Advertisement

ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಸಜ್ಜು

12:26 PM Oct 10, 2018 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆ ಒತ್ತುವರಿ ಪತ್ತೆ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ತಿಂಗಳಲ್ಲಿ ತೆರವು ಕಾರ್ಯಾಚರಣೆಗೆ ಪಾಲಿಕೆ ಸಿದ್ಧತೆ ನಡೆಸುತ್ತಿದೆ. 10 ಭೂಮಾಪಕರು, 21 ಪ್ರದೇಶಗಳ 434 ಸರ್ವೆ ನಂಬರ್‌ಗಳಲ್ಲಿ ರಾಜಕಾಲುವೆ ಒತ್ತುವರಿ ಆಗಿರುವುದು ಪತ್ತೆ  ಹಚ್ಚಿ ಬಿಬಿಎಂಪಿಗೆ ವರದಿ ನೀಡಿದ್ದಾರೆ. ವರದಿ ಆಧಾರದ ಮೇಲೆ  ಬಿಬಿಎಂಪಿ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಆರಂಭಿಸಲಿದೆ.

Advertisement

ಮಳೆಗಾಲದಲ್ಲಿ ಪ್ರವಾಹ ಉಂಟಾಗುವುದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರುವು ಕಾರ್ಯಾಚರಣೆ ನಡೆಸುತ್ತಿತ್ತು. ಅದು ಭೂ ಮಾಪಕರ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತು. ಆದರೆ, ಕಳೆದ ಎರಡು ತಿಂಗಳ ಹಿಂದೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ.ಪರಮೇಶ್ವರ್‌ ಅವರು ರಾಜಕಾಲುವೆ ಒತ್ತುವರಿ ಕಾರ್ಯಾಚರಣೆಗೆ ಆದೇಶಿಸಿದ್ದರು. 

 ಈಗಾಗಲೇ ಗುರುತಿಸಿದ ಜಾಗದಲ್ಲಿ ನಿಖರ ಒತ್ತುವರಿಯನ್ನು ಮಾರ್ಕಿಂಗ್‌ ಮಾಡುವಂತೆಯೂ ಭೂಮಾಪಕರಿಗೆ ಬಿಬಿಎಂಪಿ ಸೂಚಿಸಿದೆ. ಭೂಮಾಪಕರು ನಿಖರ ಒತ್ತುವರಿ ಮಾರ್ಕಿಂಗ್‌ ಮಾಡಿದ ನಂತರ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಅದಕ್ಕಾಗಿ ಒತ್ತುವರಿ ಗುರುತಿಸಲು ನೇಮಿಸಲಾಗಿದ್ದ ಭೂಮಾಪಕರು ನೀಡಿದ ವರದಿಯನ್ನು ವಿಮರ್ಶಿಸಲಾಗುತ್ತಿದೆ.

434 ಸರ್ವೆ ನಂಬರ್‌ಗಳಲ್ಲಿ ಎಷ್ಟು ಆಸ್ತಿಗಳಿಂದ ಒತ್ತುವರಿಯಾಗಿವೆ. ಎಷ್ಟು ಪ್ರಮಾಣದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂಬುದನ್ನು ಮಾರ್ಕಿಂಗ್‌ ಮಾಡುವುದು ಬಾಕಿ ಉಳಿದಿದೆ. ತ್ವರಿತವಾಗಿ ಮಾರ್ಕಿಂಗ್‌ ಮಾಡುವಂತೆ ಭೂ ಮಾಪಕರಿಗೆ ಬಿಬಿಎಂಪಿ ಸೂಚನೆ  ನೀಡಿದ್ದು, ಮಾರ್ಕಿಂಗ್‌ ಪೂರ್ಣಗೊಂಡ ತಕ್ಷಣ ಬಿಬಿಎಂಪಿ ತೆರವು ಕಾರ್ಯಾಚರಣೆ ಆರಂಭಿಸಲಿದೆ.

ಈ ಹಿಂದೆ ಪಾಲಿಕೆ ಅಧಿಕಾರಿಗಳು 1,953 ಕಡೆಗಳಲ್ಲಿ ಒತ್ತುವರಿಯಾಗಿದೆ ಗುರುತಿಸಿಲಾಗಿತ್ತು. ಅವುಗಳಲ್ಲಿ ಈಗಾಗಲೇ 1,225 ಆಸ್ತಿಗಳಿಂದಾದ ಒತ್ತುವರಿ ತೆರವು ಮಾಡಲಾಗಿದೆ. ಉಳಿದ 728 ಆಸ್ತಿಗಳಿಂದಾಗಿರುವ ಒತ್ತುವರಿ ತೆರವು ಮಾಡುವುದು ಮಾತ್ರ ಬಾಕಿ ಇತ್ತು. ಈ ಬಾರಿ ಭೂಮಾಪಕರು ಮಾಡಿರುವ ಸರ್ವೆಯಿಂದ ಒತ್ತುವರಿ ಮಾಡಿಕೊಂಡಿರುವ ಆಸ್ತಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

Advertisement

ಕಾರ್ಯಾಚರಣೆಗೆ ತಂಡ ರಚನೆ: ಗುರುತಿಸಿದ ಜಾಗದಲ್ಲಿ ನಿಖರ ಒತ್ತುವರಿಯನ್ನು ಮಾರ್ಕಿಂಗ್‌ ಮಾಡಲು ಒಂದು ತಿಂಗಳ ಕಾಲಾವಕಾಶ ಬೇಕಾಗಲಿದ್ದು, ಮಾರ್ಕಿಂಗ್‌ ಮುಗಿದ ನಂತರ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಯಾವುದೇ ಒತ್ತಡಕ್ಕೂ ಮಣಿಯದೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡುವುದಕ್ಕೆ ಪಾಲಿಕೆ ನಿರ್ಧರಿಸಿದ್ದು, ಕಾರ್ಯಾಚರಣೆಗಾಗಿ ಆಯಾ ವಲಯದ ಜಂಟಿ ಆಯುಕ್ತರು ಹಾಗೂ ರಾಜಕಾಲುವೆ ಮುಖ್ಯ ಎಂಜಿನಿಯರ್‌ ನೇತೃತ್ವದಲ್ಲಿ ತಂಡಗಳನ್ನು ರಚಿಸಲು ನಿರ್ಧರಿಸಲಾಗುವುದು ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೂಚನೆಯಂತೆ ರಾಜಕಾಲುವೆ ಒತ್ತುವರಿಯನ್ನು ಗುರುತಿಸಲಾಗಿದೆ. ನಿಖರವಾಗಿ ಎಷ್ಟು ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡಿವೆ ಎಂಬುದರ ಬಗ್ಗೆ ಮಾರ್ಕಿಂಗ್‌ ಮಾಡಲು ಭೂಮಾಪಕರಿಗೆ ಸೂಚಿಸಲಾಗಿದೆ. ಕೆಲವರು ಒತ್ತುವರಿ ತೆರವು ಕಾರ್ಯಚರಣೆಯ ವಿರುದ್ಧ  ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆ ತೆರವು ಮಾಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು. 
-ಎಂ.ಶಿವರಾಜು, ಬಿಬಿಎಂಪಿ ಆಡಳಿತ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next