಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಬೆಡ್‌ಗಳ ಸಮಸ್ಯೆ ಕಾಡಬಾರದು ಎಂಬ ಉದ್ದೇಶದಿಂದ ಹೋಂ ಐಸೋಲೇಷನ್‌ಗೆ ಒತ್ತು ನೀಡಲಾಗುತ್ತಿದೆ. ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಪ್ರತ್ಯೇಕ ಕೊಠಡಿ ಇದ್ದರೆ ಮಾತ್ರ ಚಿಕಿತ್ಸೆ ಒತ್ತು ನೀಡಲಾಗುತ್ತಿದೆ. ಪ್ರತ್ಯೇಕ ಕೊಠಡಿ ಇಲ್ಲದ ಸೋಂಕಿತರನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ.
ಜಿಲ್ಲೆಯಲ್ಲಿ ಇದುವರೆಗೂ ವಯಸ್ಸಾದ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕೋವಿಡ್ ಸೋಂಕಿತರು ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಇದುವರಿಗೂ ಜಿಲ್ಲೆಯಲ್ಲಿ ಕೋವಿಡ್ ದಿಂದ 86 ಮಂದಿ ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ ತಡೆಗಟ್ಟಲು ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.
– ಡಾ.ಟಿ.ಎನ್.ಧನಂಜಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ
– ಎಚ್.ಶಿವರಾಜು