Advertisement

ಶಿಕ್ಷಣ ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ

10:16 AM Feb 03, 2019 | |

ತೀರ್ಥಹಳ್ಳಿ: ತಾಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆ ಶಿಕ್ಷಣ ಇಲಾಖೆಯ ಅರಿವಿಗೆ ಬಂದಂತಿಲ್ಲ. ಪಟ್ಟಣದ ಡಾ| ಯು.ಆರ್‌. ಅನಂತಮೂರ್ತಿ ಪ್ರೌಢಶಾಲೆಯಲ್ಲಿಯೂ ವಿದ್ಯಾರ್ಥಿಗಳ ಹಾಜರಾತಿ ಕೊರತೆ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಭೂದಾನದ ಜಾಗಗಳ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ತಾಪಂ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಪ್ರಶ್ನಿಸಿದರು. ಶಾಲಾ ಮಕ್ಕಳ ಹಾಜರಾತಿ ಕೊರತೆ, ಪರೀಕ್ಷೆಗೆ ಕೂರಲು ವಿದ್ಯಾರ್ಥಿಗಳಿಗೆ ಅನರ್ಹರು ಎಂದು ಶಾಲೆಯವರು ತಿಳಿಸಿರುವುದು, ಪೋಷಕರಿಗೆ ಸೂಕ್ತ ಮಾಹಿತಿ ನೀಡದ ಶಾಲೆಗಳ ಬಗ್ಗೆ ಯಾರು ಹೊಣೆ ಎಂದು ಪ್ರಶ್ನಿಸಿದರು. ತಾಪಂ ಸದಸ್ಯ ಕುಕ್ಕೆ ಪ್ರಶಾಂತ್‌ ಮಾತನಾಡಿ, ತಾಲೂಕಿನ ಕುಕ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಹಿಂಬಾಗದ ಅಕೇಶಿಯ ಕಡಿತ ಮಾಡಿದ ಹಣವನ್ನು ಎರಡು ವರ್ಷಗಳ ಹಿಂದೆ ಶಿಕ್ಷಕರೊಬ್ಬರು ತೆಗೆದುಕೊಂಡಿದ್ದಾರೆ. ಆ ಶಿಕ್ಷಕರು ಬೇರೆ ಊರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆ ಶಿಕ್ಷಕರ ಬಗ್ಗೆ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು. ತಾಲೂಕಿನ ಹಲವು ಸರ್ಕಾರಿ ಶಾಲೆಗಳ ಜಾಗ ಒತ್ತುವರಿಯಾಗಿದ್ದು, ಸುಣ್ಣ ಬಣ್ಣವಿಲ್ಲದೆ ಶಾಲಾ ಕಟ್ಟದ ದುಸ್ಥಿತಿ ತಲುಪಿದೆ. ಭೂದಾನಿಗಳ ಜಾಗವನ್ನು ಶಿಕ್ಷಣ ಇಲಾಖೆ ಕಳೆದುಕೊಳ್ಳುವ ಸ್ಥಿತಿ ತಲುಪಿದೆ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಶಿಕ್ಷಣಾಧಿಕಾರಿ ಅನಂತ್‌ ಕುಮಾರ್‌, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಕಾಲಾವಕಾಶ ತೆಗೆದುಕೊಂಡು ಸಮಸ್ಯೆ ಪರಿಹರಿಸುತ್ತೇನೆ ಎಂದರು. ತಾಪಂ ಸದಸ್ಯ ಸಾಲೆಕೊಪ್ಪ ರಾಮಚಂದ್ರ ಮಾತನಾಡಿ, ಮಂಗನ ಕಾಯಿಲೆ ವ್ಯಾಪಕವಾಗಿರುವ ಮಂಡಗದ್ದೆ ವ್ಯಾಪ್ತಿಯಲ್ಲಿ ಮೊಬೈಲ್‌ ವ್ಯಾನ್‌ ಮುಖಾಂತರ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಸೂಕ್ತ ಔಷಧ ವಿತರಣೆಯಾಗಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಮಂಗನ ಕಾಯಿಲೆಯ ಪರಿಣಾಮ ಇನ್ನಷ್ಟು ವ್ಯಾಪಿಸುತ್ತದೆ ಎಂದು ಎಚ್ಚರಿಸಿದರು. ಆರೋಗ್ಯಾಧಿಕಾರಿ ಡಾ| ಕಿರಣ್‌ ಮಾತನಾಡಿ, ಮಂಗನ ಕಾಯಿಲೆಗಾಗಿ ನೀಡುವ ಚುಚ್ಚು ಮದ್ದು ಹಾಗೂ ತೈಲ ಇಲಾಖೆಯಲ್ಲಿ ಸಂಗ್ರಹವಿದ್ದು ಗ್ರಾಪಂವಾರು ಸಾರ್ವಜನಿಕರಿಗೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು. ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ನವಮಣಿ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಯಶೋದ ಮಂಜುನಾಥ್‌, ತಾಪಂ ಅಧಿಕಾರಿ ಧನರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next