Advertisement

ಸರಣಿ ಕ್ಲೀನ್‌ ಸ್ವೀಪ್‌ ಗೈದ ನ್ಯೂಜಿಲ್ಯಾಂಡ್‌

03:45 AM Jan 01, 2017 | Team Udayavani |

ನೆಲ್ಸನ್‌: ಪ್ರವಾಸಿ ಬಾಂಗ್ಲಾದೇಶವು ನ್ಯೂಜಿಲ್ಯಾಂಡ್‌ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರೀ ಅಂತರದಿಂದ ಸೋಲನ್ನು ಕಂಡಿದೆ. ಇದರಿಂದಾಗಿ ಮೂರು ಪಂದ್ಯಗಳ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡಿದೆ.

Advertisement

ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ನ್ಯೂಜಿಲ್ಯಾಂಡ್‌ ಆಟದ ಎಲ್ಲ ವಿಭಾಗಗಳಲ್ಲಿ ಮೇಲುಗೈ ಸಾಧಿಸಿ ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌  ಮೂಲಕ ಗೆದ್ದುಕೊಂಡಿದೆ. ಇನ್ನು ಟ್ವೆಂಟಿ-20 ಕ್ರಿಕೆಟ್‌ ಮತ್ತು ಟೆಸ್ಟ್‌ನಲ್ಲಿ ಉಭಯ ತಂಡಗಳು ಆಡಲಿವೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ತಂಡವು ಅಗ್ರ ಕ್ರಮಾಂಕದ ಆಟಗಾರರ ಉತ್ತಮ ಆಟದಿಂದಾಗಿ 9 ವಿಕೆಟಿಗೆ 236 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ತಮಿಮ್‌ ಇಕ್ಬಾಲ್‌ 59, ಇಮ್ರುಲ್‌ ಕಯಿಸ್‌ 44 ರನ್‌ ಹೊಡೆದರು.
ನ್ಯೂಜಿಲ್ಯಾಂಡಿನ ಬೌಲಿಂಗ್‌ ತೀಕ್ಷ್ಣವಾಗಿತ್ತು. ಬೌಲಿಂಗ್‌ ನಡೆಸಿದ ಆರು ಮಂದಿಯೂ ವಿಕೆಟ್‌ ಕೀಳಲು ಯಶಸ್ವಿಯಾಗಿದ್ದರು. ಹೆನ್ರಿ ಮತ್ತು ಸ್ಯಾಂಟ್ನರ್‌ ತಲಾ ಎರಡು ವಿಕೆಟ್‌ ಕಿತ್ತರು.

ನ್ಯೂಜಿಲ್ಯಾಂಡಿನ ಆರಂಭ ಉತ್ತಮವಾಗಿರಲಿಲ್ಲ. ಟಾಮ್‌ ಲಾಥಂ ಅವರನ್ನು ಬೇಗನೇ ಕಳೆದುಕೊಂಡ ಬಳಿಕ 6 ರನ್‌ ಗಳಿಸಿದ ವೇಳೆ ಮಾರ್ಟಿನ್‌ ಗಪ್ಟಿಲ್‌ ಗಾಯಗೊಂಡು ನಿವೃತ್ತಿ ಪಡೆಯಬೇಕಾಯಿತು. ಆದರೆ ಕೇನ್‌ ವಿಲಿಯಮ್ಸನ್‌ ಮತ್ತು ನೀಲ್‌ ಬ್ರೂಮ್‌ ಭರ್ಜರಿ ಆಟದ ಪ್ರದರ್ಶನ ನೀಡಿ ತಂಡವನ್ನು ಸುಸ್ಥಿತಿಗೆ ತಲುಪಿದರು. ಆದರೆ  ಅವರಿಬ್ಬರು ಶತಕ ದಾಖಲಿಸಲು ವಿಫ‌ಲರಾಗಿ ನಿರಾಸೆಗೊಂಡರು. ಅವರಿಬ್ಬರು 179 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಗೆಲುವಿನ ರೂವಾರಿಗಳಾಗ ಕಾಣಿಸಿಕೊಂಡರು.

ಬಿರುಸಿನ ಆಟವಾಡಿದ ಬ್ರೂಮ್‌ 97 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 97 ರನ್‌ ಗಳಿಸಿ ಔಟಾದರು. ಆಗ ನ್ಯೂಜಿಲ್ಯಾಂಡ್‌ ಗೆಲ್ಲಲು ಇನ್ನೂ 42 ರನ್‌ ಬೇಕಾಗಿತ್ತು. ವಿಲಿಯಮ್ಸನ್‌ ಮತ್ತು ಜೇಮ್ಸ್‌ ನೀಶಮ್‌ ಮುರಿಯದ ಮೂರನೇ ವಿಕೆಟಿಗೆ ಅಗತ್ಯ ರನ್‌ ಪೇರಿಸಿ ಜಯಬೇರಿ ಬಾರಿಸಿದರು. ವಿಲಿಯಮ್ಸನ್‌ 95 ರನ್‌ ಗಳಿಸಿ ಅಜೇಯರಾಗಿ ಉಳಿದರು. 9 ಬೌಂಡರಿ ಮತ್ತು 1 ಸಿಕ್ಸರ್‌ ಹೊಡೆದರು.

Advertisement

ರಾಸ್‌ ಟಯ್ಲರ್‌ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ನಾಲ್ಕನೇ ಸ್ಥಾನವನ್ನು ತುಂಬಲು ನ್ಯೂಜಿಲ್ಯಾಂಡ್‌ ತಂಡವು ಬ್ರೂಮ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಅವರು ಏಳು ವರ್ಷಗಳ ಬಳಿಕ ತಂಡಕ್ಕೆ ಆಯ್ಕೆಯಾಗಿದ್ದರು. ಮೊದಲ ಪಂದ್ಯದಲ್ಲಿ 22 ರನ್‌ ಗಳಿಸಿದ್ದ ಅವರು ದ್ವಿತೀಯ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಗೆಲುವಿನ ರೂವಾರಿಯಾಗಿದ್ದರು. ಇದೀಗ ಮೂರನೇ ಪಂದ್ಯದಲ್ಲೂ ಶತಕದ ಸನಿಹಕ್ಕೆ ತಲುಪಿ ತಂಡವನ್ನು ಆಧರಿಸಿದ್ದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 9 ವಿಕೆಟಿಗೆ 236 (ತಮಿಮ್‌ ಇಕ್ಬಾಲ್‌ 59, ಇಮ್ರುಲ್‌ ಕಯಿಸ್‌ 44, ನುರುಲ್‌ ಹಸನ್‌ 44, ಮ್ಯಾಟ್‌ ಹೆನ್ರಿ 53ಕ್ಕೆ 2, ಮಿಚೆಲ್‌ ಸ್ಯಾಂಟ್ನರ್‌ 38ಕ್ಕೆ 2); ನ್ಯೂಜಿಲ್ಯಾಂಡ್‌ 41.2 ಓವರ್‌ಗಳಲ್ಲಿ 2 ವಿಕೆಟಿಗೆ 239 (ಕೇನ್‌ ವಿಲಿಯಮ್ಸನ್‌ 95 ಔಟಾಗದೆ, ನೀಲ್‌ ಬ್ರೂಮ್‌ 97, ಮುಸ್ತಾಫಿಜುರ್‌ ರೆಹಮಾನ್‌ 32ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next