Advertisement

ಸಂಘಟಿತ ಹೋರಾಟಕ್ಕೆ ಸಜ್ಜು

10:12 AM Dec 24, 2019 | Suhan S |

ಹುಬ್ಬಳ್ಳಿ: ಮಹದಾಯಿ ಹೋರಾಟಕ್ಕೆ ಪಕ್ಷದ ಬಣ್ಣ ಬಳಿಯುವುದು ಬೇಡ ಎಂದು ಸದಸ್ಯನಾಗಿದ್ದುಕೊಂಡು ಮಾರ್ಗದರ್ಶನ ನೀಡುತ್ತೇನೆ. ಒಂದು ವೇಳೆ ಸಮಿತಿ, ಹೋರಾಟಗಾರರು, ರೈತ ಮುಖಂಡರು ಒಕ್ಕೊರಲಿನಿಂದ ಒಪ್ಪಿದರೆ ಹೋರಾಟದ ನೇತೃತ್ವ ವಹಿಸಲು ಸಿದ್ಧ. ನೀರು ದೊರೆಯಬೇಕೆಂಬುದೇ ನಮ್ಮೆಲ್ಲರ ಗುರಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದವರಲ್ಲಿ ಒಬ್ಬರಿಗೆ ನೇತೃತ್ವ ನೀಡಿ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಸಲಹೆ ನೀಡಿದ್ದೇನೆ. ಒಂದು ವೇಳೆ ನೀವೇ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರೆ ನೇತೃತ್ವಕ್ಕೆ ಸಿದ್ಧ ಎಂದರು.

ನಾಯಕತ್ವ ವೈಫಲ್ಯ, ಸಂಘಟನೆ ಕೊರತೆ ಹೋರಾಟದ ವೈಫಲ್ಯಕ್ಕೆ ಕಾರಣ ಎಂಬುದು ಪ್ರತಿಯೊಬ್ಬರ ಅಭಿಪ್ರಾಯವಾಗಿದೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಪ್ರಮುಖರು ಸಂಚಾರ ಮಾಡಿ ಜಾಗೃತಿ ಮೂಡಿಸುವ ಕೆಲಸ ಆಗಲಿದೆ. ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಆಗಲಿದೆ. ಎಲ್ಲರೂ ಕೂಡಿಕೊಂಡು ಈ ಹೋರಾಟಕ್ಕೆ ಮುಂದಾಗುತ್ತಾರೆ ಎನ್ನುವ ಭರವಸೆಯಿದೆ ಎಂದು ಹೇಳಿದರು.

ಅಧಿವೇಶನದಲ್ಲಿ ಪ್ರಸ್ತಾಪ: ಜ. 20ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಈ ಕುರಿತು ಧ್ವನಿ ಎತ್ತಲಾಗುವುದು. ಈ ಭಾಗದ ಶಾಸಕರ ವಿಶ್ವಾಸ ಪಡೆದು ಹಲವು ವರ್ಷಗಳ ಬೇಡಿಕೆ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಪಕ್ಷಾತೀತವಾಗಿ ಅಧಿವೇಶದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.

ಶಿಕ್ಷಕರ ಹೋರಾಟದ ಮಾದರಿಯಲ್ಲಿ ಮುನ್ನಡೆಸಲಾಗುವುದು. ವಿನಾಕಾರಣ ಜನರಿಗೆ ತೊಂದರೆ ಕೊಡುವ ಬದಲು ರಾಜಕೀಯ ಒತ್ತಡ ಹಾಕುವಂತಹ ಹೋರಾಟಕ್ಕೆ ಮುಂದಾಗಬೇಕಾಗಿದೆ. ಇದಕ್ಕೆ ಪೂರಕವಾಗಿ ಇನ್ನೆರಡು ದಿನಗಳಲ್ಲಿರಚನೆಯಾಗುವ ಸಮಿತಿ ಹೋರಾಟದ ರೂಪುರೇಷೆ ತಯಾರಿಸಲಿದೆ. ಆ ಸಮಿತಿ ಕೈಗೊಂಡ ನಿರ್ಧಾರದಂತೆ ಮುಂದಿನ ಹೋರಾಟ ನಡೆಯಲಿವೆ. ಮಹದಾಯಿ ಯೋಜನೆ ಸಾಕಾರಗೊಳ್ಳಬೇಕು ಎಂಬುವುದು ಪ್ರಮುಖ ಉದ್ದೇಶವಾಗಿದೆ. ನಾವು ನಡೆಸುವ ಪ್ರತಿಭಟನೆ, ಹೋರಾಟ ಪಕ್ಷ, ವ್ಯಕ್ತಿಯ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ನಾಯಕತ್ವ ಹಪಾಹಪಿಯಿಂದ ನೆಲಕಚ್ಚಿದ ಹೋರಾಟ :  ಮಹದಾಯಿ ಹೋರಾಟದಲ್ಲಿ ನಾಯಕತ್ವದ ಹಪಾಹಪಿತನದಿಂದ ಹೋರಾಟ ನೆಲಕಚ್ಚಲು ಕಾರಣವಾಯಿತು. ವಿವಿಧ ವೇದಿಕೆಗಳಾಗಿ ಹಂಚಿಹೋದವು. ಕೆಲ ವೇದಿಕೆಗಳು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡ ಪರಿಣಾಮ ಜನರ ವಿಶ್ವಾಸ ಗಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ವಿಚಾರ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಮತ್ತದೇ ತಪ್ಪುಗಳಿಗೆ ಅವಕಾಶ ನೀಡದೆ ಸಮರ್ಥ ರೀತಿಯಲ್ಲಿ ಹೋರಾಟಕ್ಕೆ ನಿರ್ಧರಿಸಲಾಯಿತು.

ಗೋವಾ ರಸ್ತೆ ಬಂದ್‌ಗೆ ಒತ್ತಾಯ:  ಸಮುದ್ರ ಪಾಲಾಗುವ ನೀರಿಗೆ ಗೋವಾ ಸರಕಾರ ತಕರಾರು ತೆಗೆಯುವುದಾದರೆ ನಮ್ಮ ರಾಜ್ಯದಿಂದ ಅಲ್ಲಿಗೆ ಪೂರೈಕೆಯಾಗುವ ನಿತ್ಯದ ವಸ್ತುಗಳಿಗೆ ಕಡಿವಾಣ ಹಾಕುವುದು. ಹೋರಾಟದ ಹೆಸರಲ್ಲಿ ವಿನಾಕಾರಣ ದಿನ ದೂಡುವುದಕ್ಕಿಂತ ರಾಜಕೀಯ ಒತ್ತಡ ಹಾಕುವ ನಿಟ್ಟಿನಲ್ಲಿ ಹೋರಾಟಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಹೆಚ್ಚಿನ ಒತ್ತಾಯ ಕೇಳಿಬಂತು.

ಮುಖಂಡರೊಂದಿಗೆ ಹೊರಟ್ಟಿ ಸಂಭಾಷಣೆ:   ಮಹದಾಯಿ ಹೋರಾಟ ಮುಖಂಡರಾದ ವೀರೇಶ ಸೊಬರದಮಠ, ಲೋಕನಾಥ ಹೆಬಸೂರು, ಶಂಕರ ಅಂಬಲಿ ಅವರು ಸಭೆಗೆ ಆಗಮಿಸಿರಲಿಲ್ಲ. ಹೀಗಾಗಿ ಬಸವರಾಜ ಹೊರಟ್ಟಿ ಅವರು ಫೋನ್‌ ಮೂಲಕ ಅವರನ್ನು ಸಂಪರ್ಕಿಸಿ ಸಭೆ ಕುರಿತು ಮಾಹಿತಿ ನೀಡಿ ಇಲ್ಲಿ ಕೈಗೊಳ್ಳುವ ನಿರ್ಧಾರಗಳ ಕುರಿತು ಅವರ ಅಭಿಪ್ರಾಯ ಕೇಳಿದರು. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೈಗೊಂಡಿರುವ ಸಭೆಗೆ ಸಮ್ಮತಿ ಹಾಗೂ ಪ್ರತಿಯೊಂದು ನಿರ್ಧಾರಗಳಿಗೆ ಒಪ್ಪಿಗೆ ಇರುವುದಾಗಿ ಸೂಚಿಸಿದರು. ತಮ್ಮ ಸಂಘಟನೆ ಪ್ರಮುಖರು ಸಭೆಗೆ ಹಾಜರಾಗಿದ್ದು, ನಮ್ಮ ಭಾಗದ ಬೇಡಿಕೆ ಈಡೇರಿದರೆ ಸಾಕು ಎನ್ನುವ ಅಭಿಪ್ರಾಯ ಮುಖಂಡರಿಂದ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next