Advertisement

Caste Census ವರದಿಗೆ ರಾಜ್ಯದೆಲ್ಲೆಡೆ ಭುಗಿಲೆದ್ದ ಆಕ್ರೋಶ

11:44 PM Mar 01, 2024 | Team Udayavani |

ಬೆಂಗಳೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿ ಬಗ್ಗೆ ಹಲವು ಅನುಮಾನಗಳು ಇರುವ ಹಿನ್ನೆಲೆಯಲ್ಲಿ ಸರಕಾರ ವರದಿಯನ್ನು ಅಂಗೀಕರಿಸಬಾರದು ಎಂದು ರಾಜ್ಯದ ಎರಡು ಪ್ರಬಲ ಸಮುದಾಯಗಳು ಆಗ್ರಹಿಸಿವೆ.

Advertisement

ಗುರುವಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ ಬೆನ್ನಲ್ಲೇ, ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ, ಒಕ್ಕಲಿಗರ ಸಂಘ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸಹಿತವಿವಿಧ ಮಠಾಧಿಪತಿಗಳು, ಬಿಜೆಪಿ ನಾಯಕರು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಒಕ್ಕಲಿಗರ ಹೋರಾಟ ಸಮಿತಿ ವಿರೋಧ
ಜಾತಿ ಗಣತಿ ವರದಿಗೆ ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಧೋರಣೆ ಸರಿಯಿಲ್ಲ ಎಂದು ಸಮಿತಿ ಅಧ್ಯಕ್ಷ ಗಾನಂ ಶ್ರೀಕಂಠಯ್ಯ ವಾಗ್ಧಾಳಿ ನಡೆಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜ್‌ ಆಯೋಗ ಮನೆಮನೆ ಸರ್ವೇ ಮಾಡಿ ದತ್ತಾಂಶಗಳ ಮಾಹಿತಿ ಕಲೆಹಾಕಿಲ್ಲ. ಈ ಅವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಬಾರದು ಎಂದು ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಡಿ.ವಿ.ಸದಾನಂದ ಗೌಡ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಮುದಾಯದ ಸಚಿವರು, ಸಂಸದರು ಹಾಗೂ ಶಾಸಕರ ಸಹಿ ಮಾಡಿ ಆಯೋಗಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಕ್ಕಲಿಗ ಸಮಾಜದ ಎಲ್ಲ ಉಪಪಂಗಡಗಳನ್ನು ಒಟ್ಟಿಗೆ ಸೇರಿಸಿ ವರದಿ ನೀಡಬೇಕೆಂದು ಆಯೋಗಕ್ಕೆ ಮನವಿ ಮಾಡಲಾಗಿದ್ದರೂ ಆಯೋಗ ಪರಿಗಣಿಸಿಲ್ಲ. ಜಯಪ್ರಕಾಶ ಹೆಗ್ಡೆ ಮಂಡಿಸಿದ ವರದಿ ವೈಜ್ಞಾನಿಕವಾಗಿಲ್ಲ. ಈ ಬಗ್ಗೆ ವೀರಶೈವ-ಲಿಂಗಾಯತ ಸಮುದಾಯವೂ ಅಪಸ್ವರ ಎತ್ತಿದೆ. ಸರಕಾರ ಹೊಸ ಸಮಿತಿ ರಚಿಸಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಿ ಎಂದು ಆಗ್ರಹಿಸಿದರು. ಆಗಿರುವ ತಪ್ಪುಗಳನ್ನು ಸರಿಪಡಿಸದೆ ಹೋದರೆ ಕಾನೂನು ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.

Advertisement

ಶ್ರೀಗಳ ಜತೆಗೆ ಚರ್ಚಿಸಿ
ಮುಂದಿನ ಹೋರಾಟ
ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ನಾಗರಾಜ್‌ ಯಲಚವಾಡಿ ಮಾತನಾಡಿ, ಆಯೋಗದ ಸಂಪೂರ್ಣ ವರದಿ ಪಡೆದು ಆದಿಚುಂಚನಗಿರಿ ಶ್ರೀಗಳು, ಸಮುದಾಯದ ಸಚಿವರು, ಶಾಸಕರು ಮತ್ತು ಸಂಸದರ ಜತೆ ಸಮಾಲೋಚಿಸಿ ಮುಂದಿನ ಹೋರಾಟದ ರೂಪುರೇಷಗಳನ್ನು ಚರ್ಚಿಸುವುದಾಗಿ ಹೇಳಿದರು.

ತುಮಕೂರಿನಲ್ಲಿ
ಮಠಾಧೀಶರ ತೀವ್ರ ವಿರೋಧ
ಜಾತಿಗಣತಿ ವರದಿಗೆ ತುಮಕೂರಿನ ವಿವಿಧ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವರದಿಯನ್ನು ಸರಕಾರ ಅಂಗೀಕರಿಸಬಾರದು ಎಂದು ಗುಬ್ಬಿ ತಾಲೂಕು ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ತಮ್ಮಡಿಹಳ್ಳಿ ಮಠಾಧ್ಯಕ್ಷರಾದ ಡಾ| ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಸಹಿತ ಹಲವರು ಆಗ್ರಹಿಸಿದ್ದಾರೆ.

ಅನುಷ್ಠಾನಕ್ಕೆ ಮುಂದಾದರೆ ತೀವ್ರ ಹೋರಾಟ
ಅವೈಜ್ಞಾನಿಕ ಕಾಂತರಾಜ್‌ ಆಯೋಗದ ವರದಿಯನ್ನು ಸರಕಾರ ಬಹಿರಂಗಗೊಳಿಸಿ ಅನುಷ್ಠಾನಕ್ಕೆ ಮುಂದಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ 2015ರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರಕಾರ ಸ್ವೀಕರಿಸಿರುವುದು ಸರಿಯಿಲ್ಲ. ಅವೈಜ್ಞಾನಿಕವಾಗಿದೆ ಎಂಬ ಆರೋಪಕ್ಕೆ ಒಳಗಾಗಿರುವ ಆ ವರದಿಯ ಬಗ್ಗೆ ಒಕ್ಕಲಿಗರ ಸಂಘ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಒಂದು ವೇಳೆ ಸರಕಾರ ಆಯೋಗದ ವರದಿಯನ್ನು ಅನುಷ್ಠಾನ ಮಾಡಲು ಮುಂದಾದರೆ ಸಮುದಾಯದ ಮಠಾಧೀಶರು, ಉಪಮುಖಮಂತ್ರಿಗಳು, ಸಚಿವರು, ವಿವಿಧ ಸಂಘ-ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಜಾತಿಗಣತಿ ವರದಿ ಸರಕಾರದ ಕೈ ಸೇರಿದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಇದರಲ್ಲಿ ಕೆಲವು ಹಂತಗಳಿವೆ. ಅದಕ್ಕಾಗಿ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ತಂಡ ರಚನೆ ಮಾಡಿ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು.
-ಸತೀಶ್‌ ಜಾರಕಿಹೊಳಿ,
ಲೋಕೋಪಯೋಗಿ ಸಚಿವ

ಜಾತಿ ಗಣತಿ ವರದಿ ಸ್ವೀಕಾರ ಮಾಡಬಾರದೆಂದು ಹಲವರು ಹೇಳಿದ್ದರು. ಸಿದ್ದರಾಮಯ್ಯ ಹಠಕ್ಕೆ ಬಿದ್ದು ವರದಿಯನ್ನು ಸ್ವೀಕರಿಸಿದ್ದಾರೆ. ಇದರಿಂದಾಗಿ ಸಮುದಾಯಗಳ ನಡುವೆ ವೈಷಮ್ಯ ನಡೆಯುತ್ತಿದೆ. ಜಾತಿ, ಉಪ ಜಾತಿ ಒಡೆಯುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ.
-ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ

ಸಾಮಾಜಿಕ, ಶೈಕ್ಷಣಿಕ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ವರದಿಯನ್ನು ಯಾರೂ ಓದಿಲ್ಲ. ವರದಿ ಓದದೆ ಯಾಕೆ ವಿರೋಧಿಸಬೇಕು? ವರದಿಯನ್ನು ಸಾರ್ವಜನಿಕರ ಮುಂದೆ ತಂದು ಚರ್ಚಿಸುತ್ತೇವೆ. ಸಂಪುಟದಲ್ಲೂ ಚರ್ಚೆ ಮಾಡಲಾಗುವುದು. ವರದಿಯನ್ನು ಓದದೆ ಅವೈಜ್ಞಾನಿಕ ಎನ್ನುವುದು ತಪ್ಪು.
-ಶಿವರಾಜ ತಂಗಡಗಿ,
ಹಿಂದುಳಿದ ವರ್ಗಗಳ ಖಾತೆ ಸಚಿವ

ಜಾತಿ ಗಣತಿ ಹೆಸರಿನಲ್ಲಿ ಕಾಂಗ್ರೆಸ್‌ ಇಡೀ ಸಮಾಜವನ್ನು ಛಿದ್ರ ಮಾಡುತ್ತಿದೆ. ನಾನೇ ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದ ಹೆಗ್ಗಳಿಕೆ ಪಡೆಯಲು ಮುಂದಾಗಿದ್ದಾರೆ. ಲಿಂಗಾಯತರು ನಾವೇ ಜಾತಿ ನಾಯಕರು ಎಂಬ ಬಿರುದು ಪಡೆಯಲು ಆ ನಾಯಕರು ವಿರೋಧಿತ್ತಿದ್ದಾರೆ. ಡಿಕೆಶಿ ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳಲು ವಿರೋಧಿಸುತ್ತಿದ್ದಾರೆ. ಜಾತಿ ಗಣತಿ ಕೆಲಸ ಕೇಂದ್ರದ್ದೇ ಹೊರತು ರಾಜ್ಯದ್ದಲ್ಲ.
-ಕೆ.ಎಸ್‌. ಈಶ್ವರಪ್ಪ , ಮಾಜಿ ಡಿಸಿಎಂ

ಜಾತಿ ಜನಗಣತಿ ವರದಿಗೆ ಶಾಮನೂರು ಶಿವಶಂಕರಪ್ಪ, ಸಚಿವೆ ಲಕ್ಷೀ¾ ಹೆಬ್ಟಾಳ್ಕರ್‌ ಸಹಿತ ಹಲವು ಸಚಿವರು ಹಾಗೂ ಕಾಂಗ್ರೆಸ್‌ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ. ಸಮೀಕ್ಷೆ ಕೈಗೊಂಡಿದ್ದ ಅ ಧಿಕಾರಿಗಳು ನಮ್ಮ ಮನೆಗೂ ಬಂದಿಲ್ಲ.
-ಜಿ.ಸೋಮಶೇಖರ ರೆಡ್ಡಿ, ಮಾಜಿ ಶಾಸಕ

ಜಯಪ್ರಕಾಶ್‌ ಹೆಗ್ಡೆಯವರು ರಾಜ್ಯದಲ್ಲಿ ಜಾತಿ ಗಣತಿಯನ್ನೇ ಮಾಡಿಲ್ಲ. ಹೀಗಿದ್ದರೂ ವರದಿ ನೀಡಿ¨ªಾರೆ. ಅದು ಕಾಂತರಾಜ್‌ ಸಮಿತಿ ವರದಿಯ ನಕಲಿಯೋ ಎಂಬ ಸಂಶಯವಿದೆ. ಈ ವರದಿಯಲ್ಲಿ ಮುಸ್ಲಿಂ ಜನಸಂಖ್ಯೆಯೇ ಮೊದಲ ಸ್ಥಾನದಲ್ಲಿದೆ. ಹಾಗಾಗಿ ಅವರು ಅಲ್ಪಸಂಖ್ಯಾಕರಾಗುವುದಿಲ್ಲ. ಸಂವಿಧಾನದಲ್ಲಿ ಅಲ್ಪಸಂಖ್ಯಾಕರೆಂದು ನೀಡಲಾಗಿರುವ ಸ್ಥಾನಮಾನಗಳಿಂದ ಕಾಂಗ್ರೆಸ್‌ ಸರಕಾರ ಅವರನ್ನು ಹೊರಗಿಡಬೇಕು.
-ಸಿ.ಟಿ.ರವಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next