Advertisement

ರಾಜ್ಯ ಸರ್ಕಾರದ ನಡೆಗೆ ಆಕ್ರೋಶ

03:39 PM Jul 20, 2017 | Team Udayavani |

ರಾಯಚೂರು: ಬಂಧಿಖಾನೆ ಡಿಐಜಿ ಡಿ.ರೂಪಾ ಅವರ ವರ್ಗಾವಣೆ ಹಾಗೂ ಶರತ್‌ ಮಡಿವಾಳ ಅವರ ಹತ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಖಂಡಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಡಿಐಜಿ ಡಿ.ರೂಪಾ ಅವರ ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ತಾನು ಅಕ್ರಮದ ಪರ ಎಂಬುದನ್ನು ಸಾಬೀತು ಮಾಡಿದೆ ಎಂದು ಟೀಕಿಸಿದರು. 

ರಾಜ್ಯ ಸರ್ಕಾರ ಅಕ್ರಮ ದಂಧೆಕೋರರಿಗೆ, ಭ್ರಷ್ಟ ವ್ಯವಸ್ಥೆಗೆ ಸಹಕಾರ ನೀಡುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಅನುಭವಿಸಲು ಕಾರಾಗೃಹಗಳನ್ನು ನಿರ್ಮಿಸಿದ್ದರೆ, ರಾಜ್ಯ ಸರ್ಕಾರ ಪರಪ್ಪನ ಅಗ್ರಹಾರವನ್ನೇ ಐಷಾರಾಮಿಯಾಗಿ ಬದಲಿಸಿದೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪೆ¤ ಶಶಿಕಲಾ ಹಾಗೂ ನಕಲಿ ಸ್ಟಾಂಪ್‌ ಪೇಪರ್‌ ಹಗರಣದ ಪ್ರಮುಖ ಆರೋಪಿ ಕರಿಂಲಾಲ ತೆಲಗಿಗೆ ಭೋಗ
ಜೀವನ ನಡೆಸಲು ಅವಕಾಶ ನೀಡಿರುವ ಸರ್ಕಾರದ ನಡೆ ಖಂಡನಾರ್ಹ. ಇಂಥ ಅಕ್ರಮವನ್ನು ಬಯಲಿಗೆಳೆದ ಅಧಿಕಾರಿ ಯನ್ನೇ ಸರ್ಕಾರ ವರ್ಗಾವಣೆ ಮಾಡುತ್ತಿದೆ ಎಂದರೆ ಇನ್ನೆಂಥ ಪ್ರಾಮಾಣಿಕ ಆಡಳಿತ ನಡೆಸಲಿದೆ ಎಂದು ಪ್ರಶ್ನಿಸಿದರು. ಕಾರಾಗೃಹದ ಡಿಜಿಪಿ ಎರಡು ಕೋಟಿ ರೂ. ಲಂಚ ಪಡೆದು ಜೈಲಿನಲ್ಲೇ ಎಲ್ಲ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ ಎಂಬ ಬಗ್ಗೆ ಡಿಐಜಿ ಡಿ.ರೂಪಾ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. 

ಇಂಥ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕಿತ್ತು. ಆದರೆ, ಅಕ್ರಮ ಬಯಲಿಗೆಳೆದ ಮಹಿಳಾ ಅಧಿಕಾರಿಯನ್ನೇ ಮೂಲೆಗುಂಪು ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.

ಮಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳರ ಕೊಲೆ ಆರೋಪಿಗಳನ್ನು ಈವರೆಗೂ ಬಂ ಧಿಸಿಲ್ಲ. ಈ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿರುವುದು ಖಂಡನಾರ್ಹ. ಈ ಕೂಡಲೇ ಕೊಲೆ ಆರೋಪಿಗಳನ್ನು ಬಂಧಿ ಸಬೇಕು ಹಾಗೂ ಡಿಐಜಿ ರೂಪಾ ವರ್ಗಾವಣೆ ರದ್ದುಪಡಿಸುವುದರ ಜತೆಗೆ ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು 
ಒತ್ತಾಯಿಸಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ ಜಾಡಲದಿನ್ನಿ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಹಿರಿಯ ಮುಖಂಡ ಆರ್‌.ತಿಮ್ಮಯ್ಯ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶಪ್ಪ, ನಗರಸಭೆ ಸದಸ್ಯರಾದ ದೊಡ್ಡ ಮಲ್ಲೇಶಪ್ಪ, ಈ. ವಿನಯಕುಮಾರ, ಮಹಾಲಿಂಗ ರಾಂಪುರ, ನರಸಪ್ಪ ಯಕ್ಲಾಸಪುರ, ರಾಮು ಗಿಲ್ಲೇರಿ, ಶಶಿರಾಜ ಮಸ್ಕಿ, ಶ್ರೀನಿವಾಸರೆಡ್ಡಿ, ಎ.ಚಂದ್ರಶೇಖರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next