ವಿಧಾನಸಭೆ: ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಶಾಲಾ-ಕಾಲೇಜುಗಳ ಬಳಿ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಪಕ್ಷಾತೀತವಾಗಿ ಸದಸ್ಯರು ಪ್ರಸ್ತಾಪಿಸಿ, ಮದ್ಯ ಮಾರಾಟಕ್ಕೆ ಟಾರ್ಗೆಟ್ ನೀಡದಂತೆ ಒತ್ತಾಯಿಸಿದರು.
ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಟಾರ್ಗೆಟ್ ನಿಗದಿಪಡಿಸಿದೆ. ಇಂತಿಷ್ಟು ಪ್ರಮಾಣದ ಮದ್ಯ ಮಾರಾಟ ಮಾಡಲೇಬೇಕು ಎಂದು ಸೂಚನೆ ನೀಡಿದೆ. ಹೀಗಾಗಿ, ಕಿರಾಣಿ ಅಂಗಡಿ ಗಳಲ್ಲೂ ಮದ್ಯ ಮಾರಾಟಕ್ಕೆ ಆವಕಾಶ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು. ಬಿಜೆಪಿಯ ದತ್ತಾತ್ರೇಯ ಸಿ.ಪಾಟೀಲ್ ರೇವೂರ, ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಶಿವಲಿಂಗೇಗೌಡ, ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಮದ್ಯದ ಅಂಗಡಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳುವೆ: ಅಬಕಾರಿ ಸಚಿವ ನಾಗೇಶ್ ಪ್ರತಿಕ್ರಿಯಿಸಿ, ಶಾಲಾ-ಕಾಲೇಜು, ದೇವಸ್ಥಾನಗಳ ಬಳಿ ಇಂತಿಷ್ಟು ದೂರ ಮದ್ಯದ ಅಂಗಡಿಗೆ ಲೈಸೆನ್ಸ್ ನೀಡುವಂತಿಲ್ಲ ಎಂಬ ನಿಯಮ ಇದೆ. ಇದು ಉಲ್ಲಂಘನೆಯಾಗಿದ್ದರೆ, ನಿಗದಿತ ಪ್ರಕರಣದ ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಅವರು, ಕಲಬುರಗಿಯಲ್ಲಿ ಶಾಲಾ-ಕಾಲೇಜು, ಮಂದಿರದ ಸಮೀಪವೇ ನಿಯಮಾವಳಿ ಉಲ್ಲಂ ಸಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಅವಕಾಶ ಕಲ್ಪಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಕೇಳಿದಾಗ, ಸಚಿವರು ಇಲ್ಲ ಎಂದು ಉತ್ತರ ನೀಡಿದ್ದರು. ಆದರೆ, ರೇವೂರ ಅವರು ದಾಖಲೆ ಸಹಿತ ಸದನಕ್ಕೆ ಮಾಹಿತಿ ನೀಡಿದರು. ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ಸದಸ್ಯರು ದಾಖಲೆ ಸಹಿತ ಹೇಳಿದ್ದಾರೆ.
ಸಚಿವರಿಗೆ ಅಧಿಕಾರಿಗಳು ದಿಕ್ಕು ತಪ್ಪಿಸಿ ಅಲ್ಲಿ ಮದ್ಯದ ಅಂಗಡಿಗೆ ಲೈಸೆನ್ಸ್ ಕೊಟ್ಟೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಬಕಾರಿ ಸಚಿವ ನಾಗೇಶ್ ಅವರ ನೆರವಿಗೆ ಧಾವಿಸಿ, ಸದಸ್ಯರು ಅನಧಿಕೃತ ಮದ್ಯ ಮಾರಾಟ, ನಿಯಮ ಉಲ್ಲಂ ಸಿ ಲೈಸೆನ್ಸ್ ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಂಬಂಧಪಟ್ಟ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ವಿಷಯಕ್ಕೆ ತೆರೆ ಎಳೆದರು.