ಮದ್ದೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡದ ವೈದ್ಯರ ಕ್ರಮ ಖಂಡಿಸಿ ತಾಲೂಕಿನ ಕುದರಗುಂಡಿ ಗ್ರಾಮಸ್ಥರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಪಟ್ಟಣದ ಕೆ.ಗುರುಶಾಂತಪ್ಪ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ರಾತ್ರಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಕುದರಗುಂಡಿ ಗ್ರಾಮದ ದನುಶ್‌ಗೌಡರನ್ನು ಚಿಕಿತ್ಸೆಗೆಂದು ಕರೆ ತಂದು ವೈದ್ಯರಿಲ್ಲದ ಹಿನ್ನೆಲೆಯಲ್ಲಿ ಮೂರು ಗಂಟೆ ಕಳೆದರೂ ಚಿಕಿತ್ಸೆ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆಡಳಿತ ವೈದ್ಯಾಧಿಕಾರಿ ಮುರಳೀಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು ತುರ್ತು ಚಿಕಿತ್ಸೆಗೆಂದು ಆಗಮಿಸುವ ಗಾಯಾಳುಗಳನ್ನು ಉಪಚರಿಸದೆ ವಿಳಂಬ ನೀತಿ ಜತೆಗೆ ಮಂಡ್ಯ ಮತ್ತು ಬೆಂಗಳೂರು ಆಸ್ಪತ್ರೆಗಳಿಗೆ ರವಾನಿಸುತ್ತಿರುವ ಬಗ್ಗೆ ದೂರಿದರು.
ವಿವಿಧ ಸಂಘಟನೆಗಳೂ ಸೇರಿದಂತೆ ಸಾರ್ವಜನಿಕರು ಹಲವು ಬಾರಿ ಮೇಲಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ತವ್ಯದ ಮೇಲೆ ಹಾಜರಿರಬೇಕಾದ ಮೂರಕ್ಕೂ ಅಧಿಕ ವೈದ್ಯರು ರಾತ್ರಿ ಪಾಳಿಯಲ್ಲಿ ಆಸ್ಪತ್ರೆಯಲ್ಲಿರುವುದಿಲ್ಲ. ವಸತಿಗೃಹದಲ್ಲಿ ವಾಸವಿರದ ವೈದ್ಯರ ಕ್ರಮ ಖಂಡಿಸಿದರು.
ಪ್ರತಿಭಟನೆಯಲ್ಲಿ ಸತೀಶ್, ಅಪ್ಪಾಜಿಗೌಡ, ಭೈರೇಗೌಡ, ಶಿವು, ಚಂದ್ರು, ದಿಲೀಪ್, ಬೊಮ್ಮಯ್ಯ, ಕುಮಾರ್, ತಮ್ಮೇಗೌಡ, ರಾಮಕೃಷ್ಣ, ರಮೇಶ್ ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು.