ಮಧ್ಯಪ್ರದೇಶ: 2020ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಯುವಕ ಜಾಮೀನಿನ ಮೇಲೆ ಬಿಡುಗಡೆಗೊಂಡ ಬೆನ್ನಲ್ಲೇ ಮತ್ತೆ ಅದೇ ಯುವತಿ ಮೇಲೆ ಅತ್ಯಾಚಾರ ಎಸಗಿ ಪ್ರಕರಣ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿರುವ ಘಟನೆ ಮಧ್ಯಪ್ರದೇಶದ ಜೈಪುರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಬಾಟಲಿ,ಕಲ್ಲಿನಿಂದ ಹೊಡೆದು ಕೊಂದ ಸ್ನೇಹಿತರು
ಈ ಮೊದಲು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಅತ್ಯಾಚಾರ ಪ್ರಕರಣದ ದೂರನ್ನು ವಾಪಸ್ ಪಡೆಯುವಂತೆ ಯುವತಿಗೆ ಬೆದರಿಕೆ ಹಾಕಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಆರೋಪಿ ಹಾಗೂ ಆತನ ಗೆಳೆಯ ಅತ್ಯಾಚಾರ ಎಸಗಿ ಜೀವ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಈಗ ಯುವತಿಗೆ 19 ವರ್ಷವಾಗಿದ್ದು, ಕಳೆದ ಎರಡು ವರ್ಷದ ಹಿಂದೆ ಅಪ್ರಾಪ್ತೆಯಾಗಿದ್ದ ಆಕೆ ಮೇಲೆ ವಿವೇಕ್ ಪಟೇಲ್ ಎಂಬಾತ ಅತ್ಯಾಚಾರ ಎಸಗಿದ್ದ ಎಂದು ಪೊಲೀಸ್ ಠಾಣಾಧಿಕಾರಿ ಅಸೀಫ್ ಇಕ್ಬಾಲ್ ತಿಳಿಸಿದ್ದಾರೆ.
2020ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ವಿವೇಕ್ ಪಟೇಲ್ ನನ್ನು ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಪಟೇಲ್, ತನ್ನ ಸ್ನೇಹಿತನ ಜತೆಗೂಡಿ ಆಕೆಯ ಮನೆಗೆ ತೆರಳಿ ಮತ್ತೆ ಅತ್ಯಾಚಾರ ಎಸಗಿದ್ದು, ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿ, ಈ ಹಿಂದೆ ನೀಡಿದ್ದ ದೂರನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮಾಡಿದ್ದು, ದೂರು ನೀಡಲು ವಿಳಂಬವಾಗಲು ಕಾರಣವಾಗಿದೆ ಎಂದು ಯುವತಿ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ನಡೆಸುತ್ತಿರುವುದಾಗಿ ಇಕ್ಬಾಲ್ ತಿಳಿಸಿದ್ದಾರೆ.