Advertisement

ಗರಿಗೆದರಿದ ರಾಜಕೀಯ ಚಟುವಟಿಕ

04:25 PM Mar 29, 2018 | |

ದಾವಣಗೆರೆ: ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಮುಹೂರ್ತ ಫಿಕ್ಸ್‌ ಆದ ಮಾರನೆಯ ದಿನವಾದ ಬುಧವಾರ ಇಡೀ ರಾಜಕೀಯ ಚಿತ್ರಣವೇ ಬದಲಾಗಿದೆ. ನಿನ್ನೆಯವರೆಗೆ ಸಮಾವೇಶ, ಸಮಾರಂಭದಲ್ಲಿ ಬ್ಯುಜಿಯಾಗಿದ್ದ ಬಿಜೆಪಿ, ಕಾಂಗ್ರೆಸ್ಸಿಗರು ಸ್ವಲ್ಪ ರೆಸ್ಟ್‌ ತೆಗೆದುಕೊಂಡರೂ ಕಾರ್ಯ ಚಟುವಟಿಕೆ ಮುಂದುವರಿಸಿದ್ದು, ಜೆಡಿಎಸ್‌ ನವರು ಮಾ. 31ರಂದು ಜಿಲ್ಲೆಯ ವಿವಿಧೆಡೆ ವಿಕಾಸ ಪರ್ವ ಸಮಾವೇಶಕ್ಕೆ ಅಣಿಗೊಳ್ಳುತ್ತಿದ್ದಾರೆ.

Advertisement

ಇತ್ತ ಕಾಂಗ್ರೆಸ್ಸಿಗರು ಏ. 3ರಂದು ಪಕ್ಷದ ರಾಷ್ಟ್ರೀಯ ರಾಹುಲ್‌ ಗಾಂಧಿ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಇಂಧನ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ, ಕೆಲ ಸೂಚನೆ ನೀಡಿದ್ದು, ಮುಖಂಡರು ಸಮಾವೇಶದ ತಯಾರಿಯಲ್ಲಿ ನಿರತರಾಗಿದ್ದಾರೆ. 

ಬಿಜೆಪಿಯವರು ಪಕ್ಷದ ಕಚೇರಿಯಲ್ಲಿ ಕಾಲ್‌ ಸೆಂಟರ್‌ ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಚುನಾವಣೆಯ ಪ್ರತೀ ಕೆಲಸ, ಕಾರ್ಯಗಳನ್ನು ಪಕ್ಷದ ವರಿಷ್ಠರಿಗೆ, ರಾಜ್ಯ ನಾಯಕರಿಗೆ ತಿಳಿಸಲು, ರಾಜ್ಯಮಟ್ಟದಲ್ಲಿ ಕೈಗೊಳ್ಳುವ ತೀರ್ಮಾನ, ನೀಡುವ ನಿರ್ದೇಶನಗಳನ್ನು ಕೆಳ ಹಂತದವರಿಗೆ ತಲುಪಿಸಲು ಸಾಮಾಜಿಕ ಜಾಲತಾಣದಲ್ಲಿ ಪೇಜ್‌ ತೆರೆಯಲಾಗಿದ್ದು, ಅವುಗಳ ನಿರ್ವಹಣೆಯ ಜವಾಬ್ದಾರಿ ಹಂಚಿಕೆ ಕಾರ್ಯ ನಡೆಯಿತು.

ಜೆಡಿಎಸ್‌ ನಾಯಕರು ಸಹ ಪಕ್ಷದ ಕಾರ್ಯ ಚಟುವಟಿಕೆಗೆ ಚುರುಕು ಮುಟ್ಟಿಸಿದ್ದಾರೆ. ಮಾ. 31ರಂದು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಜಿಲ್ಲೆಯಲ್ಲಿ ಹಮ್ಮಿಕೊಂಡ ವಿಕಾಸಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಈ ಸಮಾವೇಶದ ತಯಾರಿಯಲ್ಲಿ ದಿನವಿಡೀ ತೊಡಗಿಕೊಂಡರು.

ಇನ್ನು ಎಲ್ಲಾ ಪಕ್ಷದ ವರಿಷ್ಠರು, ಉಸ್ತುವಾರಿಗಳು ಅಭ್ಯರ್ಥಿಗಳ ಆಯ್ಕೆಯ ಚರ್ಚೆಯಲ್ಲಿ ತೊಡಗಿಕೊಂಡಿದ್ದು ಕೇಳಿಬಂತು. ಅಭ್ಯರ್ಥಿಗಳು ಆಯ್ಕೆಯಾಗದ ಕ್ಷೇತ್ರಗಳಲ್ಲಿನ ನಾಯಕರು ಇಲ್ಲಿಯವರೆಗೆ ಮಾಡಿದ ಪ್ರಯತ್ನ ಫಲ ನೀಡದೇ ಇದ್ದರೆ ಏನು ಮಾಡಬೇಕು ಎಂಬುದರ ಕುರಿತು ತಮ್ಮ ಮಾರ್ಗದರ್ಶಿ, ಹಿತೈಷಿ, ಪಕ್ಷದ ತಮ್ಮ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Advertisement

ಫ್ಲೆಕ್ಸ್‌-ಫಲಕ ತೆರವು ಚುರುಕು

ಚುನಾವಣೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ವಿವಿಧೆಡೆ ಅಳವಡಿಸಲಾಗಿರುವ ಜಾಹೀರಾತು ಫಲಕ, ಸಿಎಂ, ಸಚಿವರ ಭಾವಚಿತ್ರ ಇರುವ ಸರ್ಕಾರದ ವಿವಿಧ ಯೋಜನೆಗಳ ಪ್ರಚಾರ ಫಲಕ ತೆರವು ಮಾಡುವ ಕಾರ್ಯ ಬುಧವಾರ ಸಹ ಚುರುಕಾಗಿ ನಡೆಯಿತು. ಚುನಾವಣಾ ತಹಶೀಲ್ದಾರ್‌, ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿಗಳು, ಸಿಬ್ಬಂದಿ 8 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿರುವ ಪಕ್ಷ, ರಾಜಕೀಯ ನಾಯಕರ ಪ್ರಚಾರ ಫಲಕ, ಫ್ಲೆಕ್ಸ್‌ ಬ್ಯಾನರ್‌ ತೆರವುಗೊಳಿಸುವ ಅಥವಾ ಭಾವಚಿತ್ರ, ಚಿನ್ಹೆ ಮುಚ್ಚುವ ಕಾರ್ಯ ಕೈಗೊಂಡರು. ಆದರೆ, ದಿನವಿಡೀ ಕಾರ್ಯಾಚರಣೆ ಮಾಡಿದರೂ ಕಾರ್ಯ ಪೂರ್ಣಗೊಳ್ಳಲಿಲ್ಲ. ಗುರುವಾರ ಸಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಚುನಾವಣಾ ಶಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಫಲಕ
ತೆರವು, ಮುಚ್ಚುವ ಕಾರ್ಯದಲ್ಲಿ ಸಿಬ್ಬಂದಿ ಯಡವಟ್ಟು ಮಾಡಿರುವ ಘಟನೆ ಸಹ ನಡೆದಿದೆ. ಪಿಬಿ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕುರಿತು ಹಾಕಲಾಗಿರುವ ಸಾರ್ವಜನಿಕರ ಜಾಗೃತಿ ಫಲಕದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪನವರ ಭಾವಚಿತ್ರ ಮುಚ್ಚದೇ ಇರುವುದು ಕಂಡುಬಂತು.

ಅಧಿಕಾರಿಗಳೂ ಫುಲ್‌ ಬ್ಯುಸಿ
ಚುನಾವಣೆಯ ವೇಳಾಪಟ್ಟಿ ನಿಗದಿಯಾಗುತ್ತಲೇ ಇತ್ತ ಅಧಿಕಾರಿಗಳು ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಕೊಳ್ಳುವಂತಾಗಿದೆ. ಜಿಲ್ಲಾಧಿಕಾರಿ, ಚುನಾವಣಾ ವಿಭಾಗದ ಅಧಿಕಾರಿಗಳ ಜೊತೆಗೆ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆಯವರೆಗೆ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್‌ನಲ್ಲಿ ನಿರತರಾಗಿದ್ದರು. ಚುನಾವಣೆ ನೀತಿ ಸಂಹಿತೆಯ ಪಾಠ, ಅಕ್ರಮ ತಡೆಗೆ ಕೈಗೊಳ್ಳಬೇಕಾದ ಕ್ರಮ, ಶಾಂತಿಯುತ ಚುನಾವಣೆಗೆ ನಡೆಸಿಕೊಳ್ಳಬೇಕಾದ ತಯಾರಿ, ಸಿಬ್ಬಂದಿ, ಅಧಿಕಾರಿಗಳಿಗೆ ನೀಡಿರುವ ತರಬೇತಿಯ ಪರೀಕ್ಷೆ ಹೀಗೆ ಹಲವು ವಿಷಯಗಳ ಕುರಿತು ದಿನವಿಡೀ ಚರ್ಚೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next