Advertisement

ಕೇಂದ್ರದ ಜನ ವಿರೋಧಿ ನೀತಿಗೆ ಆಕ್ರೋಶ

05:41 PM Mar 30, 2022 | Team Udayavani |

ಬೆಳಗಾವಿ: ಕೇಂದ್ರ ಸರ್ಕಾರದ ಜನ-ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಎಐಟಿಯುಸಿ, ಸಿಐಟಿಯು, ವಿವಿಧ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಎರಡನೇ ದಿನವಾದ ಮಂಗಳವಾರವೂ ಬೆಂಬಲ ವ್ಯಕ್ತವಾಗಿದ್ದು, ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

Advertisement

ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಉದ್ಯಾನವನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.ಸರ್ಕಾರದ ಜನ-ಕಾರ್ಮಿಕ-ರೈತ ವಿರೋಧಿ ನೀತಿಗಳನ್ನು ಖಂಡಿಸಿದರು.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳು ಸೇರಿದಂತೆ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಸಿಲಿಂಡರ್‌, ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದರಿಂದ ಬದುಕುವುದು ದುಸ್ತರವಾಗಿದೆ. ರೈಲ್ವೆ, ವಿಮೆ, ಅಂಚೆ, ದೂರ ಸಂಪರ್ಕ, ಬಂದರು, ರಕ್ಷಣೆ ಸೇರಿದಂತೆ ದೇಶದ ಸಂಪತ್ತಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.

ಕನಿಷ್ಟ ಬೆಂಬಲ ಬೆಲೆ ಶಾಸನಬದ್ಧಗೊಳಿಸಬೇಕು. ಕಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕು. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಆಶಾ, ಅಂಗನವಾಡಿ, ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಖಾತ್ರಿಪಡಿಸಬೇಕು.

ಗುತ್ತಿಗೆ, ಹೊರಗುತ್ತಿಗೆ, ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸಬೇಕು. ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಹೊಸ ಪಿಂಚಣಿ(ಎನ್‌ ಪಿಎಸ್‌)ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಮುಂದುವರಿಸಬೇಕು. 180 ದಿನಗಳ ಗಳಿಕೆ ರಜೆಯನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Advertisement

ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರ ಸ್ಕೀಂ ನೌಕರರು ಹಾಗೂ ಪಂಚಾಯಿತಿ ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿಗೊಳಿಸಬೇಕು. ಬ್ಯಾಂಕ್‌ ಗಳ ಖಾಸಗೀಕರಣಕ್ಕೆ ಅವಕಾಶ ಕೊಡಬಾರದು, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಂಚೆ ಇಲಾಖೆಯ ಖಾಸಗೀಕರಣ ಕೈ ಬಿಡಬೇಕು. 8ನೇ ವೇತನ ಆಯೋಗವನ್ನು ತಕ್ಷಣವೇ ರಚಿಸಬೇಕು.

ವಾರಕ್ಕೆ 5 ದಿನ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕು. ಕಮಲೇಶ ಚಂದ್ರ ವರದಿಯ ಶಿಫಾರಸುಗಳನ್ನು ಗ್ರಾಮೀಣ ಅಂಚೆ ನೌಕರರಿಗೆ ಅನ್ವಯಿಸಿ ಅನುಷ್ಠಾನಗೊಳಿಸಬೇಕು ಎಂದು ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿಯವರು ಆಗ್ರಹಿಸಿದರು. ಅವೈಜ್ಞಾನಿಕ ಗುರಿ ನಿಗದಿಪಡಿಸಿ ನೌಕರರಿಗೆ ಮಾನಸಿಕ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ನೌಕರರಿಗೆ 12, 24 ಹಾಗೂ 36 ವರ್ಷಗಳಿಗೊಮ್ಮೆ ವೇತನ ಹೆಚ್ಚಿಸಬೇಕು. ಅಂಚೆ ಇಲಾಖೆಯ ಎಲ್ಲ ಸೌಲಭ್ಯಗಳನ್ನೂ ಈ ನೌಕರರಿಗೂ ವಿಸ್ತರಿಸಬೇಕು. ಅಂಚೆ ಕಚೇರಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ತ್ವರಿತವಾಗಿ ಪರಿಹರಿಸಬೇಕು. ಕೋವಿಡ್‌-19 ವೇಳೆ ನಿಧನರಾದ ಅಂಚೆ ನೌಕರರ ಕುಟುಂಬ ದವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು, ಇಂಡಿಯನ್‌ ಎಂಪ್ಲಾಯ್ಸ ಯೂನಿಯನ್‌, ಐಟಿಯುಸಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ, ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘ, ಅಂಚೆ ನೌಕರರ ರಾಜ್ಯಮಟ್ಟದ ಜಂಟಿ ಪರಿಷತ್‌, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next