ಮುದ್ದೇಬಿಹಾಳ: ಯುಗಾದಿ ಶುಭಾಶಯ ಮತ್ತು ಮಾ. 28ರಂದು ಪಟ್ಟಣದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಬೃಹತ್ ಶೋಭಾಯಾತ್ರೆ ನಡೆಸುವ ಮಾಹಿತಿ ಹೊಂದಿದ್ದ ಫ್ಲೆಕ್ಸ್ ಅನ್ನು ಕೆಲ ಕಿಡಿಗೇಡಿಗಳು ಬ್ಲೇಡ್‌ನಿಂದ ಕೊಯ್ದು ವಿರೂಪಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು ಹಿಂದೂ ಸಂಘಟನೆಗಳ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಫ್ಲೆಕ್ಸ್ ವಿರೂಪಗೊಳಿಸಿದ ಕಿಡಿಗೇಡಿಗಳ ಕ್ರಮ ಖಂಡಿಸಿ, ಅಂಥವರನ್ನು ಪತ್ತೆ ಮಾಡಿ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆ, ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರು ಪೊಲೀಸ್ ಠಾಣೆವರೆಗೂ ಕಾಲ್ನಡಿಗೆ ಮೂಲಕ ತೆರಳಿ ಪ್ರತಿಭಟನೆ ನಡೆಸಿ ತನಿಖೆಗೆ ಒತ್ತಾಯಿಸಿದ ಮನವಿಯನ್ನು ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದರು.
ಇಲ್ಲಿನ ಮುಖ್ಯ ಬಜಾರ್‌ನಲ್ಲಿರುವ ಪುರಸಭೆ ವಾಣಿಜ್ಯ ಸಂಕೀರ್ಣ ಕಟ್ಟಡದ ಮೇಲೆ ಬಿಜೆಪಿ ಹಿರಿಯ ಮುಖಂಡ ಹೇಮರಡ್ಡಿ ಮೇಟಿ ಜನತೆಗೆ ಯುಗಾದಿ ಹಬ್ಬದ ಶುಭ ಕೋರುವ ಮತ್ತು ಮಾ. 28ರಂದು ಹಿಂದೂ ವಿರಾಟ್ ಸಮಾವೇಶ ಮತ್ತು ಶೋಭಾಯಾತ್ರೆ ನಡೆಸುವ ಮಾಹಿತಿ ಇದ್ದ ಶುಭಕೋರುವ ಫ್ಲೆಕ್ಸ್‌ನ್ನು 2-3 ದಿನಗಳ ಹಿಂದೆ ಅಳವಡಿಸಲಾಗಿತ್ತು.
ಸೋಮವಾರ ಬೆಳಗ್ಗೆ ನೋಡಿದಾಗ ಫ್ಲೆಕ್ಸ್‌ನಲ್ಲಿದ್ದ ಸಾದ್ವಿ ಸರಸ್ವತಿ ಅವರ ಪೂರ್ತಿ ಮುಖ, ಹೇಮರಡ್ಡಿ ಮೇಟಿ, ಬಿಜೆಪಿ ಮುಖಂಡ ಶಾಂತಗೌಡ ಬಿರಾದಾರ ಅವರ ಕಣ್ಣು ಕತ್ತರಿಸಿದ್ದಲ್ಲದೆ ಫ್ಲೆಕ್ಸ್‌ನಲ್ಲಿದ್ದ ಹಿಂದೂ ಸಂಘಟನೆ ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಚೇತನ್ ಮೋಟಗಿ, ಶೇಖರ ಢವಳಗಿ ಅವರ ಮುಖದ ಭಾಗಕ್ಕೆ, ಫ್ಲೆಕ್ಸ್‌ನ ಅಲ್ಲಲ್ಲಿ ಬ್ಲೇಡಿ ನಿಂದ ಹರಿದು ವಿರೂಪಗೊಳಿದ್ದು ಕಂಡು ಬಂದಿತ್ತು.
ವಿಷಯ ಎಲ್ಲೆಡೆ ಹರಡಿದ್ದರಿಂದ ಸಾವಿರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಕಿಡಿಗೇಡಿಗಳ ವಿರುದ್ಧಧಿಕ್ಕಾರ ಕೂಗ ತೊಡಗಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮನವೊಲಿಸುವ ಯತ್ನ ಫಲಿಸಲಿಲ್ಲ. ಈ ವೇಳೆ ಸಿಪಿಐ ರವಿಕುಮಾರ ಕಪ್ಪತ್ತನ್ನವರ್, ಪಿಎಸೈ ಜಿ.ಎಸ್. ಪಾಟೀಲ ನೀವು ಫ್ಲೆಕ್ಸ್ ಅಳವಡಿಸಲು ಪುರಸಭೆಯ ಅನುಮತಿಯನ್ನೇ ಪಡೆದುಕೊಂಡಿಲ್ಲ ಎಂದು ತಕರಾರು ಮಾಡಿದ್ದು ಎಲ್ಲರ ಅಸಹನೆಗೆ ಕಾರಣವಾಯಿತು. ಮಾತಿನ ಚಕಮಕಿ ಶುರುವಾದಾಗ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು
ಮುಂದಾದರು.
ಇದರಿಂದ ಆಕ್ರೋಶಗೊಂಡ ಮುಖಂಡರಾದ ಪರಶುರಾಮ ಪವಾರ, ಜಗನ್ನಾಥ ಗೌಳಿ, ರಾಜೇಂದ್ರ ರಾಯಗೊಂಡ, ಮಾಣಿಕಚಂದ ದಂಡಾವತಿ, ಸಂಜೀವ ಬಾಗೇವಾಡಿ, ರಾಜಶೇಖರ ಹೊಳಿ, ಪುನೀತ ಹಿಪ್ಪರಗಿ, ರಾಜು ಮ್ಯಾಗೇರಿ, ಸಂತೋಷ ರಾಠೊಡ, ರಾಘವೇಂದ್ರ ಪತ್ತಾರ, ಶಿವಬಸು ಸಜ್ಜನ, ಮಹಾಂತೇಶ ಮೇಟಿ, ಸಂತೋಷ ಹೂಗಾರ ಮತ್ತಿತರರು ಕಿಡಿಗೇಡಿಗಳ ವಿರುದ್ಧಧಿಕ್ಕಾರ ಕೂಗಿದರು. ಈ ವೇಳೆ ಪೊಲೀಸರು, ಹಿಂದೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಕೊನೆಗೆ ಹಿಂದೂ ಕಾರ್ಯಕರ್ತರ ಮನವೊಲಿಸಿ ಫ್ಲೆಕ್ಸ್ ಕೆಳಗಿಳಿಸುವಲ್ಲಿ ಯಶಸ್ವಿಯಾದ ಪೊಲೀಸರು ಎಲ್ಲರನ್ನೂ ಠಾಣೆಗೆ ಬರಹೇಳಿದ್ದರಿಂದ ಎಲ್ಲರೂ ಘಟನೆಗೆ ಕಾರಣ ಎನ್ನಲಾದ ಒಂದು ಕೋಮಿನ ವಿರುದ್ಧಧಿಕ್ಕಾರ ಕೂಗುತ್ತ ಕೂಗುತ್ತ ಠಾಣೆಗೆ ತೆರಳಿ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.