Advertisement

ಬಿಜೆಪಿ ನಾಯಕರ ವಿರುದ್ಧದ ಕ್ರಿಮಿನಲ್‌ ಪ್ರಕರಣ ವಾಪಸ್‌ ಪಡೆದಿದ್ದೇಕೆ?

04:48 PM Sep 15, 2020 | Suhan S |

ದಾವಣಗೆರೆ: ಬಿಜೆಪಿ ಸಚಿವರು, ಶಾಸಕರು ಹಾಗೂ ನಾಯಕರ ಮೇಲಿನ 62 ಕ್ರಿಮಿನಲ್‌ ಮೊಕದ್ದಮೆಗಳನ್ನು ರಾಜ್ಯ ಸರಕಾರ ವಾಪಸ್‌ಪಡೆದು ಪೊಲೀಸ್‌ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದೆ ಎಂದುಕೆಪಿಸಿಸಿ ಮಾಧ್ಯಮ ವಕ್ತಾರ ಡಿ. ಬಸವರಾಜ್‌ ಆರೋಪಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಗಳಲ್ಲಿ ಸಚಿವರಾದ ಬಿ.ಸಿ. ಪಾಟೀಲ್‌, ಆನಂದ ಸಿಂಗ್‌, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ರೇಣುಕಾಚಾರ್ಯ, ನೆಹರು ಓಲೇಕಾರ ಸೇರಿದಂತೆ ಘಟಾನುಘಟಿ ಬಿಜೆಪಿ ನಾಯಕರ ಹೆಸರುಗಳಿವೆ. ಪೊಲೀಸ್‌ ಇಲಾಖೆ ಹಾಗೂ ಕಾನೂನು ಇಲಾಖೆಗಳ ಅಭಿಪ್ರಾಯಗಳನ್ನು ಕಡೆಗಣಿಸಿ ಕೋಮು ಸಾಮರಸ್ಯ ಕದಡಿದ ಸರಕಾರದ ಕ್ರಮ ಸರಿಯಲ್ಲ. ಇದು ಸಮಾಜದ ಶಾಂತಿ, ಸೌಹಾರ್ದತೆ ಕದಡುವ ಶಕ್ತಿಗೆ ಬೆಂಬಲ, ಪ್ರಚೋದನೆ ನೀಡಿದಂತಾಗುತ್ತದೆ ಎಂದರು.

ಸರ್ವ ಪಕ್ಷ ನಿಯೋಗ ಒಯ್ಯುವ ಧೈರ್ಯವೂ ಇಲ್ಲ: ರಾಜ್ಯ ಸರಕಾರ ಹೆಚ್ಚಿನ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷಗಳ ನಿಯೋಗ ಒಯ್ಯುವ ಧೈರ್ಯವನ್ನೂ ಮಾಡುತ್ತಿಲ್ಲ. ರಾಜ್ಯಕ್ಕೆ ಅನುದಾನ ನೀಡುವ ಬದಲಾಗಿ ಸಾಲ ಪಡೆಯುವ ಬಗ್ಗೆ ಕೇಂದ್ರ ಸರಕಾರ ಸಲಹೆ ನೀಡುತ್ತಿದೆ. ಕಳೆದ ವರ್ಷ ರಾಜ್ಯಕ್ಕೆ ಬಂದೊದಗಿದ ನೆರೆ ಐತಿಹಾಸಿಕ ದಾಖಲೆಯಾಗಿದೆ. ಈ ಸಂದರ್ಭದಲ್ಲಿಯೂ ಪ್ರಧಾನಿ ಮೋದಿ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿಲ್ಲ. ಪ್ರಧಾನಿ ಮೋದಿಯವರ ಸರ್ವಾಧಿಕಾರಿ ಧೋರಣೆ ಎದುರು ಎಲ್ಲರೂ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಬಸವರಾಜ್‌ ವಾಗ್ಧಾಳಿ ನಡೆಸಿದರು.

ಕಾಂಗ್ರೆಸ್‌ ಮುಖಂಡ ಚಮನ್‌ ಸಾಬ್‌ ಮಾತನಾಡಿ, ಬಿಜೆಪಿ ತನ್ನ ಸಂಸದ, ಶಾಸಕರ ಪ್ರಕರಣ ವಾಪಸ್‌ ಪಡೆಯುವ ಮೂಲಕ ತನ್ನ ಪ್ರಕರಣವನ್ನು ತಾನೇ ಹಿಂಪಡೆದು ಕಾನೂನು ವ್ಯವಸ್ಥೆಯ ಮೇಲಿನ ಗೌರವ, ನಂಬಿಕೆಗೆ ಧಕ್ಕೆ ತಂದಿದೆ ಎಂದರು. ಇನ್ನೋರ್ವ ಮುಖಂಡ ದೇವರಮನಿ ಶಿವಕುಮಾರ್‌ ಮಾತನಾಡಿ, ರಾಜ್ಯ ಸರಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಮಾಧ್ಯಮಗಳನ್ನು ಬಳಸಿಕೊಂಡು ಡ್ರಗ್ಸ್‌ ವಿಚಾರವನ್ನೇ ವೈಭವೀಕರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಮುಖಂಡ ಅಬ್ದುಲ್‌ ಲತೀಫ್‌ ಮಾತನಾಡಿ, ಡ್ರಗ್ಸ್‌ ವಿಚಾರದಲ್ಲಿ ಸರಕಾರ ಒಂದು ಸಮುದಾಯಕ್ಕೆ ಕಳಂಕ ಹಚ್ಚುವ ಕೆಲಸ ಮಾಡುತ್ತಿದೆ. ಕ್ಯಾಸಿನೋಗೆ ನಾನೂ ಹೋಗಿದ್ದೇನೆ. ಬಹಳಷ್ಟು ಜನರು ಹೋಗುತ್ತಾರೆ. ಆದರೆ ಕ್ಯಾಸಿನೋ ಆಡಲು ಹೋಗಿದ್ದರು ಎಂಬ ಮಾತ್ರಕ್ಕೆ ಎಲ್ಲರನ್ನು ಡ್ರಗ್ಸ್‌ ವಿಚಾರದಲ್ಲಿ ಸಿಲುಕಿಸುವುದು ಸರಿಯಲ್ಲ. ಈ ಬಗ್ಗೆ ಇಷ್ಟು ದಿನ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು. ಪಕ್ಷದ ಪ್ರಮುಖರಾದ ಗಡಿಗುಡಾಳ್‌ ಮಂಜುನಾಥ್‌, ಕೆ.ಎಂ. ಮಂಜುನಾಥ್‌, ಡಿ. ಶಿವಕುಮಾರ್‌, ಮಹಿಳಾ ಪ್ರಮುಖರಾದ ರಾಜೇಶ್ವರಿ, ಶುಭಮಂಗಳಾ, ದಾಕ್ಷಾಯಿಣಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next