Advertisement

ನೀರಿನ ಘಟಕ ನಿರ್ವಹಣೆ ಹೊರಗುತ್ತಿಗೆ

01:59 AM Jun 07, 2019 | Sriram |

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹೊರಗುತ್ತಿಗೆಗೆ ವಹಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

Advertisement

ಆದರೆ, ಪ್ರಸ್ತುತ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳು ತಾವೇ ನಿರ್ವಹಣೆ ಹೊಣೆಗಾರಿಕೆ ನಿಭಾಯಿಸುತ್ತೇವೆ ಎಂದರೆ
ಅದಕ್ಕೂ ಒಪ್ಪಿಗೆ ನೀಡಲಾಗುವುದು. ಹೊಸದಾಗಿ ಯಾವುದಾದರೂ ಗ್ರಾಪಂಗಳು ನಿರ್ವಹಣೆಗೆ ಮುಂದಾದರೂ ಅನುಮತಿ ನೀಡಲಾಗುವುದು.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಆರ್‌ಡಿಪಿಆರ್‌ ಇಲಾಖೆಯಿಂದ ಸುಮಾರು 18 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು
ತೀರ್ಮಾನಿಸಿದ್ದು ಆ ಪೈಕಿ 16 ಸಾವಿರ ಅಳವಡಿಸಲಾಗಿದೆ. ಘಟಕಗಳ ನಿರ್ವಹಣೆ ಸವಾಲಾಗಿದೆ.

ಹೀಗಾಗಿ, ತಾಲೂಕು ಮಟ್ಟದಲ್ಲಿ ಪ್ಯಾಕೇಜ್‌ ಮಾಡಿ ರಾಜ್ಯ ಮಟ್ಟದಲ್ಲಿ ಒಂದು ಸಂಸ್ಥೆಗೆ ನಿರ್ವಹಣೆಗೆ ಹೊರಗುತ್ತಿಗೆಗೆ ನೀಡಲು ನಿರ್ಧರಿಸಲಾಗಿದೆ.

ಐದು ವರ್ಷ ನಿರ್ವಹಣೆ ಸಮೇತ ಸುಸೂತ್ರವಾಗಿ ಘಟಕ ಕಾರ್ಯನಿರ್ವಹಿಸುವಂತೆ ಮಾಡಲು ಒಟ್ಟು 233 ಕೋಟಿ ರೂ. ವೆಚ್ಚ ಸರ್ಕಾರವೇ ಭರಿಸಲಿದೆ.

Advertisement

ಪ್ರತಿ ಘಟಕಕ್ಕೆ ಸರಾಸರಿ ಮೂರು ಸಾವಿರ ರೂ.ನಂತೆ ನಿರ್ವಹಣೆ ವೆಚ್ಚ ನೀಡಲಾಗುವುದು ಎಂದು ಹೇಳಿದರು.

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಪ್ರಸ್ತುತ ಇರುವ ನಾಣ್ಯ ಹಾಕಿ ನೀರು ಪಡೆಯುವ ಬೂತ್‌ ವ್ಯವಸ್ಥೆ ಬದಲು ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಕಾಯಿನ್‌ ಹಾಕುವ ಬೂತ್‌ನಲ್ಲಿ ಕೆಲವರು ಕಬ್ಬಿಣದ ವಾಷರ್‌,ಬಿಲ್ಲೆ ಹಾಕಿ ನೀರು ಪಡೆಯುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಕಾಯಿನ್‌ ಬೂತ್‌ ಕೆಟ್ಟು ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಸ್ಮಾರ್ಟ್‌ ಕಾರ್ಡ್‌ ಜಾರಿಗೊಳಿಸಲಾಗುವುದು. ಆದರೆ, ಇದರಿಂದ ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಪ್ರತಿ ಲೀಟರ್‌ಗೆ 10 ಪೈಸೆ ದರದಂತೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆದರೆ,ನಿರ್ವಹಣಾ ವೆಚ್ಚ 25 ಪೈಸೆ ಆಗುತ್ತಿದೆ. ಇದನ್ನು ಸರಿದೂಗಿಸಲು ಪ್ರತಿ ಲೀಟರ್‌ಗೆ 25 ಪೈಸೆ ನಿಗದಿ ಮತ್ತು ಐದು ವರ್ಷ ಕಾಲ ನಿರ್ವಹಣೆ ಮತ್ತು ಕಾರ್ಯಾಚರಣೆ ನಿಗದಿಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next